ಹಾವೇರಿ, 10 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವರದಾ ಬೇಡ್ತಿ ನದಿ ಜೋಡಣೆ ಯೋಜನೆಯ ಬಗ್ಗೆ ರಾಜ್ಯ ಸರ್ಕಾರ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರೊಂದಿಗೆ ಹಂಚಿಕೊಂಡು ಸಂಬಂಧ ಪಟ್ಟ ಉತ್ತರ ಕನ್ನಡ ಜಿಲ್ಲೆಯ ಜನರು ಹಾಗೂ ಸ್ವಾಮೀಜಿಯ ಜೊತೆಗೆ ಚರ್ಚೆ ಮಾಡಿ ಮನವರಿಕೆ ಮಾಡುವ ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗಹಿಸಿದ್ದಾರೆ.
ಹಾವೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವರದಾ ಬೇಡ್ತಿ ನದಿ ಜೋಡಣೆಯ ಬಗ್ಗೆ ನಾನು ಸಭೆ ಮಾಡಿದ ಮೇಲೆ ದೊಡ್ಡ ಪ್ರಮಾಣದ ಚರ್ಚೆ ನಡೆಯುತ್ತಿದೆ. ಉತ್ತರ ಕನ್ನಡದಲ್ಲಿಯೂ ಸಭೆ ನಡೆದಿದೆ. ರಾಜ್ಯದ ನೀರಿನ ಸಂಪತ್ತು ಸದುಪಯೋಗ ಆಗಬೇಕು. ಅದು ಎಲ್ಲಿ ಉಪಯೋಗ ಆಗಬೇಕು ಅಲ್ಲಿ ಅದು ಬಳಕೆಯಾಗಬೇಕು. ಮಹಾರಾಷ್ಟ್ರದಲ್ಲಿ ಹುಟ್ಟಿದ ಕೃಷ್ಣೆಗೆ ನಾವು ರಾಜ್ಯದಲ್ಲಿ ಯೋಜನೆ ಮಾಡಿದ್ದೇವೆ. ಕರ್ನಾಟಕದಲ್ಲಿ ಹುಟ್ಟಿರುವ ಕಾವೇರಿಗೆ ತಮಿಳುನಾಡಿನಲ್ಲಿ ಯೋಜನೆ ಮಾಡಿದ್ದಾರೆ. ನದಿ ನೀರು ವ್ಯರ್ಥವಾಗಿ ಹೋಗಬಾರದು. ಹಾಗೂ ಪ್ರವಾಹ ಉಂಟಾಗಿ ನೀರು ವ್ಯರ್ಥವಾಗಿ ಹೋಗಬಾರದು. ಮೊದಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ನದಿ ವಿವಾದಗಳು, ಅಂತಾರಾಜ್ಯ ಜಲ ವಿವಾದಗಳು ಇದ್ದವು, ಈಗ ಅಂತರ್ ಜಿಲ್ಲಾ ನದಿ ವಿವಾದಗಳು ಶುರುವಾಗಿವೆ ಎಂದರು.
ವರದಾ ಬೇಡ್ತಿ ನದಿ ಜೋಡಣೆಗೆ ಮೊದಲು ಮಾಡಿದ್ದ ಡಿಪಿಆರ್‌ನಿಂದ ಬಹಳಷ್ಟು ಪರಿಸರಕ್ಕೆ ನಷ್ಟ ಆಗುತ್ತದೆ ಎಂದು ವಿರೋಧ ಮಾಡಿದ್ದರು. ಅದರಿಂದ ಮಾರ್ಪಾಡು ಮಾಡಿ ಯಾವುದೇ ರೀತಿಯ ನಷ್ಟ ಆಗದಂತೆ ಯೋಜನೆ ರೂಪಿಸಿದ್ದೇವೆ. ಇದನ್ನು ಉತ್ತರ ಕನ್ನಡದ ಜನರಿಗೆ ಮಾಹಿತಿ ಕೊಡುವ ಅಗತ್ಯವಿದೆ, ಮತ್ತು ಯಾರಿಗೆ ಆಪತ್ತಿದೆ ಅಲ್ಲಿಯ ಪರಮಪೂಜ್ಯರ ಜೊತೆಗೆ ಮಾತನಾಡುವ ಅಗತ್ಯವಿದೆ. ರಾಜ್ಯ ಸರ್ಕಾರ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರೊಂದಿಗೆ ಹಂಚಿಕೊಂಡು ಸಂಬಂಧ ಪಟ್ಟ ಉತ್ತರ ಕನ್ನಡ ಜಿಲ್ಲೆಯ ಜನರು ಹಾಗೂ ಸ್ವಾಮೀಜಿಯ ಜೊತೆಗೆ ಚರ್ಚೆ ಮಾಡಿ ಮನವರಿಕೆ ಮಾಡುವ ಕೆಲಸ ಮಾಡಬೇಕು. ನಾವೂ ಕೂಡ ಅಲ್ಲಿಯ ಜನರ ಮನವೊಲಿಸಲು ಸಂಪೂರ್ಣ ಕೈ ಜೋಡಿಸುತ್ತೇವೆ. ಯಾರಿಗೂ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುತ್ತೇವೆ. ರಾಜ್ಯ ಸರ್ಕಾರ ಡಿಪಿಆರ್ ಅನ್ನು ತಕ್ಷಣ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಬೇಕು. ಸೌಹಾರ್ದಯುತವಾಗಿ ಬಗೆ ಹರಿಸಿ ಯೋಜನೆ ರೂಪಿಸುವ ಉದ್ದೇಶ ಇದೆ. ಒಂದು ಕಡೆ ಹೆಚ್ಚಿನ ನೀರಿದೆ. ಇಲ್ಲಿ ನೀರಿನ ಕೊರತೆ ಇದೆ. ನೀರು ರಾಷ್ಟ್ರೀಯ ಸಂಪತ್ತು. ಇದರಿಂದ ಎಲ್ಲರಿಗೂ ಅನುಕೂಲವಾಗಬೇಕು ಇದನ್ನು ಪ್ರತಿಷ್ಠೆ ಹಾಗೂ ರಾಜಕೀಯವಾಗಿ ನೋಡಬಾರದು ಎಂದು ಕಿವಿ ಮಾತು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa