ಕೊಪ್ಪಳ, 01 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಎಂಡೋಮೆಂಟ್ ಸೇವಿಂಗ್ಸ್ ಪ್ಲಾನ್ ಪ್ಲಸ್ ಪಾಲಿಸಿ ಪರಿಹಾರದ ಮೊತ್ತವನ್ನು ನೀಡುವಲ್ಲಿ ನಿರ್ಲಕ್ಷ್ಯ ಹಾಗೂ ಸೇವಾ ನ್ಯೂನ್ಯತೆ ಎಸಗಿದ ಪಿಎನ್‍ಬಿ ಮೆಟ್ ಲೈಫ್ ಇಂಡಿಯಾ ಇನ್ಸುರೆನ್ಸ್ ಕಂಪನಿ ಲಿ. ಮುಂಬೈ ಅವರಿಗೆ ದೂರುದಾರರಿಗೆ ಬಡ್ಡಿಸಹಿತ ವಿಮಾ ಮೊತ್ತವನ್ನು ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿಸಿದೆ.
ಗಂಗಾವತಿ ತಾಲ್ಲೂಕಿನ ಬಟ್ಟನರಸಪೂರ ಗ್ರಾಮದ ದಿವಂಗತ ವಿರುಪಣ್ಣ ಎಂಬುವವರು ತಮ್ಮ ಜೀವಿತ ಕಾಲದಲ್ಲಿ ದಿ:06-05-2016 ರಂದು ಪಿಎನ್‍ಬಿ ಮೆಟ್ ಲೈಫ್ ಇಂಡಿಯಾ ಇನ್ಸುರೆನ್ಸ್ ಕಂಪನಿ ಲಿ. ಮುಂಬೈ ಇವರಲ್ಲಿ ವಾರ್ಷಿಕ ರೂ.25,719/- ಗಳ ಪ್ರೀಮಿಯಂ ಪಾವತಿಸಿ ಎಂಡೋಮೆಂಟ್ ಸೇವಿಂಗ್ಸ್ ಪ್ಲಾನ್ ಪ್ಲಸ್ ಪಾಲಿಸಿಯನ್ನು ಪಡೆದುಕೊಂಡಿದ್ದರು. ಆದರೆ ಪಾಲಿಸಿದಾರರಾದ ವಿರುಪಣ್ಣ ಅವರು ದಿ:12-03-2017 ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಅವರ ನಾಮಿನಿಯಾದ ಅವರ ಪತ್ನಿ ತಿಮಮ್ಮ ಅವರು ವಿಮಾ ಕಂಪನಿಯಲ್ಲಿ ಪಾಲಿಸಿಯನ್ನು ಪಡೆದ ವಿಷಯ ತಿಳಿದು ಕ್ಲೇಮ್ ಫಾರಂ ಭರ್ತಿ ಮಾಡಿ, ಎಲ್ಲ ದಾಖಲಾತಿಗಳನ್ನು ವಿಮಾ ಕಂಪನಿಗೆ ನೀಡಿ ವಿಮಾ ಪರಿಹಾರ ಮೊತ್ತವನ್ನು ಪಾವತಿಸುವಂತೆ ವಿನಂತಿಸಿದ್ದರು.
ವಿಮಾ ಕಂಪನಿಯವರು ಕ್ಲೇಮ್‍ನ್ನು ಸ್ವೀಕರಿಸಿ ವಿಮಾದಾರರು ಪಾಲಿಸಿ ಪಡೆಯುವ ಸಂದರ್ಭದಲ್ಲಿ ತಪ್ಪಾದ ಮಾಹಿತಿಯನ್ನು ನಮೂದಿಸಿದ್ದಾರೆ ಎನ್ನುವ ಕಾರಣಕ್ಕೆ ಪಾಲಿಸಿ ಕ್ಲೇಮ್ ಅನ್ನು ತಿರಸ್ಕಾರ ಮಾಡಿದ್ದರು. ಈ ಕುರಿತು ವಿಮಾ ಕಂಪನಿ ವಿರುದ್ಧ ತಿಮಮ್ಮ ಅವರು ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರು ದಾಖಲಿಸಿಕೊಂಡ ಆಯೋಗವು ದೂರುದಾರರಾದ ತಿಮಮ್ಮ ಗಂಡ ದಿ:ವಿರುಪಣ್ಣ ಹಾಗೂ ಎದುರಾರರಾದ ವಿಮಾ ಕಂಪನಿಯವರ ವಾದ ಪ್ರತಿವಾದಗಳನ್ನು ಆಲಿಸಿದ ನಂತರ ಜಿಲ್ಲಾ ಆಯೋಗದ ಅಧ್ಯಕ್ಷರಾದ ಜಿ.ಇ.ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯರಾದ ರಾಜು ಎನ್.ಮೇತ್ರಿ ರವರು ಎದುರುದಾರರು ಪಾಲಿಸಿಯ ಪರಿಹಾರದ ಮೊತ್ತ ನೀಡದೇ ನಿರ್ಲಕ್ಷ್ಯ ತೋರಿ ಸೇವಾ ನ್ಯೂನ್ಯತೆ ಎಸಗಿದ್ದರಿಂದ ಎಂಡೋಮೆಂಟ್ ಸೇವಿಂಗ್ಸ್ ಪ್ಲಾನ್ ಪ್ಲಸ್ ಪಾಲಿಸಿಯ ಒಟ್ಟು ಮೊತ್ತ ರೂ.6,87,600/- ಪರಿಹಾರಕ್ಕೆ ವಾರ್ಷಿಕ ಶೇ.6 ರ ಬಡ್ಡಿ ಸಮೇತ ದೂರಿನ ದಿನಾಂಕದಿಂದ ಪಾವತಿಯಾಗುವವರೆಗೆ ದೂರುದಾರರಿಗೆ ಪಾವತಿಸುವಂತೆ ಆದೇಶಿಸಿರುತ್ತಾರೆ.
ಹಾಗೂ ದೂರುದಾರರಿಗೆ ಉಂಟಾದ ಮಾನಸಿಕ ಯಾತನೆಗಾಗಿ ರೂ.10,000/- ಗಳನ್ನು ಹಾಗೂ ದೂರಿನ ಖರ್ಚು ರೂ.5,000/- ಗಳನ್ನು 45 ದಿನಗಳ ಒಳಗಾಗಿ ಎದುರುದಾರರು ದೂರುದಾರರಿಗೆ ಪಾವತಿಸುವಂತೆ ಆದೇಶ ನೀಡಿರುತ್ತಾರೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್