ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಂದ ಶೈಕ್ಷಣಿಕ ಪ್ರಗತಿ ಪರೀಶೀಲನಾ ಸಭೆ
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಂದ ಶೈಕ್ಷಣಿಕ ಪ್ರಗತಿ ಪರೀಶೀಲನಾ ಸಭೆ
ಚಿತ್ರ : ಕೋಲಾರ ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಜಿಲ್ಲೆಯ ಸರ್ಕಾರಿ,ಅನುದಾನಿತ ಪ್ರೌಢಶಾಲೆಗಳ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯ ಶಿಕ್ಷಕರನ್ನುದ್ದೇಶಿಸಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಲ್ಮಾಸ್ ಫರ್ವೀನ್ ತಾಜ್ ಮಾತನಾಡಿದರು.


ಕೋಲಾರ, ೩೦ ಆಗಸ್ಟ್(ಹಿ.ಸ.) :

ಆ್ಯಂಕರ್ : ಶಾಲೆಗೆ ಅರ್ಧಗಂಟೆ ಮುಂಚೆ ಬನ್ನಿ, ಮಕ್ಕಳ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ, ಹಣಕಾಸು ನಿರ್ವಹಣೆ ಸರಿಯಾಗಿರಲಿ, ಸದಾ ಕ್ರಿಯಾಶೀಲರಾಗಿದ್ದು, ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಟಾಫ್ ೫ರೊಳಗೆ ಬರುವಂತೆ ಕ್ರಮವಹಿಸಿ ಎಂದು ಜಿಲ್ಲೆಯ ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಲ್ಮಾಸ್ ಫರ್ವೀನ್ ತಾಜ್ ತಾಕೀತು ಮಾಡಿದರು.

ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಡಯಟ್ನಿಂದ ಜಿಲ್ಲೆಯ ಸರ್ಕಾರಿ,ಅನುದಾನಿತ ಪ್ರೌಢಶಾಲೆಗಳ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯ ಶಿಕ್ಷಕರನ್ನುದ್ದೇಶಿಸಿ ಮಾತನಾಡಿದ ಅವರು, ಶಾಲಾ ಅವಧಿಯಲ್ಲಿ ಕಚೇರಿಗಳಿಗೆ ಓಡಾಟ ಬೇಡ, ಶಾಲೆಗಳಲ್ಲಿ ಮಗು ಕೇಂದ್ರೀಕೃತ ಶಿಕ್ಷಣ ಅಗತ್ಯವಿದೆ ಶೈಕ್ಷಣಿಕ ಮತ್ತು ಆಡಳಿತಾತ್ಮಕವಾಗಿ ಮುಖ್ಯ ಶಿಕ್ಷಕರಿಗೆ ಹೆಚ್ಚಿನ ಅಧಿಕಾರವನ್ನು ಇಲಾಖೆ ನೀಡಿದೆ, ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಸದ್ಬಳಕೆ ಮಾಡಿಕೊಳ್ಳಿ, ಶಿಕ್ಷಕರಲ್ಲಿ ಸಮಯಪ್ರಜ್ಞೆ ಮೂಡಿಸಿ ಎಂದರು.

ಲಕ್ಷ ಲಕ್ಷ ಸಂಬಳ ಪಡೆಯುವಾಗ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು, ಇಷ್ಟಬಂದಂತೆ ನೀವೂ ರಜೆ ಹಾಕಬೇಡಿ, ಶಿಕ್ಷಕರಿಗೂ ರಜೆ ನೀಡಬೇಡಿ, ನೀವು ಬಿಇಒ ಗಮನಕ್ಕೆ ತಂದು ರಜೆ ಹಾಕಬೇಕು, ಶಿಕ್ಷಕರಿಗೆ ಮೊದಲೇ ರಜೆ ಚೀಟಿ ಪಡೆದು ರಜೆ ಮಂಜೂರು ಮಾಡಿಸಿಕೊಂಡರೆ ಮಾತ್ರ ಅವಕಾಶ ನೀಡಿ ಎಂದು ಸೂಚಿಸಿದರು.

ಶಾಲೆಗಳಲ್ಲಿ ವೇಳಾಪಟ್ಟಿ, ಕರ್ತವ್ಯ ಹಂಚಿಕೆ, ಚಾಲನಾವಹಿಗಳನ್ನು ಸಮರ್ಪಕವಾಗಿ ನಿರ್ವಹಿಸಿ, ದಾಖಲಾತಿ ಹೆಚ್ಚಿಸಲು ಕ್ರಮವಹಿಸಿ ರಾಜ್ಯದಲ್ಲಿ ೪೬೬೦೦ ಸರ್ಕಾರಿ,ಅನುದಾನಿತತ ಶಾಲೆಗಳಿವೆ, ಇಲ್ಲಿ ಇರುವುದು ಕೇವಲ ೪೦ ಲಕ್ಷ ಮಕ್ಕಳು, ಖಾಸಗಿಯಲ್ಲಿ ೧೬ ಸಾವಿರ ಶಾಲೆಗಳಲ್ಲಿ ೬೦ ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ, ೧೯ ಮಕ್ಕಳಿಗೆ ಓರ್ವ ಶಿಕ್ಷಕ ಸರಾಸರಿ ಇದೆ, ಈ ಮಕ್ಕಳಿಗೆ ನ್ಯಾಯ ಒದಗಿಸಲು ನಿಮ್ಮಿಂದ ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.

ಉಪನಿರ್ದೇಶಕರು ಹಾಗೂ ಡಯಟ್ ಪ್ರಾಂಶುಪಾಲ ಚಂದ್ರಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ೨೯ ಸಾವಿರ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿದ್ದಾರೆ, ಅವರ ಶೈಕ್ಷಣಿಕ ಪ್ರಗತಿಗೆ ಇಲಾಖೆ ಸೂಚಿಸಿರುವ ಎಲ್ಬಿಎ(ಪಾಠ ಆಧಾರಿತ ವಿಶ್ಲೇಷಣೆ) ಬುನಾದಿ ಶಿಕ್ಷಣದ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಿ ಎಂದು ಸೂಚಿಸಿದರು.

ನಮ್ಮ ಎಲ್ಲಾ ಪರಿಶ್ರಮ ಫಲಿತಾಂಶ ಉತ್ತಮಪಡಿಸುವುದೇ ಆಗಿದೆ, ಕಳೆದ ವರ್ಷ ಆಗಿರುವ ಲೋಪ ಸರಿಪಡಿಸಿಕೊಳ್ಳಿ, ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆಯ ನೀಲನಕ್ಷೆ ಶಿಕ್ಷಕರಿಗೆ ಗೊತ್ತಿದೆ, ಮಕ್ಕಳಿಗೆ ಹೊರೆಯಾಗದಂತೆ ಎಲ್ಬಿಎ ಅಡಿ ನೀಡಿರುವ ಪ್ರಶ್ನೆಗಳಿಗೆ ಉತ್ತರ ಬರೆಸಿ ಕಲಿಕೆ ದೃಢೀಕರಿಸಿಕೊಳ್ಳಿ ಎಂದರು.

ಸರ್ಕಾರಿ ಶಾಲೆಗಳಿಗೆ ಶಿಕ್ಷಣವೇ ಬೇಡವೆನ್ನುವ ಮನಸ್ಥಿತಿಯ ಮಕ್ಕಳು ಕಲಿಯಲು ಬರುತ್ತಾರೆ, ಅವರಿಗೆ ಕಲಿಸುವುದು ಸವಾಲಾದರೂ, ಶಿಕ್ಷಕರು ಇಲಾಖೆ ಮಾರ್ಗಸೂಚಿ ಅನುಸರಿಸಿ, ಪಡೆಯುವ ಸಂಬಳಕ್ಕೆ, ಆತ್ಮಸಾಕ್ಷಿಗೆ ಮೋಸ ಮಾಡದೇ ಕಲಿಸಿದರೆ ಅವರನ್ನು ಸಾಧಕರಾಗಿಸಬಹುದು ಶೇ.೩೫ ಉತ್ತೀರ್ಣದ ಗುರಿ ಬೇಡ,ಶೇ.೧೦೦ ಇರಲಿ, ಖಿನ್ನರಾದ,ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕೌನ್ಸಿಲಿಂಗ್ ಮಾಡಿ, ಅವರಲ್ಲಿ ಆತ್ಮವಿಶ್ವಾಸ ಮೂಡಿಸಿ, ಅವರ ಸಮಸ್ಯೆಗಳನ್ನು ಎಲ್ಲಾ ಮಕ್ಕಳ ಮುಂದೆ ಹೇಳದಿರಿ, ಈ ಕುರಿತು ಶಿಕ್ಷಕರಿಗೂ ಮಾರ್ಗದರ್ಶನ ನೀಡಿ, ಮುಖ್ಯಶಿಕ್ಷಕರು ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಸತತ ಸಂಪರ್ಕದಲ್ಲಿರಿ ಎಂದರು.

ಡಯಟ್ ಉಪನ್ಯಾಸಕ ಬಾಲಾಜಿ ಮಾತನಾಡಿ, ಶೇ.೧೦೦ ಫಲಿತಾಂಶಕ್ಕಾಗಿ ಧನಾತ್ಮಕ ಮನಸ್ಥಿತಿ ಅಗತ್ಯವಿದೆ, ಸಾಧನೆಯತ್ತ ಸಾಗುವಾಗ ಟೀಕೆಗಳು ಸಹಜ ಆದರೆ ನಮ್ಮ ಕೈಯಲ್ಲಿ ನೂರಾರು ಮಕ್ಕಳ ಭವಿಷ್ಯವಿದೆ, ಅದಕ್ಕೆ ಚ್ಯುತಿ ಬಾರದಂತೆ ಸಮಯಪ್ರಜ್ಞೆ,ಕರ್ತವ್ಯ ನಿಷ್ಟೆಯಿಂದ ಕೆಲಸ ಮಾಡಬೇಕು ಎಂದರು.

ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ರಶ್ಮಿ ಮೇಡಂ ಅವರು, ಅತ್ಯಂದ ದೂರ ದೃಷ್ಟಿಯಿಂದ ಎಲ್ಬಿಎ, ಎಫ್ಎಲ್ಎನ್, ಮರುಸಿಂಜನ ಹೀಗೆ ಮಕ್ಕಳ ಕಲಿಕಾ ಪ್ರಗತಿಗೆ ವಿಶೇಷ ಯೋಜನೆ ಜಾರಿಗೆ ತಂದಿದ್ದು, ಅದನ್ನು ಬದ್ದತೆಯಿಂದ ಜಾರಿ ಮಾಡುವ ಅವಕಾಶ ಮುಖ್ಯಶಿಕ್ಷಕರ ಮೇಲಿದೆ ಎಂದರು.

ಇದೇ ಸಂದರ್ಭದಲ್ಲಿ ಉಪನಿರ್ದೇಶಕಿ ಅಲ್ಮಾಸ್ ಫರ್ವೀನ್ ತಾಜ್, ಉಪನಿರ್ದೇಶಕರಾದ ಚಂದ್ರಪಾಟೀಲ್ ಅವರನ್ನು ಬಿಆರ್ಸಿ ವತಿಯಿಂದ ಸನ್ಮಾನಿಸಲಾಯಿತು.

ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಧುಮಾಲತಿ ಪಡುವಣೆ, ಹಿರಿಯ ಉಪನ್ಯಾಸಕ ನಂಜುಂಡಯ್ಯ, ಕ್ಷೇತ್ರ ಸಮನ್ವಯಾಧಿಕಾರಿ ರಾಧಮ್ಮ, ಬಿಆರ್ಪಿ ಪ್ರವೀಣ್, ಇಸಿಒಗಳಾದ ಮುನಿರತ್ನಯ್ಯ ಶೆಟ್ಟಿ, ನಂಜುಂಡಗೌಡ, ಲೇಖಾ, ಮುಖ್ಯ ಶಿಕ್ಷರಾದ ಗಾಯತ್ರಿ, ಶಶಿವಧನ, ವೇಣುಗೋಪಾಲ್, ರಮೇಶ್ಗೌಡ, ಗೋಪಿನಾಥ್ ಸೇರಿದಂತೆ ಶಾಲೆಗಳ ಮುಖ್ಯಶಿಕ್ಷಕರು ಹಾಜರಿದ್ದರು.

ಚಿತ್ರ : ಕೋಲಾರ ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಜಿಲ್ಲೆಯ ಸರ್ಕಾರಿ,ಅನುದಾನಿತ ಪ್ರೌಢಶಾಲೆಗಳ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯ ಶಿಕ್ಷಕರನ್ನುದ್ದೇಶಿಸಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಲ್ಮಾಸ್ ಫರ್ವೀನ್ ತಾಜ್ ಮಾತನಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande