ವಿಜಯಪುರ, 22 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರೈತರು ಕೃಷಿ ಆಧಾರಿತ ವ್ಯವಸ್ಥೆಯಲ್ಲಿ ಲಾಭ ಗಳಿಸಿ, ಆರ್ಥಿಕವಾಗಿ ಸುಭದ್ರವಾಗಬೇಕಿದೆ. ಆದರೆ ತೋಟಗಾರಿಕೆ ಬೆಳೆಯಲ್ಲಿ ಏಕ ಬೆಳೆಯಾಗಿ ದ್ರಾಕ್ಷಿ ಬೆಳೆಯದೇ ಮಿಶ್ರ ಬೆಳೆ ಹಾಗೂ ಸಮಗ್ರ ಕೃಷಿಯಲ್ಲಿ ಮಾಡಿದಲ್ಲಿ ಯಶಸ್ಸು ಸಾಧ್ಯ ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ್ ಸಲಹೆ ನೀಡಿದರು.
ತಿಕೋಟಾ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದಿಂದ ಹಮ್ಮಿಕೊಂಡಿದ್ದ ದ್ರಾಕ್ಷಿ ಬೆಳೆಗಾರರ ರಾಷ್ಟ್ರೀಯ ವಿಚಾರ ಸಂಕಿರಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ದ್ರಾಕ್ಷಿ ಬೆಳೆಗಾರರು ಪ್ರಸಕ್ತ ವರ್ಷ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರತಿ ಕೆಜಿ ಒಣದ್ರಾಕ್ಷಿಗೆ 4-5 ನೂರು ದರ ಪಡೆದು ಸಂತಸದಲ್ಲೀರಿ. ಆದರೆ ಈಗ ದರ ಇಳಿಮುಖವಾಗಿದ್ದು, ಮತ್ತೆ 100-150 ರೂ. ಗೆ ಕುಸಿಯುವ ಭೀತಿ ಎದುರಾಗಿದೆ. ಹೀಗಾಗಿ ದ್ರಾಕ್ಷಿ ಬೆಳೆಯುವುದು ಅಂದುಕೊಂಡಷ್ಟು ಸುಲಭವಲ್ಲ ಎಂದು ವಿವರಿಸಿದರು.
ತೋಟಗಾರಿಕೆ ಬೆಳೆಯಲ್ಲಿ ದ್ರಾಕ್ಷಿ ಮಾತ್ರವಲ್ಲದೆ ಸಪೋಟಾ, ಡ್ರ್ಯಾಗನ್ ಫ್ರೂಟ್, ಪೇರಲದಂತ ಮಿಶ್ತ ಬೆಳೆ ಬೆಳೆಯಬೇಕು. ಇದರಿಂದ ರೈತರು ಯಾವುದೇ ಒಂದು ಬೆಳೆಗೆ ಬೆಲೆ ಕುಸಿತ ಸೇರಿದಂತೆ ಇತರೆ ಸಮಸ್ಯೆ ಎದುರಾದರೂ ಇನ್ನೊಂದು ಬೆಳೆಯಿಂದ ಲಾಭ ಗಳಿಸಲು ಸಾಧ್ಯವಿದೆ ಎಂದರು.
ತೋಟಗಾರಿಕೆ ಬೆಳೆಗಾರರು ನೀರಿನ ಮಿತ ಬಳಕೆ ಜೊತೆಗೆ ಮಾರುಕಟ್ಟೆಗೆ ತಕ್ಕಂತೆ ವೈಜ್ಞಾನಿಕ ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ರೈತರು ಬೆಳೆಯುವ ದ್ರಾಕ್ಷಿ ಸೇರಿದಂತೆ ಇತರೆ ಯಾವುದೇ ಬೆಳೆಗೆ ಅವೈಜ್ಞಾನಿಕ ರೀತಿಯಲ್ಲಿ ಕ್ರಿಮಿನಾಶಕ ಹಾಗೂ ರೋಗ ನಾಶಕ ಬಳಸದೇ ಸುಧಾರಿತ ತಂತ್ರಜ್ಞಾನದಿಂದ ಕೃಷಿ ಮಾಡಬೇಕು. ಮಿತ ನೀರಿನಲ್ಲಿ ಅಧಿಕ ಇಳುವರಿ ನೀಡುವ ಹಾಗೂ ಮಾರುಕಟ್ಟೆ ಸ್ಥಿರತೆ ಇರುವಂತೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಬೇಕು ಎಂದು ಸಲಹೆ ನೀಡಿದರು.
ತಿಕೋಟಾ ವಿರಕ್ತ ಮಠದ ಚನ್ನಮಲ್ಲಿಕಾರ್ಜುನ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಚಿವರಾದ ಎಂ.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಮೇಶ ಜಿಗಜಿಣಗಿ, ಅಥಣಿ ಶಾಸಕರಾದ ಲಕ್ಷ್ಮಣ ಸವದಿ, ಸಂಗಮೇಶ ಬಬಲೇಶ್ವರ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ, ದ್ರಾಕ್ಷಿ ಬೆಳೆಯುವ ಪ್ರಗತಿಪರ ರೈತರಾದ ಎಂ.ಎಸ್. ರುದ್ರಗೌಡರ, ಎಸ್.ಎಚ್. ನಾಡಗೌಡ, ಎ.ಎಂ.ಪಾಟೀಲ, ಆರ್.ಜಿ. ಯರಗಲ್, ಜಗದೀಶ ಪಾಟೀಲ, ಸಂಘಟನೆಯ ಪ್ರಮುಖರಾದ ಯಾಖೂಬ್ ಜತ್ತಿ, ಮಲ್ಲಿಕಾರ್ಜುನ ಲೋಣಿ, ಭರತೇಶ ಜಮಖಂಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸತೀಶ ಮಾಳಿ, ಸುಧಾಮ ಮಾಳಿ, ಗಗನ ಅಗರವಾಲ, ಪಂಜಾಬರಾವ್ ಮಾನೆ ಪಾಟೀಲ, ಭೂಪಾಲ ಪಾಟೀಲ, ಕುಮಾರಗೌಡ ಬಿರಾದಾರ ಸೇರಿದಂತೆ ಇತರೆ ದ್ರಾಕ್ಷಿ ಬೆಳೆಗಾರರನ್ನು ಸನ್ಮಾನಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande