ವಿಜಯಪುರ, 06 ಆಗಸ್ಟ್ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರದ ಹೊರವಲಯದ ಬುರಣಾಪುರದಲ್ಲಿ ನಿರ್ಮಾಣವಾಗುತ್ತಿರುವ ವಿಮಾ ನಿಲ್ದಾಣಕ್ಕೆ ಜಿಲ್ಲಾಧಿಕಾರಿ ಡಾ.ಆನಂದ ಕೆ.ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಮಾನದ ನಿಲ್ದಾಣದ ಟರ್ಮಿನಲ್ ಕಟ್ಟಡ, ಎಟಿಸಿ ಕಟ್ಟಡ, ಏಪ್ರೋನ್, ಐಸೋಲೇಶನ್ ಬೇ, ರನ್‍ವೇ ಮಾರ್ಗ ಹಾಗೂ ಇತರೆ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಅವರು ಪರಿಶೀಲನೆ ನಡೆಸಿದರು.
ವಿಮಾನದ ನಿಲ್ದಾಣದ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಇರುವ ಕಾಮಗಾರಿಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸಬೇಕು. ಬಾಕಿ ಇರುವ ಅಡೆ-ತಡೆಗಳನ್ನು ನಿವಾರಿಸಿಕೊಂಡು ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳು ಮಾಹಿತಿ ನೀಡಿ, ವಿಮಾನ ನಿಲ್ದಾಣದ ಕಾರ್ಯಾಚರಣೆಗಾಗಿ ಬಾಕಿ ಇರುವ ಪರಿಸರ ನಿರಾಕ್ಷೇಪಣಾ ಪತ್ರ ಹಾಗೂ ಅಗ್ನಿಶಾಮಕ ವ್ಯವಸ್ಥೆ ಪ್ರಕ್ರಿಯೆ ಅನುಮತಿ ಬಾಕಿ ಇದ್ದು, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಶೀಘ್ರವೇ ಡಿಜಿಸಿಎ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿವೀಕ್ಷಣೆ ಮಾಡಲಿದೆ ಎಂದು ಅವರು ಮಾಹಿತಿ ನೀಡಿದರು.
ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಸಿ.ಎಸ್.ಪೊಲೀಸ್‍ಪಾಟೀಲ, ಜಲಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರ ಗೋವಿಂದ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರಮೋದ ಹೊಟ್ಟಿ, ರೇವಣ್ಣ ಮಸಳಿ, ಕೆಎಸ್‍ಐಐಡಿಸಿಯ ಅಧಿಕಾರಿ-ಸಿಬ್ಬಂದಿಗಳು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande