ಧಾರವಾಡ, 06 ಆಗಸ್ಟ್ (ಹಿ.ಸ.) :
ಆ್ಯಂಕರ್ : ಮನುಷ್ಯನಿಗೆ ತಗಲುವ ವಿವಿಧ ರೀತಿಯ ಹವ್ಯಾಸ, ದುಷ್ಚಟಗಳು ವ್ಯಸನಗಳಾದಾಗ ವ್ಯಕ್ತಿಯ ಬದುಕು ಕಷ್ಟಕರವಾಗಿ, ನಡತೆಯಲ್ಲಿ ದೂಷಿಯಾಗುತ್ತಾನೆ. ವ್ಯಸನದಿಂದ ಮುಕ್ತವಾಗುವುದು ವ್ಯಕ್ತಿತ್ವದ ಪರಿವರ್ತನೆಯ ಮೊದಲ ಪ್ರಯತ್ನವಾಗಿದೆ. ಬದುಕಿನಲ್ಲಿ ಅಳವಡಿಸಿಕೊಳ್ಳುವ ಉತ್ತಮ ಅಭ್ಯಾಸಗಳು ಸುಂದರವಾಗಿಸುತ್ತವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪರಶುರಾಮ್ ದೊಡ್ಡಮನಿ ಹೇಳಿದರು.
ಧಾರವಾಡ ಕೇಂದ್ರ ಕಾರಾಗೃಹದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ವಾರ್ತಾ ಇಲಾಖೆ, ಪೋಲೀಸ್ ಇಲಾಖೆ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಹಾಗೂ ಕೇಂದ್ರ ಕಾರಾಗೃಹ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಇಲಕಲ್ಲ ಡಾ. ಮಹಾಂತ ಅಪ್ಪಗಳ ಜನ್ಮದಿನದ ನಿಮಿತ್ತ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಉದ್ಘಾಟಿಸಿ, ಮಾತನಾಡಿದರು.
ಸಮಾಜದಲ್ಲಿ ಜನರು ಸಾಮಾಜಿಕವಾಗಿ, ಕೌಟುಂಬಿಕವಾಗಿ ನೆಮ್ಮದಿಯಿಂದ ಇರಬೇಕಾದರೆ ದುಶ್ಚಟಗಳಿಂದ ದೂರವಿರಬೇಕು ಮತ್ತು ದುಶ್ಚಟಗಳಿಗೆ ಬಲಿಯಾದವರು ಅದರಿಂದ ಹೊರಗಡೆ ಬಂದರೆ ಅದು ಸಾಧ್ಯವಾಗುತ್ತದೆ. ಒಂದು ಸಾರಿ ವ್ಯಸನಗಳನ್ನು ತ್ಯಜಿಸಿದ ನಂತರ ಮತ್ತೆ ಅದನ್ನು ಸೇವಿಸಿದರೆ ಡಾ.ಮಹಾಂತಪ್ಪನವರಿಗೆ ದ್ರೋಹ ಮಾಡಿದಂತೆ ಎಂದರು.
ವ್ಯಸನದಿಂದ ದೂರವಾದ ಮೇಲೆ ಮತ್ತೇ ಆ ಬಗ್ಗೆ ಯೋಚಿಸಬಾರದು. ವ್ಯಸನಿಗಳ ಸಹವಾಸದಿಂದ ದೂರವಿರಬೇಕು. ದುಶ್ಚಟಗಳಿಗೆ ಅಂಟಿಕೊಂಡರೆ ನಿಮ್ಮ ಮರ್ಯಾದೆಯನ್ನು ನೀವೇ ತೆಗೆದುಕೊಂಡ ಹಾಗೆ, ಸಮಾಜದಲ್ಲಿ ಎಂದಿಗೂ ಮಾದಕ ವ್ಯಸನಿಗಳಿಗೆ ಮರ್ಯಾದೆ ಇರುವುದಿಲ್ಲ. ಎಚ್ಚರಿಕೆಯಿಂದ ಜೀವನ ರೂಪಿಸಿಕೊಳ್ಳಬೇಕು, ದುಷ್ಚಟಗಳನ್ನು ಮಾಡುವುದಕ್ಕೂ ಮುನ್ನ ಅದರಿಂದ ಯಾವ ರೀತಿ ಮನಸ್ಸಿನ ಮೇಲೆ, ದೇಹದ ಮೇಲೆ ಪರಿಣಾಮಗಳು ಬೀರುತ್ತವೆ ಎಂಬುದನ್ನು ಅರ್ಥೈಸಿಕೊಂಡು, ಹೆಜ್ಜೆ ಇಡಿ. ಮನ ಪರಿವರ್ತನೆ ಆಗುವಂತಹ ಒಳ್ಳೆಯ ಪುಸ್ತಕಗಳನ್ನು ಓದಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಕೇಂದ್ರ ಕಾರಾಗೃಹದ ಅಧೀಕ್ಷಕ ಮಹಾದೇವ ನಾಯ್ಕ,
ಕಾರಾಗೃಹದ ಮನೋವೈದ್ಯ ಡಾ. ಲೋಕನಾಥ ಪುಠಾಣಿಕರ ಮತ್ತು ಜೈಲು ಅಧಿಕಾರಿಗಳಾದ ಮಹಾದೇವಿ ಮರಕಟ್ಟಿ, ದೀಪಾ ರಾಮದುರ್ಗ, ಸುರೇಶ ಕರಗಾವಿ, ಚೇತನ ಕರೋಳಿ, ಸತೀಶ ವಡ್ಡರ ಸೇರಿದಂತೆ ಕೇಂದ್ರ ಕಾರಾಗೃಹದ ಸಿಬ್ಬಂದಿಗಳು, ಪುರುಷ ಮತ್ತು ಮಹಿಳಾ ಶಿಕ್ಷಾಬಂಧಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa