ನವದೆಹಲಿ, 12 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್ (ಸಿ.ಪಿ. ರಾಧಾಕೃಷ್ಣನ್) ದೇಶದ 15ನೇ ಉಪರಾಷ್ಟ್ರಪತಿಯಾಗಿ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು.
ಸಾಮಾಜಿಕ ಹಾಗೂ ರಾಜಕೀಯ ಜೀವನದಲ್ಲಿ ದೀರ್ಘ ಪಯಣ ಮಾಡಿದ ರಾಧಾಕೃಷ್ಣನ್ ಅವರ ಜೀವನಗಾಥೆ, ವಿದ್ಯಾರ್ಥಿ ಚಳುವಳಿ, ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗಿನ ಸೇವೆ, ಜನಸಂಪರ್ಕ ಹಾಗೂ 93 ದಿನಗಳಲ್ಲಿ 19,000 ಕಿ.ಮೀ ಉದ್ದದ ರಥಯಾತ್ರೆ ಮುಂತಾದ ಹಲವು ಮೈಲಿಗಲ್ಲುಗಳಿಂದ ಕೂಡಿದೆ.
ಜನನ ಮತ್ತು ಶಿಕ್ಷಣ: 1957ರ ಅಕ್ಟೋಬರ್ 20ರಂದು ತಮಿಳುನಾಡಿನ ತಿರುಪ್ಪೂರಿನಲ್ಲಿ ಜನಿಸಿದ ಅವರು ಕೊಂಗು ವೆಲ್ಲಲರ್ (ಗೌಂಡರ್) ಸಮುದಾಯದವರಾಗಿದ್ದಾರೆ. ವಿ.ಒ. ಚಿದಂಬರಂ ಕಾಲೇಜಿನಿಂದ ವ್ಯವಹಾರ ಆಡಳಿತ ಪದವಿ ಪಡೆದಿದ್ದಾರೆ. ಕ್ರೀಡೆಗಳಲ್ಲಿಯೂ ವಿಶೇಷ ಆಸಕ್ತಿ ಹೊಂದಿರುವ ಅವರು ಕಾಲೇಜು ಮಟ್ಟದ ಟೆನಿಸ್ ಚಾಂಪಿಯನ್ ಆಗಿದ್ದರು.
ಆರ್‌ಎಸ್‌ಎಸ್ ಹಾಗೂ ರಾಜಕೀಯ ಪ್ರವೇಶ: 16ನೇ ವಯಸ್ಸಿನಲ್ಲಿ ಆರ್‌ಎಸ್‌ಎಸ್ ಸೇರಿದ ಅವರು 1974ರಲ್ಲಿ ಜನಸಂಘದ ರಾಜ್ಯ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದರು. ಬಳಿಕ ಬಿಜೆಪಿ ಸಂಘಟನೆಯಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದರು.
ಸಂಸದೀಯ ಜೀವನ: 1998 ಮತ್ತು 1999ರಲ್ಲಿ ಕೊಯಮತ್ತೂರಿನಿಂದ ಲೋಕಸಭೆಗೆ ಎರಡು ಬಾರಿ ಆಯ್ಕೆಯಾದರು. ಆದಾಗ್ಯೂ, ನಂತರದ ಚುನಾವಣೆಗಳಲ್ಲಿ ಸೋಲುಗಳನ್ನು ಎದುರಿಸಿದರು.
ಬಿಜೆಪಿ ಸಂಘಟನೆ ಮತ್ತು ರಥಯಾತ್ರೆ: 2004–07ರಲ್ಲಿ ತಮಿಳುನಾಡು ಬಿಜೆಪಿಯ ಅಧ್ಯಕ್ಷರಾಗಿದ್ದ ಅವರು 2007ರಲ್ಲಿ ನದಿಗಳ ಜೋಡಣೆ, ಭಯೋತ್ಪಾದನೆ ವಿರುದ್ಧ ಹೋರಾಟ, ಏಕರೂಪ ನಾಗರಿಕ ಸಂಹಿತೆ, ಅಸ್ಪೃಶ್ಯತೆ ನಿವಾರಣೆ, ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೊದಲಾದ ವಿಷಯಗಳ ಕುರಿತು 93 ದಿನಗಳಲ್ಲಿ 19,000 ಕಿ.ಮೀ ಉದ್ದದ ರಥಯಾತ್ರೆ ಕೈಗೊಂಡರು.
ರಾಜ್ಯಪಾಲ ಮತ್ತು ಇತರ ಜವಾಬ್ದಾರಿಗಳು: 2023ರಲ್ಲಿ ಜಾರ್ಖಂಡ್ ರಾಜ್ಯಪಾಲರಾಗಿ ನೇಮಕಗೊಂಡ ಅವರು ತೆಲಂಗಾಣ ಮತ್ತು ಪುದುಚೇರಿಯ ಹೆಚ್ಚುವರಿ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರು. 2024ರಲ್ಲಿ ಮಹಾರಾಷ್ಟ್ರದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದರು. ಇದಕ್ಕೂ ಮೊದಲು, ಅವರು ಅಖಿಲ ಭಾರತ ತೆಂಗಿನಕಾಯಿ ಮಂಡಳಿಯ ಅಧ್ಯಕ್ಷರಾಗಿದ್ದರು.
ದಕ್ಷಿಣ ಭಾರತದಲ್ಲಿ ಬಿಜೆಪಿ ನೆಲೆ ಬೇರಲು ಪ್ರಮುಖ ಪಾತ್ರ ವಹಿಸಿದ ರಾಧಾಕೃಷ್ಣನ್, ಇದೀಗ ದೇಶದ ಎರಡನೇ ಅತಿ ದೊಡ್ಡ ಹುದ್ದೆ ಅಲಂಕರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa