ವಿಜಯಪುರ, 22 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಖಾಸಗಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳು ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಭದ್ರತೆ ವ್ಯವಸ್ಥೆಗೆ ಸಂಬಂಧಿಸಿದಂತೆ ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸೂಚನೆ ನೀಡಿದ್ದಾರೆ.
ಸೋಮವಾರ ನಗರದ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ನಡೆದ ಬ್ಯಾಂಕ್ ಸುರಕ್ಷತೆ ಹಾಗೂ ಭದ್ರತಾ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಇತ್ತೀಚೆಗೆ ಜನರು ತಮ್ಮ ಹಣ, ಆಭಣರಗಳನ್ನು ಸುರಕ್ಷತೆ ದೃಷ್ಟಿಯಿಂದ ಬ್ಯಾಂಕಿನಲ್ಲಿಟ್ಟಿರುತ್ತಾರೆ. ಅವರ ವಸ್ತುಗಳ ಸುರಕ್ಷತೆ ಬ್ಯಾಂಕಿನ್ ಜವಾಬ್ದಾರಿಯಾಗಿರುತ್ತದೆ. ಆರ್‍ಬಿಐ ನಿಯಮದನ್ವಯ ಗ್ರಾಹಕರ ವಸ್ತುಗಳ ಸುರಕ್ಷತೆ ಒದಗಿಸುವುದು ಅತ್ಯವಶ್ಯಕ ಹಾಗೂ ಸುರಕ್ಷತೆ ಪ್ರಮುಖವಾಗಿದೆ. ಜನರ ವಿಶ್ವಾಸ, ನಂಬಿಕೆ ಉಳಿಸಿಕೊಳ್ಳಲು ಭದ್ರತಾ ವ್ಯವಸ್ಥೆ ಕುರಿತಂತೆ ನಿರ್ಲಕ್ಷ್ಯ ವಹಿಸದೆ ಎಸ್‍ಓಪಿ ಹಾಗೂ ಆರ್‍ಬಿಐ ನಿರ್ದೇಶನಗಳನ್ನು ಪಾಲಿಸಬೇಕು. ಜನರ ಹಣ-ಆಭರಣಗಳ ಸುರಕ್ಷತೆ ನಿಮ್ಮ ಜವಾಬ್ದಾರಿಯಾಗಿದ್ದು, ಬ್ಯಾಂಕ್ ವ್ಯವಸ್ಥಾಪಕರು ಅತ್ಯಂತ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಇತ್ತೀಚೆಗೆ ಕಳ್ಳತನ, ದರೋಡೆಯಂತಹ ಪ್ರಕರಣಗಳು ನಡೆದಿದ್ದು, ಇಂತಹ ಪ್ರಕರಣಗಳು ಮರುಕಳಿಸದಂತೆ ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು. ಎಲ್ಲ ಬ್ಯಾಂಕ್‍ಗಳು ಲಾಕರ್ ವ್ಯವಸ್ಥೆ, ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಗಳ ನಿಯೋಜನೆ ಹಾಗೂ ಭದ್ರತಾ ಸಿಬ್ಬಂದಿಗಳಿಗೆ ತುರ್ತು ಸಂದರ್ಭವನ್ನು ಸಮರ್ಥವಾಗಿ ಎದುರಿಸಲು ಸೂಕ್ತ ತರಬೇತಿ ನೀಡಬೇಕು. ಸಿಸಿಟಿವಿ ಅಳವಡಿಕೆ, ಸ್ಟ್ರಾಂಗ್ ರೂಂ ಮತ್ತು ನಗದು ವಾಹನಗಳಿಗೆ ಡಬಲ್ ಲಾಕಿಂಗ್-ಡಿಜಿಟಲ್ ಲಾಕ್ ವ್ಯವಸ್ಥೆ, ಬ್ಯಾಂಕ್ ಆವರಣ ಹಾಗೂ ಎಟಿಎಂ ಆವರಣಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ, ಹಣ ಮತ್ತು ಆಭರಣಗಳಿಗಾಗಿ ಸುರಕ್ಷಿತ ಸೇಫ್ ಲಾಕರ್ ವ್ಯವಸ್ಥೆ ಮತ್ತು ಬ್ಯಾಂಕ್‍ಗಳಲ್ಲಿ ಪೊಲಿಸ್ ಠಾಣೆಯ ದೂರವಾಣಿ ಸಂಖ್ಯೆಯನ್ನು ಮತ್ತು 112 ನಂಬರ್‍ನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶನ ಮಾಡಬೇಕು. ಗ್ರಾಹಕರಿಗೆ ಸೈಬರ್ ವಂಚನೆಯ ಕುರಿತು ಜಾಗೃತಿ ಮೂಡಿಸುವ ಫಲಕಗಳನ್ನು ಅಳವಡಿಸಬೇಕು. ದರೋಡೆ, ಕಳ್ಳತನದಂತಹ ಸೂಚನೆ ಕಂಡು ಬಂದಲ್ಲಿ ಕೂಡಲೇ ಸೈರನ್-ಅಲಾರಂ ಒತ್ತಿ ಪೊಲಿಸರಿಗೆ ಮಾಹಿತಿ ನೀಡುವ ವ್ಯವಸ್ಥೆಗೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಬ್ಯಾಂಕ್ ನಿರ್ವಹಣೆಗಾಗಿ 22 ಅಂಶಗಳ ಚೆಕ್‍ಲಿಸ್ಟ್‍ನ್ನು ನೀಡಲಾಗಿದ್ದು, ಸಮರ್ಪಕವಾಗಿ ಅನುಸರಣೆ ಮಾಡಬೇಕು. ಈಗಾಗಲೇ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಸಭೆಗಳನ್ನು ನಡೆಸಿ ಅಗತ್ಯ ಭದ್ರತಾ ವ್ಯವಸ್ಥೆಗಳ ಕುರಿತು ತಿಳಿಸಲಾಗಿದೆ. ಭದ್ರತಾ ವ್ಯವಸ್ಥೆ ಹೆಚ್ಚಿನ ಗಮನ ನೀಡಬೇಕು. ಯಾವುದೇ ತುರ್ತು ಪರಿಸ್ಥಿತಿ ಎದುರಾಗುವ ಸಂದರ್ಭದಲ್ಲಿ ಕೂಡಲೆ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿ, ಸಹಾಯ ಪಡೆದುಕೊಳ್ಳಿ, ಪೊಲೀಸ್ ಇಲಾಖೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಭದ್ರತೆಗೆ ಸದಾ ಸನ್ನದ್ಧವಾಗಿರಲಿದೆ ಎಂದು ಅವರು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಮಾತನಾಡಿ, ಜನರ ವಿಶ್ವಾಸವೇ ಬ್ಯಾಂಕಿನ ಬಂಡವಾಳವಾಗಿದ್ದು, ಈ ನಿಟ್ಟಿನಲ್ಲಿ ಆರ್‍ಬಿಐ ಸುರಕ್ಷತೆಯ ನಿಯಮಗಳನ್ನು ಪಾಲನೆ ಮಾಡಬೇಕು. ಬ್ಯಾಂಕಿನಲ್ಲಿರುವ ಲಾಕರ್ ವ್ಯವಸ್ಥೆ ಸುಭದ್ರವಾಗಿರಬೇಕು. ಶಸ್ತ್ರ ಸಜ್ಜಿತ ಭದ್ರತಾ ಸಿಬ್ಬಂದಿಗಳು ನೇಮಕಾತಿಯಲ್ಲಿ ನಿಯಮಗಳ ಪಾಲನೆ ಮಾಡಬೇಕು. ಬ್ಯಾಂಕಿನ ಸಮಯದೊಳಗೆ ವ್ಯವಹಾರ ಮುಗಿಸಬೇಕು. ಆಗಾಗ್ಗೆ ಸಿಸಿಟಿ ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಬೇಕು. ಬ್ಯಾಂಕಿಗೆ ಸಂಬಂಧಿಸಿದ ಸುರಕ್ಷತೆ ಹಾಗೂ ಭದ್ರತೆ ಬಗ್ಗೆ ಪ್ರತಿ ಆರು ತಿಂಗಳಿಗೊಮ್ಮೆ ಅಣುಕುಪ್ರದರ್ಶನ ಏರ್ಪಡಿಸಿ ಜಾಗೃತಿ ಮೂಡಿಸುವ ಕಾರ್ಯ ಬ್ಯಾಂಕ್ ವ್ಯವಸ್ಥಾಪಕರ ನೇತೃತ್ವದಲ್ಲಿ ನಡೆಸಿ, ಸುರಕ್ಷತೆ ಕ್ರಮಗಳ ಕುರಿತು ಖಚಿತತೆಪಡಿಸಿಕೊಳ್ಳಬೇಕು. ಇದರಿಂದ ಜನರಿಗೂ ವಿಶ್ವಾಸ ದೊರೆಯುತ್ತದೆ. ಬ್ಯಾಂಕಿಂಗ್ ವಲಯದಲ್ಲಿ ನಂಬಿಕೆಯೇ ಬಂಡವಾಳ, ಭದ್ರತೆಯೇ ಜೀವಾಳ ಈ ನಿಟ್ಟಿನಲ್ಲಿ ಗ್ರಾಹಕ ಸ್ನೇಹಿಯಾಗಿ ಗ್ರಾಹಕರ ಹಣಕ್ಕೆ ಭದ್ರತೆ ಒದಗಿಸಬೇಕು. ಪೆÇಲೀಸ್ ಇಲಾಖೆ ವರ್ಷವಿಡಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕಾರ್ಯನಿರ್ವಹಿಸುತ್ತದೆ. ಜಿಲ್ಲೆಯಲ್ಲಿ ಇಂತಹ ಘಟನೆ ಮರುಕಳಿಸದಂತೆ ಪೆÇಲೀಸ್ ಇಲಾಖೆ ತಮ್ಮೊಂದಿಗೆ ಆಗಾಗ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನ ನೀಡಲಿದ್ದು, ತಾವೂ ಸಹ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಮಾತನಾಡಿ, ಬ್ಯಾಂಕಿನ ಕಾರ್ಯ ನಿರ್ವಹಣೆ ಮಾಹಿತಿಯನ್ನು ನಿರ್ವಹಿಸಿ, ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ, ಚೆಕ್ ಲಿಸ್ಟ್ ನೀಡಿದ್ದು ಈ ಅಂಶಗಳ ಕುರಿತು ಪಾಲನೆ ಮಾಡಬೇಕು.ಸಾರ್ವಜನಿಕರ ವಿಶ್ವಾಸ ಬ್ಯಾಂಕಿನಲ್ಲಿದ್ದು ಭದ್ರತಾ ಹಾಗೂ ಸುರಕ್ಷತೆಗೆ ಒತ್ತು ನೀಡಬೇಕು. ಯಾವುದೇ ಭದ್ರತಾ ಲೋಪ ಆಗದಂತೆ ಸುರಕ್ಷತಾ ಕ್ರಮವನ್ನು ಅನುಸರಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಬ್ಯಾಂಕಿನ ಅಧಿಕಾರಿಗಳು ತಮ್ಮ ಅನಿಸಿಕೆ ಹೇಳಿದರು. ಸಭೆಯಲ್ಲಿ ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪ ವಿಭಾಗಾಧಿಕಾರಿ ಶ್ರೀಮತಿ ಅನುರಾಧ ವಸ್ತ್ರದ, ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಸಿದ್ದಯ್ಯ.ಬಿ, ಡಿವೈಎಸ್ಪಿ ಬಸವರಾಜ್ ಯಲಿಗಾರ, ಸೇರಿದಂತೆ ಎಲ್ಲ ಬ್ಯಾಂಕಿನ ವ್ಯವಸ್ಥಾಪಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande