ಕೊಪ್ಪಳ, 10 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ಇತ್ತೀಚೆಗೆ ಬಾಲಗರ್ಭಿಣಿ ಪ್ರಕರಣಗಳು ವರದಿಯಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಯಾವುದೇ ರೀತಿಯ ಬಾಲ್ಯ ವಿವಾಹ ಮತ್ತು ಬಾಲಗರ್ಭಿಣಿ ಪ್ರಕರಣಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ತಿಳಿಸಿದ್ದಾರೆ.
ಬುಧವಾರ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಬಾಲ್ಯ ವಿವಾಹ ತಡೆ ಮತ್ತು ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಾಲ್ಯ ವಿವಾಹ ಮತ್ತು ಬಾಲಗರ್ಭಿಣಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾನ್ಯ ಮುಖ್ಯ ಮಂತ್ರಿಗಳು, ಇತ್ತೀಚೆಗೆ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯನ್ನು ತೆಗೆದುಕೊಂಡು, ಸೂಕ್ತ ನಿರ್ದೆಶನಗಳನ್ನು ನೀಡಿದ್ದಾರೆ ಹಾಗೂ ಬಾಲ್ಯ ವಿವಾಹ ಮತ್ತು ಬಾಲಗರ್ಭಿಣಿ ಪ್ರಕರಣಗಳನ್ನು ತೆಡೆಗಟ್ಟಲು ಜನ ಸಮುದಾಯದಲ್ಲಿ ವ್ಯಾಪಕ ಪ್ರಚಾರ ಮತ್ತು ಜಾಗೃತಿ ಮೂಡಿಸಲು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಕಾವಲು ಸಮಿತಿ ಸಭೆಗಳನ್ನು ಕೈಗೊಳ್ಳಬೇಕು. ಈ ಸಭೆಗಳಲ್ಲಿ ಎಲ್ಲಾ ಪ್ರೌಢ ಶಾಲೆ, ಕಾಲೇಜುಗಳು, ಮಹಿಳಾ ಸ್ವ ಸಹಾಯ ಸಂಘ ಸಂಸ್ಥೆಗಳು ಮತ್ತು ಆಯಾ ಊರಿನ ಸಾರ್ವಜನಿಕರನ್ನು ಸೆರಿಸಿ, ಅಲ್ಲಿ ಬಾಲ್ಯ ವಿವಾಹ ಕಾನೂನು ಬಾಹಿರ ಎಂಬುದರ ಕುರಿತು ಚರ್ಚೆ ಮಾಡಬೇಕು. ಎಲ್ಲರೂ ಒಳಗೊಂಡಂತೆ ಜಾಗೃತಿ ಜಾಥದ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿ ಎಂದರು.
ಸಮಗ್ರ ಶಿಕ್ಷಣ ಅಭಿಯಾನದಡಿ ಪ್ರತಿ ಪ್ರೌಢಶಾಲೆಯಲ್ಲಿ ಬಾಲ್ಯ ವಿವಾಹ ಬಗ್ಗೆ ಜಾಗೃತಿ ಮೂಡಿಸಲು ಅನುದಾನ ಇದೆ. ಅದನ್ನ ಬಳಸಿಕೊಂಡು ಕಾನೂನು ಸೇವಾ ಪ್ರಾಧಿಕಾರದ ಸಹಯೋದಲ್ಲಿ ಬಾಲ್ಯ ವಿವಾಹ ತಡೆಗೆ ಜಾಗೃತಿ ಮೂಡಿಸುವಂತೆ ಶಿಕ್ಷಣ ಇಲಾಖೆಯಿಂದ ಕ್ರಮ ಕೈಗೊಳ್ಳಬೇಕು. ತಾಲ್ಲೂಕು ಹಂತದಲ್ಲಿ ತಹಶಿಲ್ದಾರರ ನೇತೃತ್ವದಲ್ಲಿರುವ ಬಾಲ್ಯ ವಿವಾಹ ತಡೆ ಸಮಿತಿಗಳು ತಮ್ಮ ವ್ಯಾಪ್ತಿಯಲ್ಲಿ ಜಾಗೃತಿ ಜಾಥ ಮತ್ತು ಇತರೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಿಲ್ಲೆಯಾದ್ಯಂತ ಯಾವುದೇ ರೀತಿಯ ಬಾಲ್ಯವಿವಾಹಗಳು ನಡೆಯಂತೆ ನೋಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಶಿಕ್ಷಣ ಇಲಾಖೆಯವರು ಸಂಜೀವಿನಿ ಮತ್ತು ಎನ್.ಆರ್.ಎಲ್.ಎಮ್. ಮಹಿಳಾ ಸ್ವಸಹಾಯ ಸಂಘಗಳು ಅಥವಾ ಇತರೆ ಸಂಘಗಳನ್ನು ಸೇರಿಸಿಕೊಂಡು ಪ್ರೌಢ ಶಿಕ್ಷಣ ಮತ್ತು ಪಿಯು ಶಿಕ್ಷಣ ಹಂತದಿಂದ ಹೋರ ಉಳಿದ ಹೆಣ್ಣು ಮಕ್ಕಳನ್ನು ಪತ್ತೆ ಮಾಡಿ, ಅವರಲ್ಲಿ ಬಾಲ್ಯ ವಿವಾಹ ಏನಾದರೂ ಜರುಗಿದೆಯೇ ಅಥವಾ ಬಾಲ್ಯ ವಿವಾಹ ಮಾಡಲು ಪ್ರಯತ್ನ ಮಾಡಲಾಗುತ್ತಿದೆಯೇ ಎಂಬುವುದನ್ನು ಪರಿಶೀಲನೆ ಮಾಡಬೇಕು. ಯಾವುದೇ ರೀತಿಯ ಬಾಲ್ಯ ವಿವಾಹ ಅಥವಾ ಬಾಲಗರ್ಭಿಣಿ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣವೇ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ವಹಿಸಬೇಕು. ಆಡಳಿತ ವ್ಯವಸ್ಥೆ ಜಾಗರುಕವಾಗಿದೆ ಎಂದಾಗ ಮಾತ್ರ ಜನ ಬಾಲ್ಯ ವಿವಾಹ ಮಾಡುವುದನ್ನು ನಿಲ್ಲಿಸಬಹುದು. ಜಿಲ್ಲೆಯ ಎಲ್ಲಾ ದೇವಸ್ಥಾನ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಾಲ್ಯ ವಿವಾಹ ಕಾನೂನು ಬಾಹಿರ ಅಪರಾಧ ಎಂದು ಗೋಡೆ ಬರಹವನ್ನು ಬರೆಸುವಂತೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್. ದರಗದ್ ಅವರು ಮಾತನಾಡಿ, ಬಾಲ್ಯವಿವಾಹವು ಶಿಕ್ಷಾರ್ಹ ಅಪರಾದವಾಗಿದ್ದು, ಪೊಲೀಸ್ ಅಧಿಕಾರಿಯು ತನ್ನ ಅಧಿಕಾರ ವ್ಯಾಪ್ತಿಯಲ್ಲಿ ನಡೆದ ಬಾಲ್ಯವಿವಾಹದ ಮಾಹಿತಿಯನ್ನು ಗಮನಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಬಾಲ್ಯವಿವಾಹ ಅಧಿನಿಯಮದಡಿ ತಾನಾಗಿಯೇ ಕ್ರಮ ಕೈಗೊಳ್ಳಬೇಕು. ಇದರ ಜೊತೆಗೆ ಬಾಲ್ಯವಿವಾಹ ನಿಷೇಧ ಅಧಿಕಾರಿಗಳು ಬಾಲ್ಯವಿವಾಹ ನಿಷೇಧ ಕಾಯ್ದೆಯನ್ನು ಪರಿಣಾಮ ಕಾರಿಯಾಗಿ ಅನುಷ್ಠಾನ ಮಾಡಬೇಕು. ಶಾಲೆಗಳಲ್ಲಿ ಹುಡುಗ ಹುಡುಗಿಗೆ ಗಿಫ್ಟ್ ಕೋಡುತ್ತಾನೆ. ಅಲ್ಲಿಂದ ಕೆಟ್ಟ ಅವ್ಯಸಗಳು ರೂಡಿಯಾಗುತ್ತವೆ. ಅಂತಹ ಚಟುವಟಿಕೆಗಳನ್ನು ಅಲ್ಲೆ ನಿಯಂತ್ರಣ ಮಾಡುವುದು ಸೂಕ್ತ. ಈ ಬಗ್ಗೆ ಹಾಸ್ಟೆಲ್ ವಾರ್ಡನ್‌ಗಳು ಮತ್ತು ಶಾಲಾ ಶಿಕ್ಷಕರಿಗೆ ಕ್ರಮ ಕೈಗೊಳ್ಳಲು ತಿಳಿಸಬೇಕು ಎಂದು ಸೂಚನೆ ನೀಡಿದರು.
ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಅವರು ಮಾತನಾಡಿ, ಬಾಲ್ಯ ವಿವಾಹ ನಡೆಯಲಿಕ್ಕೆ ಮುಖ್ಯ ಪಾತ್ರ ನೀಡುವುದು ಪ್ರೌಢಶಾಲಾ ಹಂತದಲ್ಲಿಯೇ ಆಗಿದ್ದು, ಎಸ್.ಎಸ್.ಎಲ್.ಸಿ.ಯಲ್ಲಿ ಪಾಸ್ ಆದರೆ ಮುಂದಿನ ಶಿಕ್ಷಣ ಕೊಡಿಸಲು ಪಾಲಕರು ಮುಂದಾಗುತ್ತಾರೆ. ಒಂದು ವೇಳೆ ಆ ಹೆಣ್ಣು ಮಗಳು ಫೇಲ್ ಆದರೆ ಪಾಲಕರು ವಿವಾಹ ಮಾಡಲಿಕ್ಕೆ ಮುಂದಾಗುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರೌಢಶಾಲಾ ಶಿಕ್ಷಣ ಹಂತದಲ್ಲಿ ಎಲ್ಲಾ ಮಕ್ಕಳಿಗೆ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡಿ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮಕ್ಕಳು ಫೆಲ್ ಆಗದಂತೆ ನೋಡಿಕೊಳ್ಳುವ ಮೂಲಕ ಶಿಕ್ಷಣ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಂಡು ಬಾಲ್ಯ ವಿವಾಹಗಳನ್ನು ತಡೆಗಟ್ಟಬೇಕು. ಇದರ ಜೊತೆಗೆ ಶಾಲೆಯಿಂದ ಹೊರಗೆ ಉಳಿದ ಮಕ್ಕಳನ್ನು ಪತ್ತೆ ಮಾಡಿ, ಅವರಿಗೆ ಮರಳಿ ಶಾಲೆಗೆ ಕರೆತರಬೇಕು. ಪ್ರಮುಖವಾಗಿ ಹೆಣ್ಣು ಮಕ್ಕಳು ಶಿಕ್ಷಣದಿಂದ ಹೊರಗುಳಿಯದಂತೆ ನೋಡಿಕೊಳ್ಳಿ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಿಂದ ಜಿಲ್ಲಾ ಹಂತದವರೆಗಿನ ಎಲ್ಲಾ ಇಲಾಖೆಗಳು ಮತ್ತು ಕಚೇರಿಗಳು ಪತ್ರ ವ್ಯವಹಾರ ಮಾಡುವಾಗ ಕೆಳಗೆ ಬಾಲ್ಯ ವಿವಾಹ ನಿಷೇಧಿಸಲಾಗಿದೆ ಎಂದು ಬರೆಯುವುದನ್ನ ಕಡ್ಡಾಯ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಜಿ. ರಾಮತ್ನಾಳ್ ಅವರು ಮಾತನಾಡಿ, ಇನ್ನು ಕೆಲವು ಗ್ರಾಮದಲ್ಲಿ ಕಾವಲು ಸಮಿತಿಗಳು ರಚನೆ ಯಾಗಿಲ್ಲ. ಬಹಳ ತುರ್ತಾಗಿ ಈ ಸಮಿತಿಗಳನ್ನು ರಚಿಸಬೇಕು. ಬಾಲ್ಯ ವಿವಾಹ ತಡೆ ಬಗ್ಗೆ ಜಾಗೃತಿ ಮೂಡಿಸಲು ಇದೆ ಸೆಪ್ಟೆಂಬರ್ 12ಕ್ಕೆ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿನ ಕಾವಲು ಸಮಿತಿಗಳ ಸಭೆಯನ್ನು ಹಮ್ಮಿಕೊಂಡು, ಆಯಾ ಗ್ರಾಮಗಳ ಹೆಚ್ಚಿನ ಸಂಖ್ಯೆಯ ಜನರನ್ನು ಸೇರಿಸಬೆಕು. ಜಿಲ್ಲಾಧಿಕಾರಿಗಳು ಹೇಳಿದಂತೆ ಜಿಲ್ಲೆಯಾದ್ಯಂತ ಸೆ. 22ಕ್ಕೆ ಜಾಗೃತಿ ಜಾಥವನ್ನು ಮಾಡುವ ಮೂಲಕ ಬಾಲ್ಯ ವಿವಾಹಗಳನ್ನು ನಿಯಂತ್ರಣ ಮಾಡಲು ಎಲ್ಲಾರು ಒಟ್ಟಾಗಿ ಸೇರಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಹೇಮಂತ ಕುಮಾರ್, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿ.ಪಂ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ ಶೆಟ್ಟಪ್ಪನವರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ.ಲಿಂಗರಾಜು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಂತಸ್ವಾಮಿ ಪೂಜಾರ್, ಯುನಿಸ್ಸೆಫ್ ಮಕ್ಕಳ ರಕ್ಷಣ ಯೋಜನೆಯ ಸಂಯೋಜಕ ಹರೀಶ್ ಜ್ಯೋಗಿ ಸೇರಿದಂತೆ ಇಲಾಖೆಗಳ ಅಧಿಕಾರಿಗಳು, ತಹಶೀಲ್ದಾರರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್