ಗೊಬ್ಬರ ವಿತರಣೆಗೆ ಕ್ರಮವಹಿಸಿ : ಶಾಸಕ ಬಸನಗೌಡ ದದ್ದಲ್ ಕಟ್ಟುನಿಟ್ಟಿನ ನಿರ್ದೇಶನ
ರಾಯಚೂರು, 02 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ರೈತರು ಸರದಿ ಸಾಲಲಿ ನಿಂತು ಕಾಯದಂತೆ ಎಲ್ಲರಿಗೂ ಸಮರ್ಪಕ ಗೊಬ್ಬರ ವಿತರಣೆಗೆ ಅಗತ್ಯ ಕ್ರಮವಹಿಸಬೇಕು ಎಂದು ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರ ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರು ಕೃಷಿ ಅಧಿಕಾರಿಗಳ
ಗೊಬ್ಬರ ವಿತರಣೆಗೆ ಕ್ರಮವಹಿಸಿ: ಶಾಸಕ ಬಸನಗೌಡ ದದ್ದಲ್ ಕಟ್ಟುನಿಟ್ಟಿನ ನಿರ್ದೇಶನ


ಗೊಬ್ಬರ ವಿತರಣೆಗೆ ಕ್ರಮವಹಿಸಿ: ಶಾಸಕ ಬಸನಗೌಡ ದದ್ದಲ್ ಕಟ್ಟುನಿಟ್ಟಿನ ನಿರ್ದೇಶನ


ರಾಯಚೂರು, 02 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ರೈತರು ಸರದಿ ಸಾಲಲಿ ನಿಂತು ಕಾಯದಂತೆ ಎಲ್ಲರಿಗೂ ಸಮರ್ಪಕ ಗೊಬ್ಬರ ವಿತರಣೆಗೆ ಅಗತ್ಯ ಕ್ರಮವಹಿಸಬೇಕು ಎಂದು ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರ ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರು ಕೃಷಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ರಾಯಚೂರ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಸೆ.2ರಂದು ನಡೆದ ರಾಯಚೂರು ತಾಲೂಕು ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೊದಲನೇ ಬೆಳೆಗೆ ಸಹಜವಾಗಿ ರಸಗೊಬ್ಬರದ ಬೇಡಿಕೆ ಹೆಚ್ಚಿರುತ್ತದೆ. ಎರಡನೇ ಬೆಳೆಗೆ ಒತ್ತಡ ಇರುವುದಿಲ್ಲ. ಗೊಂದಲಕ್ಕೆ ಅವಕಾಶವಿಲ್ಲದ ಹಾಗೆ ಶಿಸ್ತುಬದ್ಧವಾಗಿ ರಸಗೊಬ್ಬರ ವಿತರಣೆಯಾಗಬೇಕು ಎಂದು‌ ಶಾಸಕರು ಸೂಚನೆ ನೀಡಿದರು.

ರಾಯಚೂರ ತಾಲೂಕಿನ ಯೂರಿಯಾ ರಸಗೊಬ್ಬರದ ಮುಂಗಾರು ಬೇಡಿಕೆ 16,592 ಮೆಟ್ರಿಕ್ ಟನ್ ಇರುತ್ತದೆ. ಅದರಲ್ಲಿ ಆಗಸ್ಟ್ ಮಾಹೆಯ ಅಂತ್ಯದವರೆಗೆ 13,430 ಮೆಟ್ರಿಕ್ ಟನ್ ರಷ್ಟು ಬೇಡಿಕೆ ಇದ್ದು, ಈ ಪೈಕಿ ಇದುವರೆಗೆ 12,484 ರಷ್ಟು ಗೊಬ್ಬರ ಮಳಿಗೆಗಳಿಂದ ಮಾರಾಟವಾಗಿದ್ದು, 1994 ಮೆಟ್ರಿಕ್ ಟನ್ ದಷ್ಟು ದಾಸ್ತಾನು ಇರುತ್ತದೆ. ರಾಯಚೂರ ತಾಲೂಕಿನಲ್ಲಿ ಸಕ್ರಿಯವಾಗಿ ರಸಗೊಬ್ಬರ ವಿತರಣೆಯಲ್ಲಿ ತೊಡಗಿರುವ ಎಲ್ಲ ಸಹಕಾರಿ ಸಂಘಗಳಿಗೆ ಜಿಲ್ಲೆಯಿಂದ ಬಪ್ಪರ್ ಸ್ಟಾಕ್ ವಿತರಣೆಯಾಗುತ್ತಿದ್ದು, ಅದರಲ್ಲಿ ಈವರೆಗೆ ಒಟ್ಟು 1737 ಮೆಟ್ರಿಕ್ ಟನ್ ರಷ್ಟು ಯೂರಿಯಾ ಹಾಗೂ 809 ಮೆಟ್ರಿಕ್ ಟನ್ ರಷ್ಟು ಡಿಎಪಿ ರಸಗೊಬ್ಬರವನ್ನು ಹಂಚಿಕೆ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿ ದೀಪಾ ಎಲ್ ಅವರು ಸಭೆಗೆ ಮಾಹಿತಿ ನೀಡಿದರು.

ತೋಟಗಾರಿಕೆ ಬೆಳೆ ಕ್ಷೇತ್ರ ಹೆಚ್ಚಾಗಲಿ: ರಾಯಚೂರ ಗ್ರಾಮೀಣ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ಕೃಷಿ ಪ್ರದೇಶ ವಿಸ್ತರಣೆಯಾಗಬೇಕು. ತೋಟಗಾರಿಕಾ ಬೆಳೆಗಾರರಿಗೆ ಹನಿ ನೀರಾವರಿ ಸೇರಿದಂತೆ ಪ್ರೋತ್ಸಾಹದಾಯಕ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ಕೊಡಬೇಕು.

ರೈತರ ಬೇಡಿಕೆಗನುಸಾರ ತೋಟಗಾರಿಕಾ ಸಸಿಗಳ ವಿತರಣೆಗೆ ಕ್ರವಹಿಸಬೇಕು ಎಂದರು.

ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು. ರಾಯಚೂರ ಗ್ರಾಮೀಣ ಕ್ಷೇತ್ರದಲ್ಲಿ ಮಾವು, ಮೋಸಂಬಿ, ಡ್ರಾಗನ್ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಒತ್ತು ಕೊಡಬೇಕು ಎಂದು ಶಾಸಕರು ಸೂಚನೆ ನೀಡಿದರು.

ರಾಯಚೂರ ಗ್ರಾಮೀಣ ಕ್ಷೇತ್ರದಲ್ಲಿ 300 ಹೆಕ್ಟೇರನಷ್ಟು ಇದ್ದ ಮಾವು ಬೆಳೆ ಪ್ರದೇಶವು ಇದೀಗ 350ನಷ್ಟು ಹೆಚ್ಚಳವಾಗಿದೆ. ಈ ಬಾರಿ ಕೆಲ ರೈತರು ಪೇರಲ ಬೆಳೆಗೆ ಆಸಕ್ತಿ ತೋರಿದ್ದಾರೆ. ನರೇಗಾ ಯೋಜನೆಯಡಿ 57,000 ಮಾನವ ದಿನಗಳ ಗುರಿ ಇದ್ದು ಈ ಪೈಕಿ 6000 ಗುರಿ‌‌ ಸಾಧನೆಯಾಗಿದೆ. ನರೇಗಾ ಯೋಜನೆಗೆ ಹೊಸದಾಗಿ 350 ಅಪ್ಲಿಕೇಶನ್ ಬಂದಿದ್ದು, ಅಕ್ಟೋಬರ್ ಮಾಹೆಯಲ್ಲಿ ಕ್ರಿಯಾಯೋಜನೆ ತಯಾರಿಸಿ ಜಿಪಂಗೆ ಸಲ್ಲಿಸಲಾಗುವುದು ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿ ಸುರೇಶ ಕುಮಾರ ಸಭೆಗೆ ಮಾಹಿತಿ ನೀಡಿದರು.

ನೀರಿಗೆ ತೊಂದರೆಯಾಗದಿರಲಿ:

ರಾಯಚೂರ ಗ್ರಾಮೀಣ ಕ್ಷೇತ್ರದ ಯಾವುದೇ ಗ್ರಾಮದಲ್ಲಿ ಕುಡಿವ ನೀರಿಗೆ ತೊಂದರೆಯಾಗಬಾರದು. ಮುಂದಿನ ದಿನಗಳಲ್ಲಿ ಅನುಕೂಲವಾಗುವಂತೆ ಕೆರೆ ತುಂಬಲು ಒತ್ತು ಕೊಡಬೇಕು. ತುಂಗಭದ್ರಾ ನದಿ ತುಂಬಿ ಹರಿಯುತ್ತಿದೆ. ಆದಾಗ್ಯು ನದಿ ತಟದ ಸುತ್ತಲಿನ ಗ್ರಾಮಸ್ಥರು ನಮಗೆ ನೀರು ಸಿಗುತ್ತಿಲ್ಲ ಎಂದು ದೂರಿದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಶಾಸಕರು ಎಚ್ಚರಿಕೆ ನೀಡಿದರು.

ಪೈಪಲೈನ್ ಲಿಕೇಜ್ ಆಗುತ್ತಿದೆ, ನೀರು ಹೋಗುತ್ತಿಲ್ಲ ಎಂದು ಕುಂಟುನೆಪ ಹೇಳುತ್ತ ಕಾಲಹರಣ ಮಾಡದೇ ಕ್ರಿಯಾಯೋಜನೆಯಲ್ಲಿ ಸೇರಿಸಿ, ಅವಶ್ಯವಿರುವ ಕಡೆಗೆ ತಡಮಾಡದೆ‌ ದುರಸ್ತಿ ಕಾರ್ಯ ಆರಂಭಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಮತ್ತು ಕೆಲ ಪಿಡಿಓಗಳಿಗೆ ಶಾಸಕರು ನಿರ್ದೇಶನ ನೀಡಿದರು.

ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ: ವಿದ್ಯುತ್ ಮೀಟರ್ ಇಲ್ಲ, ಬಿಲ್ ಕಟ್ಟಿಲ್ಲ ಎಂದು ಯಾವುದೇ ಹಳೆಯ ಮನೆಗಳು ಮತ್ತು ಸರ್ಕಾರಿ ಶಾಲೆ, ಅಂಗನವಾಡಿಗಳಿಗೆ ವಿದ್ಯುತ್ ಕಡಿತ ಮಾಡಕೂಡದು. ಬಿಲ್ ಕಟ್ಟಿಲ್ಲ ಎಂದು ಬೀದಿದೀಪಗಳನ್ನು ಆಫ್ ಮಾಡಬಾರದು ಎಂದು ಶಾಸಕರು ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎಲ್ಲ ಶಾಲೆಗಳ ಹೆಡ್ ಮಾಸ್ಟರಗಳಿಂದ ಮೀಟರ್ ಇಲ್ಲದ ಶಾಲೆಗಳ ಪಟ್ಟಿ ಮಾಡಿ ಮೀಟರ್ ಅಳವಡಿಕೆಗೆ ಕ್ರಮ ವಹಿಸಬೇಕು ಎಂದು ಶಾಸಕರು ಬಿಇಓ ಅವರಿಗೆ ನಿರ್ದೇಶನ ನೀಡಿದರು.

ಶಾಲೆಗಳಿಗೆ ನಿಯಮಿತ ಭೇಟಿ ನಡೆಸಲು ಸೂಚನೆ: ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂ ವಿತರಣೆ ಸಕಾಲಕ್ಕೆ ಆಗಬೇಕು. ಮಕ್ಕಳಿಗೆ ಗುಣಮಟ್ಟದ ಬಿಸಿ ಊಟದ ವ್ಯವಸ್ಥೆಯಾಗಬೇಕು. ಖಾಲಿ ಇರುವ ಅಡುಗೆ ಮೇಲ್ವಿಚಾರಕರು ಮತ್ತು ಅಡುಗೆದಾರರ ಹುದ್ದೆ ತುಂಬಬೇಕು. ಶಾಲೆಗಳಲ್ಲಿ ಆರಂಭವಾದ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳು ಸರಿಯಾಗಿ ನಡೆಯುವಂತೆ ಮೇಲ್ವಿಚಾರಣೆ ಮಾಡಬೇಕು. ಎಲ್ಲ ಶಾಲೆಗಳಿಗೆ ನಿಯಮಿತ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಶಾಸಕರು, ಬಿಇಓ ಈರಣ್ಣ ಅವರಿಗೆ ನಿರ್ದೇಶನ ನೀಡಿದರು.

ಪಾಗಿಂಗ್ ಮಾಡಲು ಪಿಡಿಓಗಳಿಗೆ ಸೂಚನೆ: ಮಳೆಯಿಂದಾಗಿ ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಆದ್ದರಿಂದ ರಾಯಚೂರ ತಾಲೂಕಿನ ಎಲ್ಲ ಗ್ರಾಮ ಪಂಚಾಯತಗಳಲ್ಲಿ ಅಲ್ಲಿನ ಪಿಡಿಓ ಗಳು ಕಡ್ಡಾಯ ಪಾಗಿಂಗ್ ಮಾಡಲು ಕ್ರಮವಹಿಸಿ ಜನರ ಆರೋಗ್ಯ ಕಾಪಾಡಬೇಕು ಎಂದು ಶಾಸಕರು ನಿರ್ದೇಶನ ನೀಡಿದರು.

ಅಕ್ರಮ ಮರಳು ಸಾಗಣೆ ನಿಲ್ಲಿಸಿ: ಅಕ್ರಮ ಮರಳು ಸಾಗಣೆ ನಡೆಯುತ್ತಿರುವುದು ಎಲ್ಲಾದರು ಕಂಡು ಬಂದಲ್ಲಿ, ಆ ಬಗ್ಗೆ ನಿಗಾವಹಿಸಿ ಅಕ್ರಮ ಮರಳು ಸಾಗಣೆ ತಡೆಯಬೇಕು ಎಂದು ಶಾಸಕರು,‌ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ರಾಯಚೂರ ಒಕ್ಕುಲುತನ ಹುಟ್ಟುವಳಿ ಮಾರಾಟ ಮತ್ತು ಸಂಸ್ಕರಣ ಸಂಘದ ಅಧ್ಯಕ್ಷರಾದ ಜಯಂತರಾವ್ ಪತಂಗೆ, ಎಪಿಎಂಸಿ ಅಧ್ಯಕ್ಷರಾದ ಮಲ್ಲಿಕಾರ್ಜುನಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷರಾದ ಪವನ್ ಕಿಶೋರ್ ಪಾಟೀಲ, ತಹಸೀಲ್ದಾರ ಸುರೇಶ ವರ್ಮಾ, ತಾಲೂಕು ಪಂಚಾಯತನ ಆಡಳಿತಾಧಿಕಾರಿಗಳಾದ‌ ಶರಣಬಸವರಾಜ, ತಾಪಂ ಇಓ ಚಂದ್ರಶೇಖರ ಪವರ್, ತ್ರೈಮಾಸಿಕ ಕೆಡಿಪಿ ಸಭೆಯ ನಾಮ ನಿರ್ದೇಶಿತ ಸದಸ್ಯರಾದ ಫಾರುಕ್ ಹುಸೇನ್ ತಂದೆ ಅಬ್ದುಲ್ ಜಿಲಾನಿ, ಶ್ರೀಮತಿ ಪಲ್ಲವಿ ಗಂಡ ಸುರೇಶ, ಈರೇಶ ತಂದೆ ರಾಮಪ್ಪ, ಜಿಂದಪ್ಪ ಶಾವಣಿ ತಂದೆ ಹನುಮಯ್ಯ, ಶರಣಬಸವ ತಂದೆ ನಾಗಾರೆಡ್ಡಿ, ತಿಮ್ಮಪ್ಪ ನಾಯಕ ತಂದೆ ದೊಡ್ಡ ತಾಯಣ್ಣ, ರಾಯಚೂರು ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಚನ್ನಬಸವ ಮತ್ತು ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande