ಬಳ್ಳಾರಿ, 22 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜನಗಣತಿಯಲ್ಲಿ ವೀರಶೈವ ಲಿಂಗಾಯಿತರು ಹಿಂದೂ ಧರ್ಮ, ವೀರೈಶವ - ಲಿಂಗಾಯಿತ ಜಾತಿ ಮತ್ತು ತಮ್ಮ ತಮ್ಮ ಉಪ ಪಂಗಡವನ್ನು ನಮೂದು ಮಾಡಬೇಕು ಎಂದು ಬಳ್ಳಾರಿ ನಗರದ ವೀರಶೈವ ಲಿಂಗಾಯಿತ ಮುಖಂಡರು ಕರೆ ನೀಡಿದ್ದಾರೆ.
ಪತ್ರಿಕಾಭವನದಲ್ಲಿ ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಬಳ್ಳಾರಿಯ ವೀರಶೈವ ಲಿಂಗಾಯಿತ ಮುಖಂಡರಾದ ಕೆ.ಎಂ. ಮಹೇಶ್ವರಸ್ವಾಮಿ, ಪಲ್ಲೇದ ಪೊಂಪಾಪತಿ, ದರೂರು ಪುರುಷೋತ್ತಮಗೌಡ, ನಿವೃತ್ತ ಅಧಿಕಾರಿ ಷಡಕ್ಷರಯ್ಯ, ಗೋನಾಳು ರಾಜಶೇಖರಗೌಡ, ಸೋಮಲಿಂಗನಗೌಡ, ಬಿ.ಎಸ್. ಪ್ರಭಯ್ಯ, ಕೆ.ಎಂ. ಕೊಟ್ರೇಶ್, ನಿವೃತ್ತ ಶಿಕ್ಷಕ ರುದ್ರಯ್ಯ, ಎಸ್. ಚಂದ್ರಮೌಳಿ, ಎಚ್.ಕೆ. ಗೌರಿಶಂಕರ, ಬಂಡೇಗೌಡ, ತಿಪ್ಪೇರುದ್ರಪ್ಪ, ನಾಗರಾಜ್ ಹಾಗೂ ಇನ್ನಿತರರು, ಹಿಂದೂ ಧರ್ಮ ಎಂದು ಬರೆಸುವುದರಲ್ಲಿ ಯಾವುದೇ ಗೊಂದಲ ಬೇಡ. ಅಸ್ತಿತ್ವದಲ್ಲಿ ಇಲ್ಲದ ವೀರಶೈವ ಮತ್ತು ಲಿಂಗಾಯಿತ ಧರ್ಮಗಳನ್ನು ಬರೆಸುವುದರಿಂದ ಯಾವುದೇ ಅರ್ಥವಿಲ್ಲ. ಕಾರಣ ಪ್ರತಿಯೊಬ್ಬರೂ ಹಿಂದೂ ಧರ್ಮ ಎಂದು ದಾಖಲಿಸಬೇಕು ಎಂದು ಮನವಿ ಮಾಡಿದರು.
ಧರ್ಮಗಳ ಪಟ್ಟಿಯಲ್ಲಿ ಗುರುತಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಕೇಂದ್ರ ಸರ್ಕಾರ ನಡೆಸುವ ಜಾತಿ ಗಣತಿಯ ಸಂದರ್ಭದಲ್ಲಿ ವೀರಶೈವ ಮತ್ತು ಲಿಂಗಾಯಿತ ಧರ್ಮವನ್ನು ದಾಖಲಿಸುವ ಪ್ರಯತ್ನ ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಮಾಜದ ಮುಖಂಡರು ನಡೆಸಿದ್ದಾರೆ. ಕರ್ನಾಟಕ ಸರ್ಕಾರಕ್ಕಾಗಲೀ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಾಗಲೀ ಯಾವುದೇ ಧರ್ಮವನ್ನು ಸೇರಿಸುವ - ತೆಗೆದುಹಾಕುವ ಅಧಿಕಾರವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಗತ್ಯವೇ ಇಲ್ಲದ ಈ ಸಮೀಕ್ಷೆಯನ್ನು ಕೈಗೊಂಡು ವಿವಾದವನ್ನು ಸೃಷ್ಟಿಸುತ್ತಿರುವುದು ಗೊಂದಲಗಳಿಗೆ ಕಾರಣವಾಗಿದೆ ಎಂದರು.
ಕುಡತಿನಿಯ ಪಲ್ಲೇದ ಪೊಂಪಾಪತಪ್ಪ ಅವರು, ಬಸವಣ್ಣನವರ ವಚನಗಳನ್ನು ಪ್ರಸ್ತುತಪಡಿಸಿ, ಬಸವಣ್ಣನವರು ಎಂದಿಗೂ ವೀರಶೈವ ವಿರೋಧಿ ಆಗಿರಲಿಲ್ಲ. ಲಿಂಗಾಯಿತ ಪ್ರತ್ಯೇಕ ಧರ್ಮದ ಪ್ರತಿಪಾದಕರೂ ಆಗಿರಲಿಲ್ಲ. ಸಮಾಜದಲ್ಲಿ ಅನಗತ್ಯವಾಗಿ ಒಗ್ಗಟ್ಟನ್ನು ಒಡೆಯಲು - ವಿವಾದಗಳನ್ನು ಸೃಷ್ಟಿಸಲು ಮತ್ತು ಗೊಂದಲಗಳನ್ನು ಮೂಡಿಸಲು ಕುತಂತ್ರಗಳು - ಷಡ್ಯಂತ್ರಗಳು ನಡೆದಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್