ರಾಯಚೂರು, 02 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಹಾರುಬೂದಿ ಸಾಗಾಟದ ಟಿಪ್ಪರ್ ವೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಶಕ್ತಿನಗರ ವಿದ್ಯುತ್ ಸ್ಥಾವರ( ಆರ್.ಟಿ.ಪಿ.ಎಸ್.) ಮುಖ್ಯದ್ವಾರದ ಬಳಿ ಸಂಭವಿಸಿದೆ.
ಮೃತ ವ್ಯಕ್ತಿ ಶಕ್ತಿನಗರದ ಲೇಬರ್ ಕಾಲೋನಿಯ ನಿವಾಸಿ, ಆಟೋ ಚಾಲಕ ಸುರೇಶ್ ಅಲಿಯಾಸ್ ಸಿಂಹಾದ್ರಿ (35) ಎಂದು ಗುರುತಿಸಲಾಗಿದೆ.
ಸುರೇಶ್ ಬೈಕಿನಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಅತಿ ವೇಗದಲ್ಲಿ ಬಂದ ಹಾರೋಬೂದಿ ಸಾಗಾಟದ ಟಿಪ್ಪರ್ ಡಿಕ್ಕಿ ಹೊಡೆದಿದ್ದು. ಇದರಿಂದ ಗಂಭೀರ ಗಾಯಗೊಂಡ ಸುರೇಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಶಕ್ತಿನಗರ ಬಳಿಯಲ್ಲಿ ನೂರಾರು ಕಾರ್ಖಾನೆಗಳು, ಆರ್.ಟಿ.ಪಿ.ಎಸ್. ಬಳಿ ಕ್ಯಾಶುಟೆಕ್ ಗುತ್ತಿಗೆ ಸಂಸ್ಥೆಯಿಂದ ಹಾರುಬೂದಿ ಹಾಗೂ ಕೃಷ್ಣ ನದಿಯಿಂದ ಅಕ್ರಮ ಮರಳುಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಇವುಗಳ ಸಾಗಾಟದ ಪ್ರತಿನಿತ್ಯ ನೂರಾರು ಟಿಪ್ಪರ್ ಗಳ ಓಡಾಟ ಹಾಗೂ ರಸ್ತೆ ಬದಿಯಲ್ಲಿ ಸಾಲು ಸಾಲು ಟಿಪ್ಪರ್ ನಿಲ್ಲಿಸುವುದರಿಂದ ಸಂಚಾರಕ್ಕೆ ಸಮಸ್ಯೆಯಾಗಿ ಅಪಘಾತ ಸಂಭವಿಸುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಶಕ್ತಿನಗರ ಚೆಕ್ ಪೋಸ್ಟ್ ಬಳಿ ಪೊಲೀಸರು ಸರಿಯಾಗಿ ತಪಾಸಣೆ ಮಾಡದೇ ಕಳುಹಿಸುತ್ತಿದ್ದಾರೆ. ಹೀಗಾಗಿ ಟಿಪ್ಪರ್ ಗಳು ವಾಹನ ಸವಾರರಿಗೆ ಯಮ ಸ್ವರೂಪಿಯಾಗುತ್ತಿವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಅಟೋ ಚಾಲಕ ಸುರೇಶ್ ಅಪಘಾತದಲ್ಲಿ ಸಾವನ್ನಪಿದ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹಾಗೂ ಸ್ಥಳೀಯ ಕಾರ್ಮಿಕರು ಆರ್ ಟಿಪಿಎಸ್ ಮುಖ್ಯ ದ್ವಾರದ ರಸ್ತೆ ಬಂದ್ ಮಾಡಿ ರಸ್ತೆಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಫೋಟೋ ಇಟ್ಟು ಪ್ರತಿಭಟನೆ ನಡೆಸಿ ಆರ್ ಟಿಪಿಎಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ಕೆಪಿಸಿಎಲ್ ನಿಂದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್