ಮಂಡ್ಯ, 22 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿ ಬರೆಯಿಸುವ ಜಾತಿ ಸಮೀಕ್ಷೆ ಅಧಿಕೃತವಲ್ಲ. ಇದು ಜಾತಿಗಳನ್ನು ಒಡೆಯುವ ಸಮೀಕ್ಷೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಜಾತಿ ಸಮೀಕ್ಷೆಯಲ್ಲಿ ಮತಾಂತರಕ್ಕೆ ಪ್ರೋತ್ಸಾಹ ನೀಡಲಾಗಿದೆ. ಮತಾಂತರ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆ ಸೃಷ್ಟಿಸಿದ್ದಾರೆ. ಒಕ್ಕಲಿಗ, ದಲಿತ, ವಿಶ್ವಕರ್ಮರನ್ನು ಕ್ರೈಸ್ತ ಧರ್ಮಕ್ಕೆ ಸೇರಿಸಲು 52 ಹೊಸ ಜಾತಿಗಳನ್ನು ಸೃಷ್ಟಿ ಮಾಡಲಾಗಿದೆ. ತಮಗೆ ಬೇಕಾದ ಜಾತಿಗಳ ಸಂಖ್ಯೆಯನ್ನು ಕಡಿಮೆ ಅಥವಾ ಹೆಚ್ಚು ಎಂದು ತೋರಿಸಬಹುದು. ಮುಸ್ಲಿಮರು ಹಾಗೂ ಕ್ರೈಸ್ತರಲ್ಲಿ ಅನೇಕ ಜಾತಿಗಳಿದ್ದು, ಅದನ್ನು ಬಹಿರಂಗ ಮಾಡುತ್ತಿಲ್ಲ. ಆದರೆ ಹಿಂದೂಗಳಲ್ಲಿ ತಾರತಮ್ಯ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಮಸೀದಿಗಳಿಗೆ ಮಹಿಳೆಯರಿಗೆ ಪ್ರವೇಶವಿಲ್ಲ, ಮಹಿಳೆಯರಿಗೆ ಬುರ್ಕಾ ಧರಿಸಬೇಕು. ಹೀಗೆ ಎಲ್ಲ ಧರ್ಮಗಳಲ್ಲಿ ತಾರತಮ್ಯ ಇದೆ ಎಂದರು.
ರಾಜ್ಯದಲ್ಲಿ ಲಿಂಗಾಯತರ ಸಂಖ್ಯೆ ಅತ್ಯಧಿಕ, ನಂತರ ಒಕ್ಕಲಿಗರ ಸಂಖ್ಯೆ ಇದೆ. ಸಿಎಂ ಸಿದ್ದರಾಮಯ್ಯ ಈ ಪ್ರಮಾಣವನ್ನೇ ಬದಲಿಸಲು ಮುಂದಾಗಿದ್ದಾರೆ. ಒಕ್ಕಲಿಗ ಸಮುದಾಯವನ್ನೇ ಒಡೆಯುತ್ತಿದ್ದಾರೆ. ಹೊಸ ಜಾತಿಗಳನ್ನು ಹುಟ್ಟುಹಾಕಿದ್ದಾರೆ ಎಂದರು.
ಹದಿನೈದು ದಿನಗಳಲ್ಲಿ ಸಮೀಕ್ಷೆ ಮಾಡಲು ಆಗಲ್ಲ. ದಸರಾ ಇರುವುದರಿಂದ ಜನರು ಪ್ರವಾಸ ಮಾಡುತ್ತಾರೆ. ಆದ್ದರಿಂದ ಇದನ್ನು ಮುಂದೂಡಬೇಕು. ಅಲ್ಲದೆ ಕೇಂದ್ರ ಸರ್ಕಾರ ಈಗಾಗಲೇ ಗಣತಿಗೆ ಸಿದ್ಧತೆ ಮಾಡಿಕೊಂಡಿದೆ. ರಾಜ್ಯ ಸರ್ಕಾರಕ್ಕೆ ಗಣತಿ ನಡೆಸುವ ಅಧಿಕಾರವಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಿಎಸ್ ಟಿ ಇಳಿಕೆ ಮಾಡಿ ಜನರಿಗೆ ಅನುಕೂಲ ಕಲ್ಪಿಸಿದೆ. ಬೆಣ್ಣೆ, ತುಪ್ಪ ಸೇರಿದಂತೆ ದಿನಬಳಕೆ ಸಾಮಗ್ರಿಗಳ ತೆರಿಗೆ 5% ಗೆ ಇಳಿದಿದೆ. ಯುಪಿಎ ಸರ್ಕಾರದಲ್ಲಿ ಸಿಮೆಂಟ್, ಟಿವಿ, ವಾಷಿಂಗ್ ಮಶಿನ್, ಪ್ರಿಡ್ಜ್ ಗೆ 30% ತೆರಿಗೆ ಇದ್ದು, ಈಗ 18% ಕ್ಕೆ ಬಂದಿದೆ. ರೆಸ್ಟೋರೆಂಟ್ ಗಳಿಗೆ 21% ಇದ್ದ ತೆರಿಗೆ 5% ಕ್ಕೆ ಬಂದಿದೆ. ರಸಗೊಬ್ಬರ ಯೂರಿಯಾಗೆ 18% ಇದ್ದು, ಅದೀಗ 5% ಕ್ಕೆ ಇಳಿದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದಿಂದಾಗಿ ತೆರಿಗೆ ಭಾರ ಹೆಚ್ಚಿದ್ದು, ಅದನ್ನು ಮೋದಿ ಸರ್ಕಾರ ಕಡಿಮೆ ಮಾಡಿದೆ. ಇದು ಬಡವರಿಗೆ ಒಳ್ಳೆಯ ಸುದ್ದಿ ಎಂದರು.
ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರು ಇದರಲ್ಲೂ ತಪ್ಪು ಹುಡುಕುತ್ತಿದ್ದಾರೆ. ಜನರಿಗೆ ತೆರಿಗೆ ಇಳಿಸಿದರೆ ನಷ್ಟ ಹೇಗಾಗುತ್ತದೆ ಎಂದು ಅವರೇ ತಿಳಿಸಬೇಕು. ಈ ಸರ್ಕಾರ 25 ಸರಕು, ಸೇವೆಗಳ ದರ ಏರಿಕೆ ಮಾಡಿದೆ. ಹಾಲು, ನೀರು, ವಾಹನ ನೋಂದಣಿ, ಸ್ಟಾಂಪ್ ಡ್ಯೂಟಿ, ಹೀಗೆ ಗಬ್ಬರ್ ಸಿಂಗ್ ಟ್ಯಾಕ್ಸ್ ಹಾಕಲಾಗಿದೆ. ಗ್ಯಾರಂಟಿಗಳಿಗೆ ಹಣ ಹೊಂದಿಸಲು 65,000 ಕೋಟಿ ರೂ. ಹೆಚ್ಚುವರಿ ತೆರಿಗೆ ಸುಲಿಗೆ ಮಾಡಲಾಗುತ್ತಿದೆ. ಸರ್ಕಾರದಲ್ಲಿ ಹಣವೇ ಇಲ್ಲದೆ ಸಣ್ಣ ವರ್ತಕರ ಮೇಲೆ ಜಿಎಸ್ ಟಿ ಹೇರಲಾಗಿತ್ತು. ಆಗ ಇದನ್ನು ಕೇಂದ್ರ ಸರ್ಕಾರ ಮಾಡಿದ್ದು ಎಂದು ಸುಳ್ಳು ಆರೋಪ ಮಾಡಲಾಗಿತ್ತು. ಈ ಸರ್ಕಾರಕ್ಕೆ ಮರ್ಯಾದೆ ಇದ್ದಿದ್ದರೆ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿ ತೆರಿಗೆಗಳನ್ನು ಇಳಿಸಬೇಕಿತ್ತು. ತೆರಿಗೆ ಇಳಿಕೆಯಲ್ಲಿ ಸ್ಪರ್ಧೆ ಬರಲಿ ಎಂದರು.
ಮಂಗಳೂರು ಜೀವನ ಗುಣಮಟ್ಟದಲ್ಲಿ, ಶಿಕ್ಷಣದಲ್ಲಿ ಮುಂಚೂಣಿಯಲ್ಲಿದೆ. ಅದೇ ರೀತಿ ಮಂಡ್ಯ ಕೂಡ ಬೆಳೆಯಬೇಕು. ಮಂಡ್ಯದಲ್ಲಿ ಧರ್ಮ ಗಲಭೆಯನ್ನು ನಾವು ಮಾಡುತ್ತಿಲ್ಲ, ಕಾಂಗ್ರೆಸ್ ನಾಯಕರು ಹಾಗೂ ಮತಾಂಧರು ಮಾಡುತ್ತಿದ್ದಾರೆ. ಕೇರಳದ ಮತಾಂಧರು ಇಲ್ಲೂ ಪ್ರಭಾವ ಬೀರುತ್ತಿದ್ದಾರೆ. ಈದ್ ಮಿಲಾದ್ ಮೆರವಣಿಗೆಗೆ ಯಾರೂ ಕಲ್ಲು ತೂರಿಲ್ಲ ಆದರೆ ಗಣೇಶ ಮೆರವಣಿಗೆಗೆ ಮಾತ್ರ ಕಲ್ಲು ತೂರಾಟವಾಗುತ್ತಿದೆ. ಹಿಂದೂಗಳು ಎಲ್ಲೂ ಗಲಭೆ ಮಾಡಿಲ್ಲ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa