ರಾಯಚೂರು, 01 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಬೆಂಗಳೂರು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರಾಯಚೂರು ಇವರ ಸಹಯೋಗದಲ್ಲಿ ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ರಾಯಚೂರು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ ಅವರು ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಕ್ರೀಡೆಗಳು ಮಹತ್ವ ಪಡೆದುಕೊಳ್ಳುತ್ತವೆ. ಓದು-ಬರಹದ ಜತೆ ಕ್ರೀಡೆಗಳಲ್ಲಿ ಭಾಗವಹಿಸುವವರ ಜೀವನ ಪರಿಪೂರ್ಣವಾಗಿರುತ್ತದೆ. ಕ್ರೀಡಾಪಟುಗಳು ಶಿಸ್ತನ್ನು ಸಹ ಮೈಗೂಡಿಸಿಕೊಳ್ಳುವುದು ಮುಖ್ಯ. ಹಾಗೆ ಮಾಡುವುದರಿಂದ ಕ್ರೀಡೆಯಲ್ಲಿ ಯಶಸ್ಸಿನ ಜತೆ ಜೀವನದಲ್ಲಿ ಸಾಧನೆ ಮಾಡಿದಂತಾಗುತ್ತದೆ ಎಂದರು.
ಈ ವೇಳೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಕೃಷ್ಣ ಶಾವಂತಗೇರಿ ಅವರು ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಅವುಗಳಿಗೆ ಅಂಜದೇ ಪ್ರತಿಯೊಬ್ಬರು ಕ್ರೀಡಾ ಸ್ಪೂರ್ತಿ ಬೆಳೆಸಿಕೊಂಡು ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವೀರೇಶ ನಾಯಕ ಅವರು ಮಾತನಾಡಿ, ಈಗಾಗಲೇ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಯಶಸ್ವಿಯಾಗಿ ನೆರವೇರಿಸಲಾಗಿದ್ದು, ತಾಲ್ಲೂಕು ಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಿಜೇತರಾದವರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿ, ನಂತರ ವಿಭಾಗದ ಮಟ್ಟದ ವಿಜೇತ ಕ್ರೀಡಾಪಟುಗಳು ರಾಜ್ಯಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗುವರು. ರಾಜ್ಯಮಟ್ಟದ ದಸರಾ ಕ್ರೀಡಾಕೂಟವು ಸೆಪ್ಟೆಂಬರ್ 22 ರಿಂದ 25 ರವರೆಗೆ ಮೈಸೂರಿನ ಚಾಮುಂಡಿ ವಿಹಾರದ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪುರುಷರು ಹಾಗೂ ಮಹಿಳಾ ಕ್ರೀಡಾಪಟುಗಳು ಆನ್‍ಲೈನ್ ನೋಂದಣಿ ಮಾಡಿಕೊಂಡಿದ್ದಾರೆ. ಹೆಚ್ಚು ಕ್ರೀಡಾಪುಟಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಖೋಖೋ, ಕಬಡ್ಡಿ ಬ್ಯಾಸ್ಕೇಟ್ ಬಾಲ್, ಕುಸ್ತಿ, ಬ್ಯಾಡ್ಮಿಂಟನ್, ಹಾಕಿ, ಹ್ಯಾಂಡ್ ಬಾಲ್, ಟೇಬಲ್ ಟೆನ್ನಿಸ್, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್ ಸೇರಿದಂತೆ ವಿವಿಧ ವಿಭಾಗಗಳ ಸ್ಪರ್ಧೆಗಳಲ್ಲಿ ಪುರುಷ ಮತ್ತು ಮಹಿಳಾ ಸ್ಪರ್ಧಿಗಳು ಹುಮ್ಮಸ್ಸಿನಿಂದ ಭಾಗವಹಿಸಿ ಗೆಲುವಿಗಾಗಿ ಸೆಣಸಾಡಿದರು. ಇದೇ ಸಂದರ್ಭದಲ್ಲಿ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಪರಶುರಾಮ ಸೇರಿದಂತೆ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್