ವಿಜಯಪುರ, 01 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಹಿಂದೂ ಧಾರ್ಮಿಕ ಆಚರಣೆಯಲ್ಲಿ ನಂಬಿಕೆ ಇಲ್ಲದ, ಮೂರ್ತಿ ಪೂಜೆಯನ್ನು ಒಪ್ಪದ, ತಮ್ಮ ಮಸೀದಿಗೆ ತಮ್ಮನ್ನ ಕರೆಯಿಸಿಕೊಳ್ಳದ ಸಾಹಿತಿ ಭಾನು ಮುಷ್ತಾಕ್ ಅವರನ್ನ ವಿಶ್ವವಿಖ್ಯಾತ ದಸರಾ ಉದ್ಘಾಟನೆಗೆ ಚಾಮುಂಡೇಶ್ವರಿ ಕರೆಯಿಸಿಕೊಳ್ಳಲು ಸಾಧ್ಯವೆ? ಇವರನ್ನು ಕರೆಯಲು ಮುಂದಾಗಿರುವ ಸರ್ಕಾರದ ಕ್ರಮ ಹಿಂದೂ ವಿರೋಧಿ ನೀತಿಯಾಗಿದೆ ಎಂದು ನಗರ ಬಿಜೆಪಿ ಮಂಡಲ ಅಧ್ಯಕ್ಷರು ಸಂದೀಪ ಪಾಟೀಲ ಝಳಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕನ್ನಡ ನಾಡಿನ ನಾಡಹಬ್ಬ ದಸರಾ ಉದ್ಘಾಟನೆ ಎಂದರೆ ತಾಯಿ ಚಾಮುಂಡೇಶ್ವರಿ ಮೂರ್ತಿ ಪೂಜೆ ನೆರವೇರಿಸಿ ತಾಯಿಗೆ ಪುಷ್ಪವೃಷ್ಟಿ ಮಾಡುವ ಪದ್ಧತಿ. ಇಂಥ ಹಿಂದೂ ಧಾರ್ಮಿಕ ಕಾರ್ಯವನ್ನು ಅನ್ಯಧರ್ಮೀಯರಿಂದ ಒಪ್ಪಲು ಸಾಧ್ಯವಿಲ್ಲದೆ ಇದ್ದಾಗ ಹಿಂದೂಗಳ ಭಾವನೆ ಕೆಣಕಲು ಹೊರಟಿರುವ ಸರ್ಕಾರದ ಕ್ರಮ ಖಂಡನೀಯ ಎಂದು ತಿಳಿಸಿದರು.
2023ರಲ್ಲಿ ಜನಸಾಹಿತ್ಯ ಸಭೆಯಲ್ಲಿ ಬಾನು ಮುಷ್ತಾಕ್ ಅವರು ಕನ್ನಡವನ್ನು ಭುವನೇಶ್ವರಿ ತಾಯಿಗೆ ಹೋಲಿಸಿ ಅರಿಷಿನ ಕುಂಕುಮ ಬಣ್ಣದ ಕನ್ನಡ ಧ್ವಜ ಮಾಡಿದ್ದೀರಿ; ಈ ಮಧ್ಯದಲ್ಲಿ ನಾನು ಅಲ್ಪಸಂಖ್ಯಾತ ಸಾಹಿತಿಯಾಗಿ ಎಲ್ಲಿ ನಿಲ್ಲಲಿ ಎಂದು ಕೇಳಿದ್ದರು. ಕನ್ನಡ ನಾಡಿನ ಭುವನೇಶ್ವರಿ ತಾಯಿಯ ಹಳದಿ ಕೆಂಪು ಧ್ವಜ ಒಪ್ಪದ ಇವರು, ಹಿಂದೂ ಧರ್ಮದೇವತೆ ಚಾಮುಂಡೇಶ್ವರಿಯನ್ನು ಒಪ್ಪಲು ಸಾಧ್ಯವೆ? ಎಂದಿದ್ದಾರೆ.
ಇವರನ್ನು ಹಿಂದೂ ಧಾರ್ಮಿಕ ಉತ್ಸವ ದಸರಾ ಉದ್ಘಾಟನೆಗೆ ಯಾವ ವಿಚಾರಕ್ಕಾಗಿ ಸರ್ಕಾರ ಕರೆದಿದೆ? 9 ದಿನಗಳ ಕಾಲ ತಾಯಿ ದುರ್ಗೆಯನ್ನು ಪೂಜಿಸಿ ಚಾಮುಂಡೇಶ್ವರಿ ದುಷ್ಟಶಕ್ತಿ ಮಹಿಷಾಸುರನನ್ನು ಸಂಹರಿಸಿದ ಈ ಹಬ್ಬ ಸಾಂಸ್ಕೃತಿಕ ಹಬ್ಬವಲ್ಲ; ಇದು ಹಿಂದೂ ಧಾರ್ಮಿಕ ಉತ್ಸವ ಹಿಂದೂಗಳ ಭಾವನೆಗೆ ಧಕ್ಕೆ ತರುವುದಕ್ಕೆ ಹೊರಟಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ಕೇಳಿದ್ದಾರೆ.
ಕನ್ನಡ ಭುವನೇಶ್ವರಿ, ನಾಡಿನ ಧ್ವಜ ಒಪ್ಪದ ಬಾನು ಮುಷ್ತಾಕ್ ರವರು, ಚಾಮುಂಡಿ ಬೆಟ್ಟ ಹತ್ತಕೂಡದು, ತಕ್ಷಣ ಸರ್ಕಾರ ಅವರಿಗೆ ನೀಡಿರುವ ಆಹ್ವಾನ ಹಿಂಪಡೆದು ಹಿಂದೂ ಧಾರ್ಮಿಕ ನಂಬಿಕೆಯಲ್ಲಿ ಅಚಲ ವಿಶ್ವಾಸ ಹೊಂದಿದ ಆಚಾರ ವಿಚಾರ ಬಲ್ಲವರನ್ನು ಆಹ್ವಾನಿಸಬೇಕು ಎಂದು ಒತ್ತಾಯಿಸಿದರು.
ಇಂಡಿ ಒಕ್ಕೂಟ ಶಬರಿಮಲೆಗೆ ಧಾರ್ಮಿಕ ನಂಬಿಕೆ ಇಲ್ಲದ ಸ್ಟಾಲಿನ್ ಕರೆಯುತ್ತಾರೆ, ಧರ್ಮಸ್ಥಳ ಬಗ್ಗೆ ಅನಾಮಿಕ ವ್ಯಕ್ತಿ ಬುರಡೆ ತಂದರೆ ಧರ್ಮಸ್ಥಳವನ್ನೆ ಅಗೆಯಲು ಪ್ರಾರಂಭಿಸುತ್ತಾರೆ. ಡಿಕೆಶಿಯವರು ಚಾಮುಂಡಿ ಬೆಟ್ಟ ಹಿಂದೂಗಳಿಗೆ ಮಾತ್ರ ಸಂಬಂದಿಸಿದ್ದಲ್ಲ ಎನ್ನುವ ಇವರು ರಾಜ್ಯದ ವಕ್ಪ್ ಆಸ್ತಿ ಇಡಿ ರಾಜ್ಯದ ಎಲ್ಲ ಜನಾಂಗದವರಿಗೆ ಸಂಬಂಧಿಸಿದ್ದು ಎಂದು ಹೇಳುವ ತಾಕತ್ತು ಇದೆಯಾ? ಇವರು ಎನು ಮಾಡಲು ಹೊರಟಿದ್ದಾರೆ? ಬಾನು ಮುಷ್ತಾಕ್ ಒಬ್ಬರು ಸಾಹಿತಿ. ಅದರ ಬಗ್ಗೆ ಗೌರವ ಇದೆ; ಆದರೆ ಧಾರ್ಮಿಕತೆಯಲ್ಲಿ ನಂಬಿಕೆ ಇಲ್ಲದ ಅವರನ್ನು ಕರೆದರೆ, ಅವರು ಧಾರ್ಮಿಕ ಉತ್ಸವಕ್ಕೆ ದೀಪವನ್ನು ಬೆಳಗುತ್ತಾರಾ? ಚಾಮುಂಡೇಶ್ವರಿಯನ್ನು ನಂಬುತ್ತಾರಾ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.
ಇದನ್ನು ಸ್ಪಷ್ಟಪಡಿಸಿದ ನಂತರ ಅವರನ್ನ ಉದ್ಘಾಟನೆಗೆ ಕರೆಯಲಿ; ಇಲ್ಲದಿದ್ದರೆ ಅಹ್ವಾನ ಹಿಂಪಡೆಯಬೇಕು. ಇದನ್ನು ಒಪ್ಪಲು ಸಾಧ್ಯವೆ ಇಲ್ಲ. ದಸರಾದಲ್ಲಿ ಸಾಂಸ್ಕೃತಿಕ ಉತ್ಸವ ಒಂದು ಭಾಗ ಅದರಲ್ಲಿ ಭಾಗವಹಿಸಿದ್ದಾರೆ ಎಂದರೆ ಮೂರ್ತಿ ಪೂಜೆ ಮಾಡದವರನ್ನು ಕರೆಯುವುದು ಸರಿಯಲ್ಲ ಎಂದು ಟೀಕಿಸಿದರು.
ಚಾಮುಂಡೇಶ್ವರಿ ಬೆಟ್ಟಕ್ಕೆ ಹೋಗಿದ್ದಾರೆ ಎಂದರೆ ಅವರು ಮೂರ್ತಿಪೂಜೆ ಒಪ್ಪಲ್ಲ. ಕುವೆಂಪು ಅವರು ಕರ್ನಾಟಕವು ಭಾರತ ಮಾತೆಯ ತನುಜಾತೆ ಎಂದಿದ್ದಾರೆ. ಬಾನು ಅವರು ಕನ್ನಡ ತಾಯಿಗೆ ಅಪಮಾನ ಮಾಡಿದ ರೀತಿಯಲ್ಲಿ ಚಾಮುಂಡೇಶ್ವರಿ ತಾಯಿಯನ್ನು ಒಪ್ಪದೆ ಆ ತಾಯಿಗೂ ಅಪಮಾನ ಮಾಡುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಸರ್ಕಾರ ಏನು ಮಾಡಲು ಹೊರಟಿದೆ? ಎಂದು ತರಾಟೆಗೆ ತೆಗೆದುಕೊಂಡರು.
ಹಿಂದೂಸ್ತಾನ್ ಸಮಾಚಾರ್ / jyothi deshpande