ಬೆಂಗಳೂರು, 10 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳು ಕೈಗೊಳ್ಳಲಾಯಿತು.
ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅಡಿ ಒಟ್ಟು 47,848 ಮನೆಗಳು ಮಂಜೂರಾಗಿದ್ದು, ಇದರಲ್ಲಿ 13,303 ಮನೆಗಳು ಬಹುತೇಕ ಪೂರ್ಣಗೊಂಡಿವೆ. ಇನ್ನೂ 25,815 ಮನೆಗಳು ನಿರ್ಮಾಣ ಹಂತದಲ್ಲಿವೆ. ಫಲಾನುಭವಿಗಳ ವಂತಿಕೆಯ ರೂಪದಲ್ಲಿ ₹134 ಕೋಟಿ ಸಂಗ್ರಹಗೊಂಡಿದೆ. ಮೊದಲ ಹಂತದ 7,900 ಮನೆಗಳು ಬಹುತೇಕ ಪೂರ್ಣಗೊಂಡಿದ್ದರೂ, ಫಲಾನುಭವಿಗಳಿಂದ ಪಡೆಯಬೇಕಾದ ₹216 ಕೋಟಿ ಬಾಕಿಯಿದೆ. ಈ ಮೊತ್ತ ಪಾವತಿಗಾಗಿ ಹುಡ್ಕೋದಿಂದ ಸಾಲ ಪಡೆಯುವ ಕುರಿತು ಪ್ರಸ್ತಾವನೆ ಸಿದ್ಧಪಡಿಸಲು ಮುಖ್ಯಮಂತ್ರಿ ಸೂಚಿಸಿದರು.
ಸ್ಲಂ ಬೋರ್ಡ್ ಅಡಿಯಲ್ಲಿ 42,000 ಮನೆಗಳು ನಿರ್ಮಾಣ ಹಂತದಲ್ಲಿದ್ದು, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಗಾಗಿ ಅನುದಾನ ಒದಗಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಯಿತು.
ಅಂಬೇಡ್ಕರ್ ವಸತಿ ಯೋಜನೆ (ಗ್ರಾಮೀಣ) ಅಡಿಯಲ್ಲಿ ಬಜೆಟ್‌ನಲ್ಲಿ ₹900 ಕೋಟಿ ಮೀಸಲಿಡಲಾಗಿದೆ. ಈ ಯೋಜನೆಯಡಿ ಒಟ್ಟು 94,939 ಮನೆಗಳು ನಿರ್ಮಿಸಲು ಗುರಿ ನಿಗದಿಯಾಗಿದೆ. ಇದರಲ್ಲಿ 56,682 ಮನೆಗಳು ನಿರ್ಮಾಣ ಹಂತದಲ್ಲಿವೆ.
ವಸತಿ ಯೋಜನೆಗಳ ಅಡಿ ನಿರ್ಮಾಣವಾಗುತ್ತಿರುವ ಮನೆಗಳನ್ನು ಶೀಘ್ರ ಪೂರ್ಣಗೊಳಿಸಲು ಅಗತ್ಯವಿರುವ ಅನುದಾನ ಹಂಚಿಕೆ ಕುರಿತ ಪ್ರಸ್ತಾವನೆಗಳನ್ನು ಹಣಕಾಸು ಇಲಾಖೆಗೆ ಸಲ್ಲಿಸಲು ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa