ವಿಜಯಪುರ, 06 ಆಗಸ್ಟ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ-ಹಾನಿಗೊಳಗಾಗುವ ಗ್ರಾಮ-ಪ್ರದೇಶಗಳಿಗೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರೀಶಿಲನೆ ನಡೆಸಿ ಕೂಡಲೇ ನಿಯಮಾನುಸಾರ ಪರಿಹಾರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರೂ ಆದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಕಳೆದ ರಾತ್ರಿ ವಾಡಿಕೆಗಿಂತ ಹೆಚ್ಚಾಗಿ ಅಂದರೆ 47ಎಂಎಂ ಮಳೆಯಾಗಿದ್ದು, ಅಲ್ಲದೇ, ಮುಂದಿನ 24 ಗಂಟೆಗಳಲ್ಲಿ ಮಳೆಯಾಗುವ ಸಂಭವವಿರುತ್ತದೆ. ಈ ಸಂದರ್ಭದಲ್ಲಿ ಯಾವುದೇ ಮಾನವ ಜೀವಹಾನಿ, ಜಾನುವಾರು ಹಾನಿ, ಮನೆಗಳ ಹಾನಿ, ಬೆಳೆ ಹಾನಿ, ಗೃಹೋಪಯೋಗಿ ವಸ್ತುಗಳ ಹಾನಿ ಹಾಗೂ ಮೂಲಭೂತ ಸೌಕರ್ಯಗಳ ಹಾನಿಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮಳೆಯಿಂದ ಹಾನಿಗೊಳಗಾದಲ್ಲಿ ನಿಯಮಾನುಸಾರ ಕೂಡಲೇ ಪರಿಹಾರ ವಿತರಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದ್ದಾರೆ.
ಅದರಂತೆ, ಶಿಥಿಲಾವ್ಯವಸ್ಥೆಯಲ್ಲಿರುವ ಜಿಲ್ಲೆಯ ಅಂಗನವಾಡಿ ಹಾಗೂ ಶಾಲೆ ಕೊಠಡಿಗಳಿದ್ದಲ್ಲಿ ಕೂಡಲೇ ಸುರಕ್ಷಿತ ಕಟ್ಟಡಗಳಿಗೆ ಸ್ಥಳಾಂತರಿಸಲು ಕ್ರಮವಹಿಸಿ ಮಕ್ಕಳ ರಕ್ಷಣೆ ಹಿತದೃಷ್ಟಿಯಿಂದ ಯಾವುದೇ ತೊಂದರೆಯಾಗದಂತೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದ್ದು, ಸಂಬಂಧಿಸಿದ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಮಳೆಯಿಂದಾಗುವ ಹಾನಿಯ ಕುರಿತು ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande