ದಾವಣಗೆರೆ, 01 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ದಾವಣಗೆರೆಯ ಎಸ್ ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ ವೈದ್ಯರು ಮೊದಲ ಬಾರಿಗೆ ಸಂಕೀರ್ಣ ಯಕೃತ್ ಶಸ್ತ್ರಚಿಕಿತ್ಸೆ (ಲಿವರ್ ಸರ್ಜರಿ) ಯಶಸ್ವಿಯಾಗಿ ನೆರವೇರಿಸಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 72 ವರ್ಷದ ರೋಗಿಯೊಬ್ಬರಿಗೆ ಹೊಸ ಜೀವ ನೀಡಿದ್ದಾರೆ.
ಶಸ್ತ್ರಚಿಕಿತ್ಸಕ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಆರ್.ಕೆ. ಹನುಮಂತ ನಾಯ್ಕ್ ಅವರ ನೇತೃತ್ವದ ತಂಡ ಸುಮಾರು ಏಳು ಗಂಟೆಗಳ ಕಾಲ ಪೋಸ್ಟೀರಿಯರ್ ಸೆಕ್ಷನೆಕ್ಟಮಿ ಶಸ್ತ್ರಚಿಕಿತ್ಸೆ ನಡೆಸಿತು.
ಈ ವೇಳೆ ಲಿವರ್‌ನ ರೋಗಪೀಡಿತ ಸೆಗ್ಮೆಂಟ್ 6 ಮತ್ತು 7 ಭಾಗವನ್ನು ಮಾತ್ರ ತೆಗೆದುಹಾಕಿ, ಉಳಿದ ಆರೋಗ್ಯಕರ ಭಾಗವು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಲಾಯಿತು ಎಂದು ಡಾ.ನಾಯ್ಕ್ ತಿಳಿಸಿದ್ದಾರೆ.
ಹೆಪಟೋಸೆಲ್ಯುಲರ್ ಕ್ಯಾನ್ಸರ್‌ನ ಎರಡನೇ ಹಂತ (ಗ್ರೇಡ್ ಬಿ) ಹೊಂದಿದ್ದ ಈ ವೃದ್ಧ ರೋಗಿಗೆ ಹೊಟ್ಟೆ ನೋವು, ಹಸಿವಿನ ಕೊರತೆ, ತೂಕ ಇಳಿಕೆ ಮೊದಲಾದ ಸಮಸ್ಯೆಗಳಿದ್ದವು. ಯಕೃತ್‌ನ ಆಳದಲ್ಲಿರುವ, ಪ್ರಮುಖ ರಕ್ತನಾಳಗಳ ಹತ್ತಿರವಿದ್ದ ಪೀಡಿತ ಭಾಗವನ್ನು ತೆಗೆದುಹಾಕುವುದು ತಾಂತ್ರಿಕವಾಗಿ ಸವಾಲಿನ ವಿಷಯವಾಗಿತ್ತು. ಆದರೂ ನಮ್ಮ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿತು,ಎಂದು ಡಾ. ಹನುಮಂತ ನಾಯ್ಕ್ ಹೇಳಿದ್ದಾರೆ.
ಈ ಶಸ್ತ್ರಚಿಕಿತ್ಸೆಯ ನಂತರ ರೋಗಿ ಸಂಪೂರ್ಣವಾಗಿ ಗುಣಮುಖರಾಗಿದ್ದು, ಆಸ್ಪತ್ರೆಗೆ ಚಿಕಿತ್ಸೆ ಬಳಿಕ ಬಿಡುಗಡೆ ಮಾಡಲಾಗಿದೆ.
ಈ ಸಾಧನೆಯ ಕುರಿತು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಭಂಡಾರಿಗಲ್ ಮಾತನಾಡಿ , ದಾವಣಗೆರೆಯಲ್ಲಿ ಇದೇ ಮೊದಲ ಬಾರಿಗೆ ಇಂತಹ ಕಠಿಣ ಲಿವರ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರುವುದು ನಮಗೆ ಹೆಮ್ಮೆ. ಇದು ಮಧ್ಯ ಕರ್ನಾಟಕದ ಜನತೆಗೆ ವಿಶ್ವದರ್ಜೆಯ ಆರೋಗ್ಯ ಸೇವೆಗಳನ್ನು ಹತ್ತಿರ ತರಲು ನಮ್ಮ ಬದ್ಧತೆಯನ್ನು ಸಾರುತ್ತದೆ. ಶಸ್ತ್ರಚಿಕಿತ್ಸಾ ತಂಡವನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇವೆ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa