ಗದಗ, 01 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಸಮಗ್ರ ಮೀನುಗಾರಿಕೆ ಸಾಕಾಣಿಕೆ ಗ್ರಾಮೀಣ ಮಹಿಳೆಯರ ಸ್ವಾವಲಂಬನೆಯತ್ತ ಸಾಗಲು ಇರುವ ಮಹತ್ತರ ಹೆಜ್ಜೆಯಾಗಿದ್ದು, ಪ್ರಯೋಗಾತ್ಮಕವಾಗಿ ಮೀನುಗಾರಿಕೆ ಕಲಿಕೆಯನ್ನು ಒದಗಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಮಾನ್ಯ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು ತಿಳಿಸಿದರು.
ಗದಗ ತಾಲೂಕಿನ ಹುಲಕೋಟಿಯಲ್ಲಿ ಜಿಲ್ಲೆಯ ತಾಲೂಕಿನ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಹಮ್ಮಿಕೊಂಡ ಸಮಗ್ರ ಮೀನುಗಾರಿಕೆ ಸಾಕಾಣಿಕೆ ಮತ್ತು ನಿರ್ವಹಣೆ ಕುರಿತು ಎರಡು ದಿನಗಳ ತರಬೇತಿ ಶಿಬಿರವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ಸಂಜೀವಿನಿ ಯೋಜನೆಯ ಮೂಲಕ ಗ್ರಾಮೀಣ ಮಹಿಳೆಯರು ಆರ್ಥಿಕ ಮುಂದೆ ಬಂದಿದ್ದಾರೆ. ಅದೇ ರೀತಿ ಮೀನುಗಾರಿಕೆಯನ್ನು ಸಹ ವೈಜ್ಞಾನಿಕವಾಗಿ ಮಾಡುವ ಮೂಲಕ ಯಶಸ್ಸು ಗಳಿಸುವತ್ತ ದಿಟ್ಟ ಹೆಜ್ಜೆ ಹಾಕುವಂತೆ ಪ್ರೋತ್ಸಾಹಿಸಿದರು.
ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು ನಾಗರಾಜರವರು ಮಾತನಾಡಿ, ಮೀನುಗಾರಿಕೆಯನ್ನು ವೈಜ್ಞಾನಿಕ ರೀತಿಯಲ್ಲಿ ಅಳವಡಿಸಿಕೊಂಡರೆ ಗ್ರಾಮೀಣ ಕುಟುಂಬಗಳಿಗೆ ಹೆಚ್ಚುವರಿ ಆದಾಯ ಗಳಿಕೆ ಮಾಡಬಹುದು. ಸ್ವ-ಸಹಾಯ ಗುಂಪುಗಳು ಈ ತರಬೇತಿಯಲ್ಲಿ ಸಿಗುವ ಜ್ಞಾನವನ್ನು ಬಳಸಿಕೊಂಡು ಸಮೂಹವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಸಂಜೀವಿನಿ ಯೋಜನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಘುನಾಥ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ತರಬೇತಿಯಲ್ಲಿ ಕಲಿತ ತಂತ್ರಗಳನ್ನು ಕಾರ್ಯರೂಪಕ್ಕೆ ತಂದು, ಗುಂಪಿನ ಸದಸ್ಯರು ಸಮೂಹ ಆಧಾರಿತ ಉತ್ಪಾದನೆ ಮಾಡಿದರೆ, ಮಾರುಕಟ್ಟೆ ಸಂಪರ್ಕ ಸುಲಭವಾಗುತ್ತದೆ ಎಂದು ತಿಳಿಸಿದರು.
ತರಬೇತಿಯಲ್ಲಿ ಮೀನುಗಾರಿಕೆಯ ವೈಜ್ಞಾನಿಕ ವಿಧಾನಗಳು, ಕೆರೆ-ಕೊಳಗಳ ನಿರ್ವಹಣೆ, ಮೀನುಗಳಿಗೆ ಆಹಾರ ಮತ್ತು ಆರೈಕೆ ವಿಧಾನಗಳು, ರೋಗ ನಿರ್ವಹಣೆ ಹಾಗೂ ಮಾರುಕಟ್ಟೆ ಸಂಪರ್ಕ ಕುರಿತು ಸವಿವರವಾಗಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ನಾರಾಯಣಪೂರ ಡ್ಯಾಮ್‌ನ ಉಪನಿರ್ದೇಶಕರು ಸಿದ್ದಪ್ಪ ಸುರಗಿಹಳ್ಳಿ ಅವರ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಇಂತಹ ತರಬೇತಿಗಳು ನಮ್ಮ ಜೀವನೋಪಾಯಕ್ಕೆ ದಾರಿದೀಪವಾಗುತ್ತವೆ. ನಾವು ಕಲಿತದ್ದನ್ನು ನಮ್ಮ ಗ್ರಾಮದ ಗುಂಪುಗಳೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಾದ ರಾಜೇಶ್ವರಿ ಬಿನ್ನಾಳ ಮತ್ತು ಗೀತಾ ಶಿರಹಟ್ಟಿ ಸಂತಸ ವ್ಯಕ್ತಪಡಿಸಿದರು.
ಗದಗ ಜಿಪಂ ಯೋಜನಾ ನಿರ್ದೇಶಕ ಎಂ.ವಿ.ಚಳಗೇರಿ ಮತ್ತು ಜಿಲ್ಲಾ ಉಪವಿಭಾಗೀಯ ಅಧಿಕಾರಿ ಗಂಗಪ್ಪ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಸಂಜೀವಿನಿ ಯೋಜನೆಯ ಸಿಬ್ಬಂದಿಗಳು ಮತ್ತು ಮಹಿಳಾ ಗುಂಪುಗಳ ಸದಸ್ಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP