ಜನ ಔಷಧಿ ಕೇಂದ್ರ ಸ್ಥಗಿತದ ವಿಷಯದಲ್ಲಿ ಗೊಂದಲವಿಲ್ಲ : ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ
ಬೆಂಗಳೂರು, 06 ಆಗಸ್ಟ್ (ಹಿ.ಸ.) : ಆ್ಯಂಕರ್ : ರಾಜ್ಯದಲ್ಲಿ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜನ ಔಷಧಿ ಕೇಂದ್ರಗಳು ಯಥಾವತ್ತಾಗ
Gundurao


ಬೆಂಗಳೂರು, 06 ಆಗಸ್ಟ್ (ಹಿ.ಸ.) :

ಆ್ಯಂಕರ್ : ರಾಜ್ಯದಲ್ಲಿ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.

ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜನ ಔಷಧಿ ಕೇಂದ್ರಗಳು ಯಥಾವತ್ತಾಗಿ ಮುಂದುವರಿಯಲಿವೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಅದರ ಬೆನ್ನಲ್ಲೇ ಸಚಿವ ಗುಂಡೂರಾವ್ ಪ್ರತಿಸ್ಪಂದಿಸಿದ್ದು, “ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಮಾತ್ರ ಜನ ಔಷಧಿ ಕೇಂದ್ರಗಳ ಸ್ಥಾಪನೆಗೆ ನಿರ್ಬಂಧ ವಿಧಿಸಲಾಗಿದೆ. ಸಾರ್ವಜನಿಕರಿಗೆ ಉಚಿತ ಔಷಧಿಗಳು ದೊರಕುವ ವ್ಯವಸ್ಥೆಗೆ ಧಕ್ಕೆಯಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ” ಎಂದಿದ್ದಾರೆ.

ರಾಜ್ಯದಲ್ಲಿ ಒಟ್ಟು 1417 ಜನೌಷಧಿ ಕೇಂದ್ರಗಳಿದ್ದು, ಈ ಪೈಕಿ 184 ಮಾತ್ರ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಇದ್ದು, ಉಳಿದವು ಹೊರಗಡೆ ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕರು ತಮ್ಮ ಇಚ್ಛೆಯಂತೆ ಔಷಧಿಗಳನ್ನು ಖಾಸಗಿ ಕೇಂದ್ರಗಳಿಂದ ಖರೀದಿಸಬಹುದು ಎಂದು ಅವರು ವಿವರಿಸಿದ್ದಾರೆ.

“ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಅಗತ್ಯ ಔಷಧಿಗಳನ್ನು ಉಚಿತವಾಗಿ ಪೂರೈಸಲಾಗುತ್ತಿದ್ದು, ವೈದ್ಯರು ಖಾಸಗಿ ಮಳಿಗೆಗಳಿಗೆ ರೋಗಿಗಳನ್ನು ಕಳುಹಿಸುವುದನ್ನು ತಪ್ಪಿಸಲು ಈ ಮಾರ್ಗಸೂಚಿ ಜಾರಿಯಾಗಿದೆ” ಎಂದು ಅವರು ತಿಳಿಸಿದ್ದಾರೆ.

ಅದರೊಂದಿಗೆ, ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಯೋಜನೆ ಅಡಿಯಲ್ಲಿ ದೊರೆಯುವ ಔಷಧಿಗಳನ್ನು ರಾಜ್ಯ ಆರೋಗ್ಯ ಇಲಾಖೆ ತಾನೇ ಸರಾಸರಿ ದರದಲ್ಲಿ ಖರೀದಿಸಿಕೊಳ್ಳುವ ಸಾಧ್ಯತೆಯತ್ತವೂ ಸಚಿವರು ಕೇಂದ್ರದ ಗಮನ ಸೆಳೆದಿದ್ದಾರೆ.

“ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಔಷಧಿಗಳನ್ನು ಉಚಿತವಾಗಿ ನೀಡುವ ಮೂಲಕ ಬಡ ಮತ್ತು ಹಿಂದುಳಿದ ವರ್ಗದ ರೋಗಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶವಿದೆ. ಜನ ಔಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವ ಉದ್ದೇಶವೇ ಇಲ್ಲ” ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande