ಕೋಲಾರ, ೨೨ ಸೆಪ್ಟೆಂಬರ್(ಹಿ.ಸ) :
ಆ್ಯಂಕರ್ : ಮೂರು ವರ್ಷಗಳಿಂದ ಬಾಕಿ ಇರುವ ಕಟ್ಟಡ ಕಾರ್ಮಿಕ ಮಕ್ಕಳ ಶೈಕ್ಷಣಿಕ ಸಹಾಯಧನವನ್ನು ಹೈಕೋರ್ಟ್ ಆದೇಶದಂತೆ ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಕೋಲಾರ ಜಿಲ್ಲಾ ಸಮಿತಿ ವತಿಯಿಂದ ಕೋಲಾರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕಟ್ಟಡ ಕಾರ್ಮಿಕರ ಮಕ್ಕಳು ಕಳೆದ ಮೂರು ವರ್ಷಗಳಿಂದ ಸಲ್ಲಿಸಿದ್ದ ಶೈಕ್ಷಣಿಕ ಸಹಾಯಧನದ ಅರ್ಜಿಗಳಿಗೆ ಸಹಾಯಧನ ಮಂಜೂರು ಆಗಿಲ್ಲ. ಇದರಿಂದ ಕಟ್ಟಡ ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸ ಮುಂದುವರೆಸುವುದು ಕಷ್ಠಕರವಾಗಿದೆ. ಈ ಬಗ್ಗೆ ನಮ್ಮ ಸಂಘದ ವತಿಯಿಂದ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು ತಕ್ಷಣ ಬಾಕಿ ಇರುವ ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡಬೇಕೆಂದು ತೀರ್ಪು ನೀಡಿದ್ದಾರೆ. ಅಲ್ಲದೇ ವಿದ್ಯಾರ್ಥಿ ವೇತನವನ್ನು ಕಡಿಮೆ ಮಾಡಿರುವುದನ್ನು ವಾಪಸು ಪಡೆದು, ಈ ಹಿಂದೆ ೨೦೨೧ ರ ಆದೇಶದಂತೆ ನೀಡಬೇಕೆಂದು ತೀರ್ಪು ನೀಡಿದೆ. ಇದರಂತೆ ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡಬೇಕೆಂದು ಜಿಲ್ಲಾಧ್ಯಕ್ಷ ಪಿ.ಶ್ರಿನಿವಾಸ್ರವರು ಆಗ್ರಹಿಸಿದರು.
ಮಂಡಳಿಯಲ್ಲಿರುವ ಹಣವನ್ನು ಕಾರ್ಮಿಕ ಮತ್ತು ಅವರ ಕುಟುಂಬದ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ರೂಪಿಸಿ, ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಪಾವತಿ ಮಾಡಬೇಕೆಂದು ಕೇಂದ್ರ ಸರ್ಕಾರದ ಕಟ್ಟಡ ಕಾರ್ಮಿಕ ಕಾಯ್ದೆಯು ಸ್ಪಷ್ಟವಾಗಿ ಹೇಳಿದೆ. ಈ ಕಾಯ್ದೆಗಳನ್ನು ಉಲ್ಲಂಘಿಸಿ ಕಳಪೆ ಟೂಲ್ ಕಿಟ್ಗಳು, ಸುರಕ್ಷಾ ಕಿಟ್ಗಳು, ಸಂಚಾರಿ ಆರೋಗ್ಯ ತಪಾಸಣಾ ಶಿಬಿರಗಳು, ಅಂಬ್ಯೂಲೆನ್ಸ್ಗಳು, ವಸತಿ ಶಾಲೆ ಸ್ಥಾಪನೆ, ಕೌಶಲ್ಯ ತರಬೇತಿ ಕೇಂದ್ರ ಮತ್ತಿತರರ ಯೋಜನೆಗಳ ಮೂಲಕ ಸಾವಿರಾರು ಕೋಟಿ ರೂ.ಗಳನ್ನು ಹಗಲು ದರೋಡೆ ಮಾಡಲಾಗುತ್ತಿದೆ. ಈ ಯೋಜನೆಗಳಲ್ಲಿ ವ್ಯಾಪಕವಾದ ಭ್ರಷ್ಠಾಚಾರ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಮೌನವಾಗಿರುವುದು ಖಂಡನೀಯ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯದರ್ಶಿ ಎಂ.ಭೀಮರಾಜ್ರವರು ಮಾತನಾಡಿ ಕೆಲಸದ ಸ್ಥಳಗಳಲ್ಲಿ ಕಟ್ಟಡ ಕಾರ್ಮಿಕರಿಗೆ ಸುರಕ್ಷತೆ, ಶುದ್ದ ಕುಡಿಯುವ ನೀರು, ಶೌಚಾಲಯ, ಪ್ರಥಮ ಚಿಕಿತ್ಸೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು, ಈ ಬಗ್ಗೆ ಕಾರ್ಮಿಕ ಅಧಿಕಾರಿಗಳ ಖದ್ದು ಭೇಟಿ ನೀಡಿ ಪರಿಶೀಲಿಸಬೇಕು ಎಂದರಲ್ಲದೇ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಖಾಸಗಿ ಕಟ್ಟಡಗಳಿಂದ ಕಲ್ಯಾಣ ಮಂಡಳಿಯ ಸೆಸ್ ಹಣವನ್ನು ಸಂಗ್ರಹ ಮಾಡಲು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆಯನ್ನು ಆಗಿಂದಾಗ್ಗೆ ನಡೆಸಿ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಮಾತನಾಡಿ ಪಿಂಚಣಿಗೆ ಸಲ್ಲಿಸಿದ್ದ ಅರ್ಜಿಗಳಲ್ಲಿ ಸಣ್ಣ ತಪ್ಪುಗಳು ಇದ್ದರೆ ಸರಿಪಡಿಸಲು ಅವಕಾಶ ನೀಡದೇ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿರುವುದು ಸರಿಯಲ್ಲ. ಪಿಂಚಣಿಗೆ ಸಲ್ಲಿಸಿರುವ ಅರ್ಜಿಗಳಲ್ಲಿ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡಿನಲ್ಲಿರುವ ವಯಸ್ಸಿನ ವ್ಯತ್ಯಾಸ ಕುರಿತು ಇರುವ ಸಮಸ್ಯೆಗಳನ್ನು ಸರಿಪಡಿಸಬೇಕು, ಪಿಂಚಣಿಯನ್ನು ೫ ಸಾವಿರಕ್ಕೂ, ಕುಟುಂಬ ಪಿಂಚಣಿಯನ್ನು ೩೦೦೦ಕ್ಕೂ ಏರಿಕೆ ಮಾಡಬೇಕು, ಪಿಂಚಣಿದಾರರಿಗೆ ವೈದ್ಯಕೀಯ ಸೌಲಭ್ಯವನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಮಂಜುನಾಥ್, ಮುಖಂಡರಾದ ರಾಮಚಂದ್ರಪ್ಪ, ಹೊಗರಿ ನಾಗರಾಜಪ್ಪ, ವಿಶ್ವನಾಥ್, ಪೆರುಮಾಳಪ್ಪ, ನಾರಾಯಣಸ್ವಾಮಿ, ನಾಗಮಣಿ, ಆರೋಗ್ಯನಾಥನ್, ಆಂಜಿನಪ್ಪ, ಬಾರಾಂಡಹಳ್ಳಿ ವಿಜಯಕುಮಾರ್, ಕೋಡಿಕಣ್ಣೂರು ನಾರಾಯಣಸ್ವಾಮಿ, ಶಾರದ ಮತ್ತಿತರರು ಭಾಗವಹಿಸಿದ್ದರು.
ಚಿತ್ರ : ಮೂರು ವರ್ಷಗಳಿಂದ ಬಾಕಿ ಇರುವ ಕಟ್ಟಡ ಕಾರ್ಮಿಕ ಮಕ್ಕಳ ಶೈಕ್ಷಣಿಕ ಸಹಾಯಧನವನ್ನು ಹೈಕೋರ್ಟ್ ಆದೇಶದಂತೆ ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಕೋಲಾರ ಜಿಲ್ಲಾ ಸಮಿತಿ ವತಿಯಿಂದ ಕೋಲಾರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್