ರಾಯಚೂರು, 02 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ರಾಯಚೂರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ರಾಯಚೂರು, ಸಮೂಹ ಸಂಪನ್ಮೂಲ ಕೇಂದ್ರ ಪೂರ್ವ ವಲಯ, ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ, ಅನುದಾನಿತ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ರಾಯಚೂರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 2ರಂದು ಮತ್ತು ಸೆಪ್ಟೆಂಬರ್ 3ರಂದು ನಡೆಯಲಿರುವ ಗಾಜಗಾರ ಪೇಟೆ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಮತ್ತು ಮಲಿಯಬಾದ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ರಾಯಚೂರು ಮಹಾನಗರ ಪಾಲಿಕೆಯ ಮಹಾಪೌರರಾದ ನರಸಮ್ಮ ನರಸಿಂಹಲು ಮಾಡಿಗಿರಿ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಸದೃಢವಾದ ಆರೋಗ್ಯ ಹೊಂದಲು ಕ್ರೀಡೆಗಳು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡೆಗಳಲ್ಲಿ ಭಾಗಿಯಾಗಬೇಕು. ಓದಿನಷ್ಟೇ ಆರೋಗ್ಯವು ಸಹ ತುಂಬಾ ಮುಖ್ಯವಾಗಿದೆ. ವಿದ್ಯಾರ್ಥಿಗಳು ತಮ್ಮ ಬಿಡುವಿನ ಅವಧಿಯನ್ನು ಕ್ರೀಡಾಂಗಣದಲ್ಲಿ ಕಳೆಯಬೇಕು ಎಂದು ಸಲಹೆ ಮಾಡಿದರು.
ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ಹೇಮಲತಾ ಬೂದೆಪ್ಪ, ಎನ್.ಕೆ.ನಾಗರಾಜ್ ಸೇರಿದಂತೆ ವಿವಿಧ ಶಾಲೆಗಳ ಮುಖ್ಯ ಗುರುಗಳು, ಸಹ ಶಿಕ್ಷಕರು, ದೈಹಿಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್