ಹುಬ್ಬಳ್ಳಿ, 06 ಆಗಸ್ಟ್ (ಹಿ.ಸ.) :
ಆ್ಯಂಕರ್ : ಹುಬ್ಬಳ್ಳಿಯಲ್ಲಿ ಕಾರ್ಯಾರಂಭ ಮಾಡಿರುವ ಇನ್ಫೋಸಿಸ್ ಸಂಸ್ಥೆ ಉತ್ತರ ಕರ್ನಾಟಕದ ತಂತ್ರಜ್ಞಾನ ಅಭಿವೃದ್ಧಿಗೆ ಮಹತ್ವದ ಉತ್ತೇಜನ ನೀಡಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಹುಬ್ಬಳ್ಳಿ ಇನ್ಫೋಸಿಸ್‌ನ ಅಭಿವೃದ್ಧಿ ಕೇಂದ್ರವನ್ನು ಉದ್ದಿಮೆ ಮತ್ತು ಬಹುಮುಖ ಸೇವೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಕೇಂದ್ರವು ಎಐ, ಸೈಬರ್ ಭದ್ರತೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಗಳಲ್ಲಿ ನವೋನ್ನತ ಸೇವೆಗಳನ್ನು ಒದಗಿಸಲು ಸಜ್ಜಾಗಿದೆ ಎಂದರು.
ಇದೊಂದು ಐಟಿ ಕ್ರಾಂತಿಗೆ ನಾಂದಿ, ಸ್ಥಳೀಯ ಪ್ರತಿಭೆಗೆ ಜಾಗತಿಕ ಅವಕಾಶ ಸೃಷ್ಟಿಸುವ ಹೂಡಿಕೆಯಾಗಿದೆ. ಕೆಲವೇ ವರ್ಷಗಳ ಹಿಂದೆ 200 ಉದ್ಯೋಗಿಗಳಿದ್ದ ಕ್ಯಾಂಪಸ್, ಇಂದು 1,000 ಕ್ಕೂ ಹೆಚ್ಚು ನುರಿತ ವೃತ್ತಿಪರರನ್ನು ಒಳಗೊಂಡಿದೆ ಎಂಬುದು ಹೆಮ್ಮೆಪಡುವ ವಿಷಯ” ಎಂದು ಹೇಳಿದರು.
ಐಐಐಟಿ ಧಾರವಾಡ ಮತ್ತು ಕೆಎಲ್‌ಇ ಟೆಕ್ ಸಂಸ್ಥೆಗಳೊಂದಿಗೆ ಸಹಯೋಗದ ಮೂಲಕ, ಉದ್ಯಮ ಮತ್ತು ಶಿಕ್ಷಣ ಕ್ಷೇತ್ರದ ಪಾಲುದಾರಿಕೆಗೆ ಈ ಕೇಂದ್ರ ಸಾಕ್ಷಿಯಾಗಿ, ಹುಬ್ಬಳ್ಳಿ-ಧಾರವಾಡವನ್ನು ನಾವೀನ್ಯತೆಯ ಪ್ರಮುಖ ಕೇಂದ್ರವಾಗಿ ರೂಪಿಸುತ್ತಿದೆ ಎಂದರು.
ಹುಬ್ಬಳ್ಳಿ ಮುಂಬರುವ ದಿನಗಳಲ್ಲಿ ಬೆಂಗಳೂರು ಐಟಿ ಕೇಂದ್ರವನ್ನೇ ಮೀರಬಹುದು ಎಂಬ ಭವಿಷ್ಯವನ್ನು ನಾವು ಕಾಣಬಹುದು. ಇದು ಸಮಗ್ರ, ಪ್ರಾದೇಶಿಕ ಸಮತೋಲನದ ಅಭಿವೃದ್ಧಿಗೆ ದಿಕ್ಕು ತೋರಿಸುವ ಹೂಡಿಕೆಯಾಗಿದೆ, ಎಂದು ಸಚಿವ ಪಾಟೀಲ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa