ವಿಜಯಪುರ, 22 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಕೆಲವು ತಾಲೂಕಿನಲ್ಲಿ ರೈತರ ಬೆಳೆ ಹಾನಿಯಾಗಿದ್ದು, ಅತಿವೃಷ್ಟಿಯಿಂದಾಗಿ ಬೆಳೆ ಹಾನಿ ಕುರಿತು ಕೈಗೊಂಡ ಜಂಟಿ ಸಮೀಕ್ಷೆಯಲ್ಲಿ ಯಾವುದೇ ಅರ್ಹ ರೈತರ ಜಮೀನು ಕೈಬಿಟ್ಟು ಹೋಗದಂತೆ ನಿಗಾವಹಿಸಿ ಸರ್ಮಪಕ ಸಮೀಕ್ಷೆ ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸೂಚಿಸಿದರು.
ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಬೆಳೆ ಹಾನಿ ಸಮೀಕ್ಷೆಯಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸಬಾರದು. ನಿಮ್ಮ ಹಂತದಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿಕೊಂಡು ಸಮೀಕ್ಷೆ ಕಾರ್ಯ ಕೈಗೊಳ್ಳಬೇಕು. ತಹಶೀಲ್ದಾರರು ಖುದ್ದಾಗಿ ನಿಗಾ ವಹಿಸಬೇಕು. ಅತಿವೃಷ್ಟಿಯಿಂದ ಬೆಳೆ ಹಾನಿಯಾದ ರೈತರಿಗೆ ನ್ಯಾಯಯುತ ಪರಿಹಾರ ಒದಗಿಸಲು ಕ್ರಮ ವಹಿಸಬೇಕು ಎಂದು ಅವರು ಸೂಚನೆ ನೀಡಿದರು.
ಸಮಗ್ರ ಹಾಗೂ ಸಂಪೂರ್ಣ ಸಮೀಕ್ಷಾ ವರದಿ ಸಿದ್ಧಪಡಿಸಬೇಕು. ಸಿದ್ಧಪಡಿಸಿದ ಸಮೀಕ್ಷೆ ಮಾಹಿತಿಯನ್ನು ಆಯಾ ಗ್ರಾಮ ಮಟ್ಟದಲ್ಲಿ ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ರೈತರ ಅವಗಾಹನೆಗಾಗಿ ಪ್ರಚುರಪಡಿಸಿ, ಆಕ್ಷೇಪಣೆಗಳನ್ನು ಸಲ್ಲಿಸಲು ರೈತರಿಗೆ ಕಾಲಾವಕಾಶ ನೀಡಿ, ಸ್ವೀಕೃತವಾದ ಆಕ್ಷೇಪಣೆಗಳನ್ನು ಪುನರ್‍ಪರಿಶೀಲಿಸಿ, ಯಾವುದೇ ಅರ್ಹ ರೈತರ ಜಮೀನು ಸಮೀಕ್ಷೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಈ ಸಮೀಕ್ಷೆಯ ಪೂರ್ಣ ವರದಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಹಿಂಗಾರು ಹಂಗಾಮು ಆರಂಭಕ್ಕೆ ಮುನ್ನ ಈ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಿ ರೈತರಿಗೆ ಪರಿಹಾರ ದೊರಕಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಮಳೆಹಾನಿ ಪ್ರಕರಣಗಳಲ್ಲಿ ಯಾವುದೇ ಬಾಕಿ ಉಳಿಸಿಕೊಳ್ಳದೇ ನಿಯಮಾನುಸಾರ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು. ಉದ್ಭವಿಸಬಹುದಾದ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ಸನ್ನದ್ಧ ಸ್ಥಿತಿಯಲ್ಲಿರಬೇಕು ಎಂದು ಅವರು ಸೂಚನೆ ನೀಡಿದರು.
ಬೆಳೆ ಸಮೀಕ್ಷೆ ಕಾರ್ಯದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಸಕ್ರೀಯವಾಗಿ ತೊಡಗಿಕೊಂಡು ಸಂಪೂರ್ಣ ಸಮೀಕ್ಷೆಗೆ ಸಹಕರಿಸಬೇಕು. ನಿಗದಿತ ಅವಧಿಯಲ್ಲಿ ಬೆಳೆ ಹಾನಿ ಪರಿಹಾರ ಪಾವತಿಗೆ ಅನುಕೂಲ ದೊರಕಿಸುವ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಅವರು ಸೂಚನೆ ನೀಡಿದರು.
ಮಳೆಗಾಲದ ಸಂದರ್ಭದಲ್ಲಿ ಡೋಣಿ ನದಿ ಪ್ರವಾಹ ಪರಿಸ್ಥಿತಿಯನ್ನು ತಗ್ಗಿಸಲು ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಗಳ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕಾಗಿ ಪರಿಹಾರ ಕಲ್ಪಿಸಲು ಈಗಾಗಲೇ ವಿಪತ್ತು ನಿರ್ವಹಣಾ ಉಪಶಮನ ನಿಧಿಯಡಿ ಪಂಚಾಯತ್ ರಾಜ್ ಇಂಜಿನೀಯರಿಂಗ್ ವಿಭಾಗದಿಂದ ಡೋಣಿ ನದಿ ಸೇತುವೆ ಮುಂಭಾಗ ಹಾಗೂ ಹಿಂಭಾಗದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಹೂಳು ತೆಗೆಯುವುದು, ನೀರು ಸರಾಗವಾಗಿ ಹರಿಯಲು ಅಡೆ-ತಡೆ ಉಂಟು ಮಾಡುತ್ತಿರುವ ಜಾಲಿ-ಕಂಟಿಗಳನ್ನು ತೆರವುಗೊಳಿಸುವುದು ಹಾಗೂ ಪ್ರವಾಹ ಪರಿಸ್ಥಿತಿ ಉಂಟಾಗದಂತೆ ನಿಯಂತ್ರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸಿಡಿಲು ಬಡಿದು ಉಂಟಾಗುತ್ತಿರುವ ಹಾನಿ ಕುರಿತು ಕಳವಳ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಗ್ರಾಮ ಮಟ್ಟದಲ್ಲಿ ಗ್ರಾಮಸ್ಥರಿಗೆ ಸಿಡಿಲಿನಿಂದ ರಕ್ಷಿಸಿಕೊಳ್ಳುವ ಕ್ರಮಗಳ ಕುರಿತು ದೃಶ್ಯ-ಶ್ರವಣೋಪಕರಣ, ಶಿಬಿರ ಜಾಥಾಗಳ ಮೂಲಕ ಜಾಗೃತಿ ಮೂಡಿಸಿ ಜನರಿಗೆ ತಿಳುವಳಿಕೆ ನೀಡುವುದು ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜನ-ಜಾನುವಾರುಗಳ ಜೀವಹಾನಿ ತಪ್ಪಿಸಲು ಅಭಿಯಾನದ ಮಾದರಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಸೂಕ್ತ ತಿಳುವಳಿಕೆ ಮೂಡಿಸಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಬೆಂಗಳೂರಿನ ಕೆಎಸ್‍ಎನ್‍ಡಿಎಂಸಿ ತಂಡ ಪಿಪಿಟಿ ಮೂಲಕ ಜಿಲ್ಲೆಯಲ್ಲಿ ಆಗಾಗ ಸಂಭವಿಸುವ ಕಂಪನಗಳ ಕುರಿತು ಸಮಗ್ರಹ ಮಾಹಿತಿಯನ್ನು ನೀಡಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ಶ್ರೀಮತಿ ಅನುರಾಧಾ ವಸ್ತ್ರದ, ಕೆಬಿಜೆಎನ್‍ಎಲ್ ಅಭಿಯಂತರ ವಿ.ಆರ್.ಹಿರೇಗೌಡರ ಸೇರಿದಂತೆ ತಹಶೀಲ್ದಾರರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande