ಮುಂಬೈ–ಅಹಮದಾಬಾದ್ ಹೈಸ್ಪೀಡ್ ರೈಲು ಕನಸು ಶೀಘ್ರ ನನಸು : ರೈಲ್ವೆ ಸಚಿವ ಅಶ್ವಿನಿ ವೈಷ್ಣವ್
ಮುಂಬಯಿ, 20 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ದೇಶದ ಮೊದಲ ಹೈಸ್ಪೀಡ್ ರೈಲು ಯೋಜನೆಯಾದ ಮುಂಬೈ–ಅಹಮದಾಬಾದ್ ರೈಲು ಮಾರ್ಗದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಈ ಕನಸು ಶೀಘ್ರದಲ್ಲೇ ನನಸಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಶನಿವಾರ ಮುಂಬೈನಲ್ಲಿ ನಿರ್ಮಾಣ ಕಾರ್ಯವನ್ನು
High speed train


ಮುಂಬಯಿ, 20 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ದೇಶದ ಮೊದಲ ಹೈಸ್ಪೀಡ್ ರೈಲು ಯೋಜನೆಯಾದ ಮುಂಬೈ–ಅಹಮದಾಬಾದ್ ರೈಲು ಮಾರ್ಗದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಈ ಕನಸು ಶೀಘ್ರದಲ್ಲೇ ನನಸಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಶನಿವಾರ ಮುಂಬೈನಲ್ಲಿ ನಿರ್ಮಾಣ ಕಾರ್ಯವನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “8 ಕಿಲೋಮೀಟರ್ ಉದ್ದದ ಸಮುದ್ರದೊಳಗಿನ ಸುರಂಗದ ಪ್ರಮುಖ ಭಾಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಇದರಿಂದ ಇಡೀ ಯೋಜನೆಗೆ ಮಹತ್ವದ ಮೈಲಿಗಲ್ಲು ಸಾಧನೆಯಾಗಿದೆ” ಎಂದು ಹೇಳಿದರು. ಜಪಾನ್ ತಜ್ಞರ ತಂಡವು ಇತ್ತೀಚೆಗೆ ಯೋಜನೆಯನ್ನು ಪರಿಶೀಲಿಸಿ ಗುಣಮಟ್ಟವನ್ನು ಶ್ಲಾಘಿಸಿರುವುದಾಗಿ ಸಚಿವರು ತಿಳಿಸಿದರು.

ಯೋಜನೆಯ ಸೇತುವೆ ವಿಭಾಗದ 320 ಕಿಮೀ ಭಾಗ ಈಗಾಗಲೇ ಪೂರ್ಣಗೊಂಡಿದ್ದು, ಎಲ್ಲಾ ನಿಲ್ದಾಣಗಳ ಕೆಲಸ ವೇಗವಾಗಿ ಸಾಗುತ್ತಿದೆ. ಸಬರಮತಿ ನಿಲ್ದಾಣವು ಬಹುತೇಕ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

ಮೊದಲ ರೈಲು 2027ರಲ್ಲಿ ಸೂರತ್–ಬಿಲಿಮೋರಾ ವಿಭಾಗದಲ್ಲಿ ಓಡಿಸಲಿದ್ದು, ಬಳಿಕ ಹಂತ ಹಂತವಾಗಿ ಉಳಿದ ವಿಭಾಗಗಳನ್ನು ತೆರೆಯಲಾಗುವುದು. 2029ರ ಹೊತ್ತಿಗೆ ಬಿಕೆಸಿ ನಿಲ್ದಾಣವರೆಗೂ ರೈಲು ಸಂಚಾರ ಪ್ರಾರಂಭವಾಗಲಿದೆ. “ಈ ಸೇವೆ ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದ್ದು, ಮುಂಬೈ–ಅಹಮದಾಬಾದ್ ಪ್ರಯಾಣವನ್ನು ಈಗಿನ 9 ಗಂಟೆಯಿಂದ 2 ಗಂಟೆ 7 ನಿಮಿಷಗಳಿಗೆ ಇಳಿಸಲಾಗುತ್ತದೆ ಎಂದು ವೈಷ್ಣವ್ ಹೇಳಿದರು.

ಹಿಂದಿನ ಸರ್ಕಾರದ ಅನುಮತಿ ಕೊರತೆಯಿಂದ ಯೋಜನೆಗೆ ಎರಡೂವರೆ ವರ್ಷ ವಿಳಂಬವಾಯಿತು ಎಂದು ಅವರು ಆರೋಪಿಸಿದರು. ಆದರೆ ಈಗ ಕೆಲಸ ವೇಗವಾಗಿ ಮುನ್ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಬದ್ಧತೆ ಸಾಕಾರಗೊಳ್ಳಲಿದೆ ಎಂದರು.

ಮುಂಬೈ–ಅಹಮದಾಬಾದ್ ಯೋಜನೆಯ ಯಶಸ್ಸಿನಿಂದ ಪ್ರೇರಿತರಾಗಿ, ದೆಹಲಿ–ವಾರಣಾಸಿ, ಮುಂಬೈ–ನಾಗ್ಪುರ, ದೆಹಲಿ–ಅಹಮದಾಬಾದ್, ಮುಂಬೈ–ಹೈದರಾಬಾದ್, ಚೆನ್ನೈ–ಬೆಂಗಳೂರು–ಮೈಸೂರು ಮತ್ತು ದೆಹಲಿ–ಅಮೃತಸರ ಸೇರಿದಂತೆ ಆರು ಹೈಸ್ಪೀಡ್ ರೈಲು ಯೋಜನೆಗಳ ಕಾರ್ಯಾರಂಭಕ್ಕೂ ದಾರಿ ಸುಗಮವಾಗಿದೆ. ಇವುಗಳ ಸಮೀಕ್ಷೆ ಹಾಗೂ ಡಿಪಿಆರ್ ಈಗಾಗಲೇ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande