ಕೊಪ್ಪಳ, 02 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕೊಪ್ಪಳ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯ ದುರಸ್ತಿ ಕಾಮಗಾರಿ ಮುಗಿಯುವವರೆಗೆ ಎಲ್ಲಾ ವಾಹನಗಳಿಗೆ ರಸ್ತೆಯ ಟೋಲ್ ಶುಲ್ಕವನ್ನು ಪಡೆಯುವುದನ್ನು ರದ್ದುಪಡಿಸಬೇಕು ಹಾಗೂ ಕೊಪ್ಪಳ ಪಾಸಿಂಗ್ ಇರುವ ಹಿಟ್ನಾಳ ಹಾಗೂ ಹಳ್ಳಿಗುಡಿ ವಾಹನಗಳಿಗೆ ಟೋಲ್ ಶುಲ್ಕವನ್ನು ತೆಗೆದುಕೊಳ್ಳಬಾರದು ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಘಟಕವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಆದಿಲ್ ಪಟೇಲ್ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು,
ಕೊಪ್ಪಳ-ಹೊಸಪೇಟೆ ಹೆದ್ದಾರಿ-67ರ ಕಾಮಗಾರಿ ನಡೆಯುತ್ತಿದೆ. ಕೊಪ್ಪಳದಿಂದ ಹಿಟ್ನಾಳ್ ಟೋಲ್ ಪ್ಲಾಜಾ ಕೇವಲ 21.1 ಕಿಲೋಮೀಟರ್ ಇದೆ. ಕೊಪ್ಪಳದಿಂದ ಹಳ್ಳಿಗುಡಿ ಟೋಲ್ ಪ್ಲಾಜಾ 34.4 ಕಿಲೋಮೀಟರ್ ಇದೆ. ಹಿಟ್ನಾಳ್ ಟೋಲ್ ಪ್ಲಾಜಾ ಮತ್ತು ಹಳ್ಳಿಗುಡಿ ಟೋಲ್ ಪ್ಲಾಜಾ ಒಟ್ಟು 65 ಕಿಲೋಮೀಟರ್ ವ್ಯಾಪ್ತಿಯಲ್ಲಿ ಇವೆ. ಒಂದೇ ರಸ್ತೆಯಲ್ಲಿ 12 ಗಂಟೆಗಳ ಒಳಗೆ ಒಬ್ಬ ವ್ಯಕ್ತಿ ರೂ. 150 ಟೋಲ್ ಶುಲ್ಕ ಏಕೆ ಪಾವತಿಸಬೇಕು. ತಕ್ಷಣ ಎರಡೂ ಟೋಲ್ ಪ್ಲಾಜಾಗಳಲ್ಲಿ ಕೊಪ್ಪಳ ಪಾಸಿಂಗ್ ಇರುವ ವಾಹನಗಳಿಗೆ ಟೋಲ್ ಶುಲ್ಕ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಅವರು ಕೋರಿದ್ದಾರೆ.
ಹೆದ್ದಾರಿಯಲ್ಲಿ ಗುಂಡಿಗಳು ಇದ್ದಲ್ಲಿ ಮತ್ತು ಸಂಚಾರ ದಟ್ಟಣೆಯಿಂದ ಯೋಗ್ಯವಿಲ್ಲದ ಹೆದ್ದಾರಿಗೆ ಹಾಗೂ ದುರಸ್ತಿ ಕಾಮಗಾರಿ ಮುಗಿಯುವವರೆಗೆ ರಸ್ತೆಗೆ ಟೋಲ್ ಸಂಗ್ರಹಣೆ ಮಾಡಬಾರದೆಂದು ಸುಪ್ರಿಂ ಕೋರ್ಟ್ ಆದೇಶವಿದ್ದು, ಸುಪ್ರೀಂ ಕೋರ್ಟ್‍ನ ಆದೇಶವನ್ನು ಜಾರಿ ಮಾಡಬೇಕು ಎಂದು ಅವರು ಉಲ್ಲೇಖಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್