ಆಲೂಗಡ್ಡೆ ಬೆಳೆ ಕ್ಷೇತ್ರೋತ್ಸವ : ಹೊಸ ತಳಿಗಳ ಬೆಳೆಯಲು ಸಲಹೆ
ಹಾಸನ, 10 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆಯ ಪ್ರದೇಶವು ಕ್ಷೀಣಿಸುತ್ತಿದ್ದು, ರೈತರು ಹೊಸ ತಳಿಗಳನ್ನು ಆಯ್ಕೆ ಮಾಡಿಕೊಂಡು ಹೊಸ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವುದು ಪ್ರಸ್ತುತ ಅಗತ್ಯವಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರಾದ ಯೋಗೇಶ್ ಹೆಚ್.ಆರ್ ಅವರು ತಿಳಿ
ಆಲೂಗಡ್ಡೆ ಬೆಳೆ ಕ್ಷೇತ್ರೋತ್ಸವ : ಹೊಸ ತಳಿಗಳ ಬೆಳೆಯಲು ಸಲಹೆ


ಹಾಸನ, 10 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆಯ ಪ್ರದೇಶವು ಕ್ಷೀಣಿಸುತ್ತಿದ್ದು, ರೈತರು ಹೊಸ ತಳಿಗಳನ್ನು ಆಯ್ಕೆ ಮಾಡಿಕೊಂಡು ಹೊಸ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವುದು ಪ್ರಸ್ತುತ ಅಗತ್ಯವಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರಾದ ಯೋಗೇಶ್ ಹೆಚ್.ಆರ್ ಅವರು ತಿಳಿಸಿದ್ದಾರೆ.

ತೋಟಗಾರಿಕೆ ಇಲಾಖೆ ಹಾಗೂ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಸೋಮನಹಳ್ಳಿಕಾವಲು ಮತ್ತು ಸಿರಿ ಇಕೋ ಅಗ್ರೀ ಸಲ್ಯೂಷನ್ಸ್ ಪ್ರೈ, ಲಿ., ಹಾಸನ ರವರ ಸಂಯುಕ್ತಾಶ್ರಯದಲ್ಲಿ ಸಾಲಗಾಮೆ ಹೋಬಳಿಯ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಬ್ಬೇನಹಳ್ಳಿ ಗ್ರಾಮದ ರವಿಕುಮಾರ್ ರವರ ಜಮೀನಿನಲ್ಲಿ ಏರ್ಪಡಿಸಲಾಗಿದ್ದ ಆಲೂಗಡ್ಡೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಂಗಮಾರಿ ರೋಗ ನಿರೋಧಕ ಶಕ್ತಿಹೊಂದಿದ್ದು, ದುಂಡನೆಯ ಗಡ್ಡೆಗಳನ್ನು ಸಹ ನೀಡಬಲ್ಲ ತಳಿಯಾಗಿರುವ ಕುಫ್ರಿ ಕರಣ್ ತಳಿಯನ್ನು ಹೆಚ್ಚಾಗಿ ಬೆಳೆಯಬೇಕು ಎಂದರು.

ಹಿಮಾಚಲ ಪ್ರದೇಶದ ಕೇಂದ್ರೀಯ ಆಲೂಗಡ್ಡೆ ಸಂಶೋಧನಾ ಕೇಂದ್ರವು 2020 ರಲ್ಲಿ ಬಿಡುಗಡೆ ಮಾಡಿರುವ ಕುಫ್ರಿ ಕರಣ್ ಹೊಸ ತಳಿಯು ಆಲೂಗಡ್ಡೆ ದಪ್ಪ ಎಲೆಗಳನ್ನು ಹೊಂದಿದೆ. ಈ ತಳಿಯು ಕುಫ್ರಿ ಜ್ಯೋತಿ ತಳಿಯಂತೆ ಗಡ್ಡೆಗಳನ್ನು ಹೋಲುತ್ತದೆ ಹಾಗೂ ಇದಕ್ಕೆ ಶೀಲೀಂದ್ರ, ನಂಜಾಣು ಹಾಗೂ ವೈರಸ್ ನಿಂದ ಬರುವ ರೋಗಗಳಿಗೆ ನಿರೋಧಕ ಶಕ್ತಿಯನ್ನು ಹೊಂದಿದೆ. ಆದ್ದರಿಂದ ರೈತರು ಇದನ್ನು ಹೆಚ್ಚಾಗಿ ಬೆಳೆಯಬೇಕು ಎಂದು ತಿಳಿಸಿದರು.

ಹಾಸನ ತಾಲ್ಲೂಕಿನಲ್ಲಿ ಹಲವು ವರ್ಷಗಳಿಂದಲೂ ಕುಫ್ರಿ ಜ್ಯೋತಿ ಆಲೂಗಡ್ಡೆ ತಳಿಯನ್ನು ಬೆಳೆಯುತ್ತಿದ್ದು, ತಳಿಗಳಲ್ಲಿ ವೈವಿಧ್ಯ ಇಲ್ಲದೆ ಒಂದೇ ತಳಿಯ ಮೇಲೆ ರೈತರು ಅವಲಂಬಿತರಾಗಿದ್ದರು. 10 ವರ್ಷಗಳಿಂದ ಕುಫ್ರಿ ಹಿಮಾಲಿನಿ ತಳಿಯು ಅಂಗಮಾರಿ ರೋಗ ನಿರೋಧಕ ಶಕ್ತಿ ಹೊಂದಿದೆ ಎಂದು ಕೆಲವು ರೈತರು ಬೆಳೆದರಾದರೂ, ಕುಫ್ರಿ ಜ್ಯೋತಿ ತಳಿಯನ್ನು ಮೀರಿ ಕುಫ್ರಿ ಹಿಮಾಲಿನಿ ತಳಿಯು ಹೆಚ್ಚಿನ ಪ್ರದೇಶವನ್ನು ಆಕ್ರಮಿಸಲಿಲ್ಲ. ಕುಫ್ರಿ ಹಿಮಾಲಿನಿಯು ಕುಫ್ರಿ ಜ್ಯೋತಿಯಷ್ಟು ದುಂಡಗಿನ ಗಡ್ಡೆಗಳನ್ನು ಕೊಡದಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ ಎಂದರು.

ಸAಶೋಧನಾ ಕೇಂದ್ರವು ಹಲವು ತಳಿಗಳನ್ನು ಬಿಡುಗಡೆ ಮಾಡಿದ್ದರೂ ಜಿಲ್ಲೆಯ ರೈತರಿಗೆ ಎಲ್ಲಾ ತಳಿಗಳ ಬೀಜವೂ ಮಾರುಕಟ್ಟೆಯಲ್ಲಿ ದೊರಕುತ್ತಿಲ್ಲ. ‘ಕುಫ್ರಿ ಕರಣ್‘ ತಳಿಯನ್ನು ಕಳೆದ ಸಾಲಿನಲ್ಲಿ ಅರಕಲಗೂಡು ತಾಲ್ಲೂಕಿನ ಬೈಚನಹಳ್ಳಿ ಗ್ರಾಮದ ದಯಾನಂದ್ ರವರು ಕುಡಿಕಾಂಡ ಸಸಿಗಳಿಂದ ಬೀಜೋತ್ಪಾದನೆ ಮಾಡಿದ್ದಾರೆ. ಉತ್ಪಾದನೆಯಾದ ಬೀಜವನ್ನು ಸಂಗ್ರಹಿಸಿ ಈ ಮುಂಗಾರು ಹಂಗಾಮಿನಲ್ಲಿ ಸಾಲಗಾಮೆ ಹೋಬಳಿ ಉಬ್ಬೇನಹಳ್ಳಿ ಗ್ರಾಮದ ರವಿಕುಮಾರ್ ರವರು ಬೆಳೆದಿದ್ದು, ಬೆಳೆಯು ‘ಕುಫ್ರಿ ಜ್ಯೋತಿ‘ ಮತ್ತು ‘ಕುಫ್ರಿ ಹಿಮಾಲಿನಿ‘ ತಳಿಗಳಿಗಿಂತಲೂ ಉತ್ತಮವಾಗಿ ಬೆಳವಣಿಗೆ ಹೊಂದಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸೋಮನಹಳ್ಳಿಕಾವಲು ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಹಾಯಕ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ನಟರಾಜ್ ಎಸ್. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಕೆ, ಡಾ. ಮಂಜುನಾಥ್ ಜೆ ಶೆಟ್ಟಿ, ನಿಟ್ಟೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಯೋಗೇಶ್, ಸಿರಿ ಇಕೋ ಅಗ್ರೀ ಸಲ್ಯೂಷನ್ಸ್ ಪ್ರೈ. ಲಿ. ನಿರ್ದೇಶಕರಾದ ಸುಹಾಸ್ ಎಸ್ ಮತ್ತು ರವೀಂದ್ರನಾಥ ರೆಡ್ಡಿ, ತೋಟಗಾರಿಕೆ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande