ವಿಜಯಪುರ, 23 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಭೀಮಾತೀರದಲ್ಲಿ ವರುಣನಾರ್ಭಟ ಜೋರಾಗಿದ್ದು, ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅರ್ಜುಣಗಿ ಬಿಕೆ ಗ್ರಾಮದಲ್ಲಿ ಸುತ್ತುವರಿದ ಹಳ್ಳದ ನೀರಿನಿಂದಾಗಿ ಬಡ ಕುಟುಂಬಗಳು ಸಾವು- ಬದುಕಿನ ನಡುವೆ ಹೋರಾಟ ನಡೆಸಿವೆ.
ಸತತ ಮಳೆಯಿಂದಾಗಿ ಅರ್ಜುಣಗಿಯ ಹಳ್ಳ ತುಂಬಿ ಹರಿಯುತ್ತಿದ್ದು, ಒಡ್ಡು ಒಡೆದು ಜಮೀನಿಗೆ ನೀರು ನುಗ್ಗಿದ ಪರಿಣಾಮ ತೋಟದ ವಸತಿಗಳೆಲ್ಲ ಜಲಾವೃತಗೊಂಡಿವೆ.
ಪರಿಣಾಮ ಗುಡಿಸಲು, ತಗಡಿನ ಶೆಡ್ ಗಳಲ್ಲೆಲ್ಲ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಮಕ್ಕಳು, ವೃದ್ದರು ಹಾಗೂ ಮಹಿಳೆಯರನ್ನು ರಕ್ಷಿಸಲಾಗಿದ್ದು ಗ್ರಾಮದ ನಿರ್ಮಾಣ ಹಂತದಲ್ಲಿರುವ ಸರ್ಕಾರಿ ಶಾಲೆ ಕಟ್ಟಡದಲ್ಲಿ ಆಶ್ರಯ ನೀಡಲಾಗಿದೆ.
ತೊಪ್ಪಗೆ ತೊಯ್ದ ಮಕ್ಕಳು, ಮಹಿಳೆಯರು ಹಾಗೂ ವೃದ್ದರು ಅವಡುಗಚ್ಚಿ, ಸುರುಳಿ ಸುತ್ತಿ, ಮೂಲೆಯಲ್ಲಿ ಮುದುಡಿ ಕುಳಿತಿದ್ದಾರೆ.
ದಿನಬಳಕೆ ಸಾಮಗ್ರಿ, ಆಹಾರ ಧಾನ್ಯಗಳು ಹಳ್ಳದ ನೀರಲ್ಲಿ ಕೊಚ್ಚಿ ಹೋಗಿವೆ. ಆಹಾರವಿಲ್ಲದೇ ಮಕ್ಕಳು ಮತ್ತು ಕಾಯಿಲೆಯಿಂದ ಬಳಲುತ್ತಿರುವ ವೃದ್ದರು ಜೀವ ಕೈಯಲ್ಲಿ ಹಿಡಿದು ಉಸಿರಾಡುತ್ತಿದ್ದಾರೆ.
ಗ್ರಾಮದಿಂದ 500 ಮೀಟರ್ ಅಂತರದಲ್ಲಿರುವ ಜಮೀನುಗಳಲ್ಲಿ ಒಟ್ಟು ಐದು ಕುಟುಂಬಗಳು ವಾಸವಾಗಿದ್ದು, ಸುಮಾರು 20 ಜನರಿದ್ದಾರೆ. ನಿರಂತರ ಮಳೆ ಹಿಂಡಿ ಬೆಳೆ ಹಾನಿಯನ್ನುಂಟು ಮಾಡಿದರೆ ಇದೀಗ ತುಂಬಿ ಹರಿಯುತ್ತಿರುವ ಹಳ್ಳ ಆಸರೆಗಿದ್ದ ಗುಡಿಸಲುಗಳನ್ನೂ ಆಪೋಷನ ತೆಗೆದುಕೊಂಡಿದೆ.
ಅವ್ವಣ್ಣ ಮಹಾದೇವಪ್ಪ ವಾಲೀಕಾರ, ಭೋಗಪ್ಪ ಮಹಾದೇವಪ್ಪ ವಾಲೀಕಾರ, ಬಾಗಮ್ಮ ಮಹಾದೇವಪ್ಪ ವಾಲೀಕಾರ, ಪರಶುರಾಮ ತಳವಾರ, ಭಾಗಣ್ಣ ಭೀಮಣ್ಣ ತಳವಾರ ಎಂಬುವರ ಕುಟುಂಬಗಳು ಸಂಕಷ್ಟದ ಸುಳಿಗೆ ಸಿಲುಕಿದ್ದು, ನೆರವಿಗಾಗಿ ಮೊರೆ ಇಡುತ್ತಿವೆ.
ಪ್ರತಿ ಬಾರಿ ಮಳೆ ಬಂದಾಗ ಇಂಥದ್ದೇ ಸಮಸ್ಯೆ ಎದುರಿಸುತ್ತಿರುವ ಈ ಬಡ ಕುಟುಂಬಗಳು ಪುನರ್ ವಸತಿಗಾಗಿ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಿಲ್ಲದಾಗಿದೆ.
ಈ ಹಿಂದೆ 2009 ರಲ್ಲಿ ಸ್ಥಳಾಂತರ ವ್ಯವಸ್ಥೆ ಕಲ್ಪಿಸಿದಾಗಲೂ ನಿಜವಾದ ಅಂತ್ರಸ್ಥರಾಗಿರುವ ಈ ಕುಟುಂಬಗಳಿಗೆ ಆಸರೆ ಸಿಕ್ಕಿಲ್ಲ. ಅರ್ಜುಣಗಿ ಕೆಡಿ ಗ್ರಾಮದಲ್ಲಿ ನಾಲ್ಕೈದು ಎಕರೆ ಜಮೀನು ಪಡೆದು ಅಂದಾಜು 120 ಮನೆ ನಿರ್ಮಿಸಿ ಹಂಚಿಕೆ ಮಾಡಿರುವ ಸರ್ಕಾರ ನಿಜವಾಗಿ ಬಾಧಿತಗೊಳ್ಳುವ ಈ ಕುಟುಂಬಗಳನ್ನು ನಿರ್ಲಕ್ಷಿಸಿದೆ. ಪರಿಣಾನ ಇದೀಗ ಸಂಕಷ್ಟಕ್ಕೆ ಸಿಲುಕುವ ಸ್ಥಿತಿ ಉಂಟಾಗಿದೆ ಎಂದು ನೊಂದ ಜೀವಗಳು ಮುಂದೆ ಅಲವತ್ತುಕೊಂಡಿವೆ.
ಹಿಂದೂಸ್ತಾನ್ ಸಮಾಚಾರ್ / jyothi deshpande