ವಿಜಯಪುರ, 22 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ಅವರ 200 ನೇ ವಿಜಯೋತ್ಸವ ಹಾಗೂ ರಾಣಿ ಅಬ್ಬಕ್ಕ ಅವರ 500 ನೇ ಜಯಂತೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ರಥಯಾತ್ರೆಯ ವಿಜಯಪುರ ನಗರಕ್ಕೆ ಆಗಮಿಸಿದಾಗ ಸಿದ್ದೇಶ್ವರ ದೇವಸ್ಥಾನದಿಂದ ಕಂದಗಲ್ ಹನುಮಂತರಾಯ ರಂಗ ಮಂದಿರದವರೆಗೆ ಹಮ್ಮಿಕೊಂಡಿದ್ದ ಶೋಭಾಯಾತ್ರೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿ ಭಾರತ ಮಾತ ಕೀ ಜೈ, ಕಿತ್ತೂರು ರಾಣಿ ಚೆನ್ನಮ್ಮಗೆ ಜೈ , ರಾಣಿ ಅಬ್ಬಕ್ಕ ಅವರಿಗೆ ಜೈ , ಎಂದು ಘೋಷಣೆ ಹಾಕುತ್ತಾ ಕಾರ್ಯಕ್ರಮಕ್ಕೆ ಮೆರಗು ನೀಡಿದರು. ವಿಶೇಷವಾಗಿ ವಿದ್ಯಾರ್ಥಿನಿಯರು ಸೀರೆ ಉಟ್ಟು ಬುಲೆಟ್ ಬೈಕ್ ಮೂಲಕ ಯಾತ್ರೆಯಲ್ಲಿ ಭಾಗವಹಿಸಿದ್ದರು. ಶೋಭಾಯಾತ್ರೆಯಲ್ಲಿ ವೀರಗಾಸೆ, ಡೊಳ್ಳು ಕುಣಿತದಂತಹ ಕಲಾ ತಂಡಗಳು ಶೋಭಾಯಾತ್ರೆಗೆ ಉತ್ಸಾಹ ತುಂಬಿದವು.
ಕಾರ್ಯಕ್ರಮದ ವಕ್ತಾರರಾದ ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ ಬಸವರಾಜ ಕುಬಕಡ್ಡಿ ಮಾತನಾಡಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಅಬ್ಬಕ್ಕ ನಮ್ಮ ದೇಶದ ಯುವ ಜನತೆಗೆ ಪ್ರೇರಕ ವ್ಯಕ್ತಿಗಳಾಗಬೇಕು. ಅವರ ಮೌಲ್ಯಯುತ ವ್ಯಕ್ತಿತ್ವವನ್ನ ಅಧ್ಯಯನ ಮಾಡಬೇಕೆಂದು ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಡಾ ಬಸವರಾಜ ಕುಬಕಡ್ಡಿ ತಿಳಿಸಿದರು. ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರು ಬ್ರಿಟಿಷರ ವಿರುದ್ಧದ ವಿಜಯ ಸಾಧಿಸಿ 200 ವರ್ಷಗಳು ತುಂಬಿರುವ ಆಂಗ್ಲರಿಗೆ ತುಂಬಿದೆ, ಕಪ್ಪ ಕೊಡಲು ಒಪ್ಪದೆ ಸ್ವಾಭಿಮಾನಕ್ಕಾಗಿ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ ವೀರರಾಣಿ ಕಿತ್ತೂರ ರಾಣಿಚೆನ್ನಮ್ಮ. ಭಾರತದ ಮೊದಲ ಮಹಿಳಾ ಸ್ವತಂತ್ರ ಹೋರಾಟಗಾರ್ತಿ ವೀರರಾಣಿ ಅಬ್ಬಕ್ಕ ಅವರ 500 ನೇ ಜಯಂತೋತ್ಸವ. ವೀರರಾಣಿ ಅಬ್ಬಕ್ಕ ದೇಶ ಮೊದಲು ಎಂಬುದು ರಾಣಿ ಅಬ್ಬಕ್ಕ ಅವರ ಮಂತ್ರವಾಗಿತ್ತು. ಹೀಗಾಗಿ ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿದ ರಾಣಿ ಅಬ್ಬಕ್ಕ ಅವರ ಶೌರ್ಯ, ಸಾಹಸ, ಸ್ವಾಭಿಮಾನ ಇಂದಿನ ಯುವಜನತೆಗೆ ಆದರ್ಶವಾಗಬೇಕು. ನಮ್ಮ ನಾಡಿನ ವೀರವನಿತೆಯರನ್ನ ಸ್ಮರಿಸಿಕೊಳ್ಳಬೇಕು ಎಂದರು.
ದಿವ್ಯ ಸಾನಿಧ್ಯ ವಹಿಸಿದ ಅಭಿನವ ಸಂಗನಬಸವ ಸ್ವಾಮೀಜಿ ಮಾತನಾಡಿ ಮನುಷ್ಯ ಭೂಮಿಗೆ ಬರುವಾಗ ಏನು ತರುವುದಿಲ್ಲ ಹಾಗೆಯೇ ಏನು ತೆಗೆದುಕೊಂಡು ಹೋಗುವುದಿಲ್ಲ. ಕೇವಲ ಪುಸ್ತಕದ ಹುಳಗಳಾಗುವುದಲ್ಲ ಪಠ್ಯದ ಜೊತೆಗೆ ಬೇರೆ ಚಟುವಟಿಕೆಗಳ ಮೇಲೆ ಗಮನಹರಿಸಬೇಕು. ಯುವಕರು ಗುಟ್ಕಾ, ಗಾಂಜಾಗೆ ಆದಿನರಾಗದೇ ಒಳ್ಳೆ ಪ್ರಜೆಗಳಾಗಬೇಕು ಎಂದು ಕರೆ ನೀಡಿದರು.
ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ ಆತ್ಮನಿರ್ಭರ ಭಾರತಕ್ಕೆ ನಾವೆಲ್ಲರೂ ಸಂಕಲ್ಪ ಮಾಡಬೇಕು, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ರಾಣಿ ಅಬ್ಬಕ್ಕ ಅವರ ರಥವು ಎರಡು ಭಾಗಗಳಲ್ಲಿ ಓಡಾಡುತ್ತಿದ್ದು, ಮೊದಲನೇ ರಥವು ಬೀದರ ನಲ್ಲಿ ಉದ್ಘಾಟನೆಗೊಂಡಿತು ಹಾಗೂ ಎರಡನೇ ರಥವು ಧಾರವಾಡದಲ್ಲಿ ಉದ್ಘಾಟನೆಗೊಂಡಿತು, ಈ ಎರಡು ರಥವು ದಿನಾಂಕ 25 ರಂದು ಬೆಳಗಾವಿಯಲ್ಲಿ ಸಮರೋಪಗೊಳ್ಳಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ ಅಮಿತಕುಮಾರ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು, ರಾಜ್ಯ ಸಹ ಕಾರ್ಯದರ್ಶಿಗಳಾದ ಸುಜ್ಞೇತಾ ಕುಲಕರ್ಣಿ, ಜಿಲ್ಲಾ ಸಂಚಾಲಕರಾದ ಸಂದೀಪ ಅರಳಗುಂಡಿ ಹಾಗೂ ನಗರ ತಾಂತ್ರಿಕ ಪ್ರಮುಖರಾದ ಚೇತನ ಕೋರವಾರ ಇದರು.
ಹಿಂದೂಸ್ತಾನ್ ಸಮಾಚಾರ್ / jyothi deshpande