ನವದೆಹಲಿ, 19 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕ್ರೊಯೇಷಿಯಾದ ಜಾಗ್ರೆಬ್‌ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ 2025ರಲ್ಲಿ ಭಾರತಕ್ಕೆ ಮೊದಲ ಪದಕವನ್ನು ಅನಂತ್ ಪಂಗಲ್ ತಂದಿದ್ದಾರೆ. 21 ವರ್ಷದ ಪಂಗಲ್, ಮಹಿಳೆಯರ 53 ಕೆಜಿ ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ ಸ್ವೀಡನ್‌ನ ಒಲಿಂಪಿಯನ್ ಎಮ್ಮಾ ಜೊನ್ನಾ ಮಾಲ್ಮ್‌ಗ್ರೆನ್ ಅವರನ್ನು 9-1 ಅಂತರದಿಂದ ಮಣಿಸಿದರು. ಇದು ಅವರ ವೃತ್ತಿಜೀವನದ ಎರಡನೇ ವಿಶ್ವ ಪದಕವಾಗಿದೆ.
ಆರಂಭದಲ್ಲೇ 3-0 ಮುನ್ನಡೆ ಪಡೆದ ಪಂಗಲ್, ಬಳಿಕ ಬಲವಾದ ರಕ್ಷಣೆಯೊಂದಿಗೆ ಅಂಕಗಳನ್ನು ಕಲೆಹಾಕಿ ಅಂತಿಮ ಕ್ಷಣಗಳಲ್ಲಿ ಅದ್ಭುತ ದಾಳಿಯಿಂದ ಗೆಲುವು ಸಾಧಿಸಿದರು. ಇದರೊಂದಿಗೆ ಭಾರತವು ಈ ಆವೃತ್ತಿಯಲ್ಲಿ ತನ್ನ ಮೊದಲ ಪದಕ ದಾಖಲಿಸಿದೆ.
ಮತ್ತೊಂದೆಡೆ, ಮಹಿಳಾ ವಿಭಾಗದಲ್ಲಿ ಪ್ರಿಯಾಂಕಾ ಮಲಿಕ್ (76 ಕೆಜಿ) ಕಂಚಿನ ಪಂದ್ಯದಲ್ಲಿ ಒಲಿಂಪಿಕ್ ಪದಕ ವಿಜೇತೆ ಮಿಲೈಮೈಸ್ ಮರಿನ್ ವಿರುದ್ಧ 0-10 ಅಂತರದಿಂದ ಸೋತು ಪದಕದಿಂದ ವಂಚಿತರಾದರು. ಮನೀಷಾ ಭನ್ವಾಲಾ (62 ಕೆಜಿ) ರಿಪಿಚೇಜ್ ಹಂತದಲ್ಲೇ ಹೊರಬಿದ್ದರು.
ಗ್ರೀಕೋ-ರೋಮನ್ ವಿಭಾಗದಲ್ಲಿ ಭಾರತೀಯ ಪೈಲ್ವಾನರಿಗೆ ನಿರಾಶೆ ಎದುರಾಯಿತು. ಅನಿಲ್ ಮೋರ್ (55 ಕೆಜಿ) ಕೇವಲ 13 ಸೆಕೆಂಡುಗಳಲ್ಲಿ ಸೋಲು ಕಂಡರೆ, ಅಮನ್ (77 ಕೆಜಿ), ರಾಹುಲ್ (82 ಕೆಜಿ) ಹಾಗೂ ಸೋನು (130 ಕೆಜಿ) ತಾಂತ್ರಿಕ ಶ್ರೇಷ್ಠತೆಯಿಂದ ಎದುರಾಳಿಗಳ ವಿರುದ್ಧ ಸೋತರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa