ವಿಜಯಪುರ, 22 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಂಡ ಮನೆ-ಮನೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯವನ್ನು ಜಿಲ್ಲೆಯಲ್ಲಿ ಇಂದಿನಿಂದ ಆರಂಭಿಸಲಾಗಿದ್ದು, ಸಮೀಕ್ಷಾ ಕಾರ್ಯಕ್ಕೆ ಜಿಲ್ಲಾಧಿಕಾರಿ ಡಾ.ಆನಂದ ಕೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಚಾಲನೆ ನೀಡಿದರು.
ಸೋಮವಾರ ನಗರದ ಕೀರ್ತಿನಗರದಲ್ಲಿ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿಗಳು, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22 ರಿಂದ ಅ.7ರವರೆಗೆ ಜಿಲ್ಲೆಯಲ್ಲಿ ಸಮೀಕ್ಷೆ ಕಾರ್ಯ ಕೈಗೊಳ್ಳಲಿದ್ದು, ಸಮೀಕ್ಷಾದಾರರು ತಮ್ಮ ಮನೆಗೆ ಭೇಟಿ ನೀಡಿ ಸುಮಾರು 60 ಪ್ರಶ್ನೆಗಳುಳ್ಳ ಮಾಹಿತಿಯನ್ನು ದಾಖಲಿಸಲಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬದ ಮುಖ್ಯಸ್ಥರು-ಸದಸ್ಯರ ಪಡಿತರ ಚೀಟಿ, ಆಧಾರ ಕಾರ್ಡ ಸಂಖ್ಯೆ, ವಿಕಲಚೇತನರಾಗಿದ್ದಲ್ಲಿ ಅಂಗವಿಕಲರ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಿದ್ದವಿಟ್ಟುಕೊಂಡು, ಸಮೀಕ್ಷಾದಾರಿಗೆ ಕುಟುಂಬದ ಪ್ರತಿ ಸದಸ್ಯರ ವಿದ್ಯಾರ್ಹತೆ, ಕೌಶಲ್ಯ ತರಬೇತಿ ಅಗತ್ಯತೆ, ಆದಾಯ, ಸ್ಥಿರ ಮತ್ತು ಚರಾಸ್ತಿ ವಿವರ, ಧರ್ಮ, ಜಾತಿ, ಉಪಜಾತಿ ಹಾಗೂ ಕುಲಕಸಬು ಸೇರಿದಂತೆ ಎಲ್ಲ ಪ್ರಶ್ನೆಗಳಿಗೆ ಕುಟುಂಬದ ಸಮಗ್ರ ಮಾಹಿತಿ ನೀಡುವ ಮೂಲಕ ಸಮೀಕ್ಷಾ ಕಾರ್ಯ ಯಶಸ್ವಿಗೊಳಿಸುವಂತೆ ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುಂಡಲೀಕ ಮಾನವರ, ಸಮೀಕ್ಷಾದಾರರು, ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande