ಕೊಪ್ಪಳ, 13 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಅಕ್ಕಪಕ್ಕದವರ ಬೆಳವಣಿಗೆಯನ್ನು ನೋಡಿ, ಅಸೂಯೇಪಟ್ಟುಕೊಳ್ಳುವುದರಿಂದ ಬದುಕು ಹಸನಾಗದು, ಅದರಿಂದ ಅವಸಾನವಾಗುತ್ತದೆ ಎಂದು ಕುಕನೂರು ಅನ್ನದಾನೀಶ್ವರ ಶಾಖಮಠದ ಡಾ. ಮಹದೇವ ಮಹಾಸ್ವಾಮಿಗಳು ಹೇಳಿದ್ದಾರೆ.
ಕೊಪ್ಪಳ ತಾಲೂಕಿನ ಡೊಂಬರಳ್ಳಿ ಗ್ರಾಮದಲ್ಲಿ ಶ್ರೀ ಶಂಕರಲಿಂಗಜ್ಜನ 41 ನೇ ಪುಣ್ಯತಿಥಿಯ ನಿಮಿತ್ಯ ಹಮ್ಮಿಕೊಂಡಿದ್ದ ಪುರಾಣಮಹಾಮಂಗಲ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಅವರಿವುರ ಸಾಧನೆಯನ್ನು ನೋಡಿ, ನಾವು ಅವರ ಸಾಧನೆಯ ಹಾದಿ ತುಳಿಯಬೇಕು. ಆದರೆ, ನಾವೆಲ್ಲಾ ಕೊರಗುತ್ತಾ ಕುಳಿತುಕೊಳ್ಳುತ್ತೇವೆ. ಇದರಿಂದ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಅವರವರ ಬದುಕು ಅವರಿಗೆ, ನಮ್ಮ ಬದುಕು ನಾವು ಎಂದು ನೆಮ್ಮದಿಯ ಜೀವನ ನಡೆಸಬೇಕು ಎಂದರು.
ದೇವರು ನಮಗೆ ಏನು ಕರುಣಿಸಿದ್ದಾನೆ, ಅದನ್ನು ಆನಂದಿಸಬೇಕು. ಅನುಭವಿಸಬೇಕು. ಅದು ಬಿಟ್ಟು ಬೇರೆಯವರ ಬದುಕನ್ನು ನೋಡುತ್ತಾ ಕುಳಿತರೇ ಅದರಿಂದ ಏನು ಪ್ರಯೋಜನವಾಗವುದಿಲ್ಲ ಎಂದರು.
ಪ್ರತಿಯೊಬ್ಬರಿಗೂ ದೇವರು ಸಮಯವನ್ನು ಅಷ್ಟೇ ನೀಡಿದ್ದಾರೆ. ಹೀಗಾಗಿ, ಸಮಯ ಅಮೂಲ್ಯವಾಗಿದ್ದು, ಅದನ್ನು ವ್ಯರ್ಥ ಮಾಡದೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಮೈನಳ್ಳಿ-ಬಿಕನಳ್ಳಿ ಗ್ರಾಮದ ಉಜ್ಜಯನಿ ಶಾಖಾಮಠದ ಶ್ರೀ ಸಿದ್ದೇಶ್ವರ ಶಿವಚಾರ್ಯ ಮಹಾಸ್ವಾಮೀಜಿಗಳು ಸಾನಿಧ್ಯ ವಹಿಸಿ ಮಾತನಾಡಿ, ಶರಣರ ತತ್ವಗಳನ್ನು ಅರಿತು ನಡೆಯಬೇಕು. ಬದುಕಿನಲ್ಲಿ ಹಿರಿಯರು, ಗುರುಗಳು ಕಲಿಸಿದ ಪಾಠವನ್ನು ಅಳವಡಿಸಿಕೊಂಡು ಮುನ್ನಡೆದರೇ ಬದುಕು ಬಂಗಾರವಾಗುತ್ತದೆ ಎಂದರು.
ಶರಣರ ತತ್ವ ಅರಿಯಲು ಇಂಥ ಪುರಾಣದಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಿವೆ. ಅದರಲ್ಲೂ ಡೊಂಬರಳ್ಳಿ ಗ್ರಾಮದಲ್ಲಿ ಜಾಗೃತ ಮನಸ್ಸುಗಳು ಇರುವುದರಿಂದ ಸಾಕಷ್ಟು ಪ್ರಗತಿಯನ್ನು ಹೊಂದಲು ಸಾಧ್ಯವಾಗಿದೆ ಎಂದರು.
ಡೊಂಬರಳ್ಳಿ ಗ್ರಾಮದಲ್ಲಿ ಬಂದು ನೆಲಸಿದದ್ದ ಶ್ರೀ ಶಂಕರಲಿಂಗಜ್ಜನ ಅವರ 41 ನೇ ಪುಣ್ಯಸ್ಮರಣೆ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣ ಎಂದರು.
ಮೆರವಣಿಗೆ – ಪುರಾಣ ಮಹಾಮಂಗಲ ನಿಮಿತ್ಯ ಶ್ರೀ ಶಂಕರಲಿಂಗಜ್ಜನ ಭಾವಚಿತ್ರ ಮೆರವಣಿಗೆ ಶನಿವಾರ ವಿಜೃಂಭಣೆಯಿಂದ ನೆರವೇರಿತು. ವಾದ್ಯ, ವೃಂದಗಳಿಂದ ಮೆರವಣಿಗೆಗೆ ಕಳೆ ಹೆಚ್ಚಾಗಿರುವುದು ಕಂಡು ಬಂದಿತು. ಬಿ.ಎಸ್. ಪಾಟೀಲ್ ಅವರು ಕಾರ್ಯಕ್ರಮ ನಿರೂಪಿಸಿದರು. ಗ್ರಾಮದ ಹಿರಿಯರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್