ಮಿಟ್ಟಿ ಮಲ್ಕಾಪುರ ಕಲ್ಲು ಗಣಿಗಾರಿಕೆ ಪೀಡಿತ ಪ್ರದೇಶದ ಮೇಲೆ ಸ್ವಯಂ ಪ್ರೇರಣೆ ಪ್ರಕರಣ
ರಾಯಚೂರು, 30 ಆಗಸ್ಟ್ (ಹಿ.ಸ.) ಆ್ಯಂಕರ್ : ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ ವೀರಪ್ಪ ಅವರಿಂದ ಮೂರನೇ ದಿನವಾದ ಆಗಸ್ಟ್ 30ರಂದು ಅನಿರೀಕ್ಷಿತ ಭೇಟಿಯ ಮಿಂಚಿನ ಕಾರ್ಯಾಚರಣೆ ನಡೆಯಿತು. ಚಹಾ ವಿರಾಮದ ನಂತರ ಕೃಷಿ ವಿವಿಯಿಂದ ಬೆಳಗ್ಗೆ 7 ಗಂಟೆಗೆ ನಿರ್ಗಮಿಸಿದ ಉಪ ಲೋಕಾಯುಕ್ತರು, ಸಿಟಿ ಹೊರ ವಲಯದ ಮಂತ್ರಾಲ
ಮಿಟ್ಟಿ ಮಲ್ಕಾಪುರ ಕಲ್ಲು ಗಣಿಗಾರಿಕೆ ಪೀಡಿತ ಇಡೀ ಪ್ರದೇಶದ ಮೇಲೆ ಸುಮೋಟೊ ಕೇಸ್ ರಿಜಿಸ್ಟರ್


ಮಿಟ್ಟಿ ಮಲ್ಕಾಪುರ ಕಲ್ಲು ಗಣಿಗಾರಿಕೆ ಪೀಡಿತ ಇಡೀ ಪ್ರದೇಶದ ಮೇಲೆ ಸುಮೋಟೊ ಕೇಸ್ ರಿಜಿಸ್ಟರ್


ಮಿಟ್ಟಿ ಮಲ್ಕಾಪುರ ಕಲ್ಲು ಗಣಿಗಾರಿಕೆ ಪೀಡಿತ ಇಡೀ ಪ್ರದೇಶದ ಮೇಲೆ ಸುಮೋಟೊ ಕೇಸ್ ರಿಜಿಸ್ಟರ್


ರಾಯಚೂರು, 30 ಆಗಸ್ಟ್ (ಹಿ.ಸ.)

ಆ್ಯಂಕರ್ : ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ ವೀರಪ್ಪ ಅವರಿಂದ ಮೂರನೇ ದಿನವಾದ ಆಗಸ್ಟ್ 30ರಂದು ಅನಿರೀಕ್ಷಿತ ಭೇಟಿಯ ಮಿಂಚಿನ ಕಾರ್ಯಾಚರಣೆ ನಡೆಯಿತು.

ಚಹಾ ವಿರಾಮದ ನಂತರ ಕೃಷಿ ವಿವಿಯಿಂದ ಬೆಳಗ್ಗೆ 7 ಗಂಟೆಗೆ ನಿರ್ಗಮಿಸಿದ ಉಪ ಲೋಕಾಯುಕ್ತರು, ಸಿಟಿ ಹೊರ ವಲಯದ ಮಂತ್ರಾಲಯ ರಸ್ತೆಗೆ ಹೊರಟು ಮಿಟ್ಟಿ ಮಲ್ಕಾಪುರದ ಶ್ರೀ ವೆಂಕಟೇಶ್ವರ ಮಿನಿರಲ್ಸ್ ಸ್ಟೋನ್ ಕ್ರಷರ್ (ಎಂ ಸ್ಯಾಂಡ್ ) ಪ್ರವೇಶ ಮಾಡಿದರು.

ಮೊದಲಿಗೆ ವೆಂಕಟೇಶ್ವರ ಮಿನಿರಲ್ಸ್ ಸ್ಟೋನ್ ಕ್ರಷರ್ ಪ್ರದೇಶದಲ್ಲಿ ಸಂಚರಿಸಿ ಗಣಿಗಾರಿಕೆ ನಂತರ ಹಾಗೆಯೇ ಬಿಟ್ಟ ಕಂದಕದ ವೀಕ್ಷಣೆ ನಡೆಸಿದರು.

ಇದನ್ನು ಸಮತಟ್ಟು ಯಾಕೆ ಮಾಡಿಲ್ಲ? ಗಿಡ ಯಾಕೆ ನೆಟ್ಟಿಲ್ಲ?. ಇದನ್ನು ನೀವು ನೋಡಿಲ್ವಾ? ಲೀಸ್ ಪಡೆದ

ಕಂಪನಿಯವರು ಕಾನೂನು ಉಲ್ಲಂಘನೆ ಮಾಡಿದಾರೆ ಅಂತ ಗೊತ್ತಾದಾಗಲೂ ನೀವು ನಿದ್ದೆ ಮಾಡತಿದೀರಾ? ಎಂದು ಗಣಿ ಇಲಾಖೆಯ ಅಧಿಕಾರಿಗಳಿಗೆ ಉಪ ಲೋಕಾಯುಕ್ತರು ತರಾಟೆ ತೆಗೆದುಕೊಂಡರು. ಬಳಿಕ ಲೋಕಾಯುಕ್ತರು, ಓಂ ಶಕ್ತಿ ಕಂಪನಿಯ ಮತ್ತೊಂದು ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ತೆರಳಿ ಗಣಿಪೀಡಿತ ಪ್ರದೇಶದಲ್ಲಿ ಅಂದಾಜು 100 ಅಡಿ ಆಳವಾಗಿ ಕೊರೆದ ಕಂದಕದ ವೀಕ್ಷಣೆ ನಡೆಸಿದರು.

100 ಅಡಿಯಷ್ಟು ಒಳಗೆ ಕೊರೆದು ಗಣಿಗಾರಿಕೆ ನಡೆಸಲು ನಿಯಮದಲ್ಲಿ ಅವಕಾಶವಿದೆಯಾ? ಸುರಕ್ಷತೆಗಾಗಿ

ಸುತ್ತಲು ಜಾಗ ಬಿಡದೇ ಮನಬಂದಂತೆ ಗಣಿಗಾರಿಕೆ ನಡೆಸಿದ್ದನ್ನು ನೀವು ಗಮನಿಸಿದ್ದೀರಾ? ಉಲ್ಲಂಘನೆ ಅಂತ ಗೊತ್ತಾದ ಮೇಲೆ ನೋಟೀಸ್ ನೀಡಿದ್ದೀರಾ? ಎಂದು ಉಪ ಲೋಕಾಯುಕ್ತರು ಪ್ರಶ್ನಿಸಿದರು.

ವಾರ್ಷಿಕ ಅಂದಾಜು 25 ಕೋಟಿ ರೂ ನಷ್ಟು ವಾಹಿವಾಟು ನಡೆಸುವ ನಿಮಗೆ ನಿಮ್ಮ ಗಣಿಯಲ್ಲಿ ಕೆಲಸ ಮಾಡುವವರಿಗೆ ವಿಮೆಯನ್ನು ಕಡ್ಡಾಯ ಮಾಡಿಸಬೇಕು ಎಂಬುದು ತಿಳಿಯುವುದಿಲ್ಲವೇ ಎಂದು ಉಪ ಲೋಕಾಯುಕ್ತರು ಕಂಪನಿಯ ಮಾಲೀಕರಿಗೆ ಪ್ರಶ್ನಿಸಿದರು.

ಜಿಲ್ಲೆಯಲ್ಲಿನ ಎಲ್ಲ ಕ್ರಷರ್ ಮಾಲೀಕರಿಗೆ ಕೂಡಲೇ ಪತ್ರ ಕಳುಹಿಸಿ ಅಲ್ಲಿ ಕೆಲಸ ಮಾಡುವ ಎಲ್ಲರಿಗೂ ವಿಮೆ ಮಾಡಿಸಿದ ಬಗ್ಗೆ ವರದಿಯನ್ನು ಕೂಡಲೇ ಉಪ ಲೋಕಾಯುಕ್ತರ ಕಚೇರಿಗೆ ಕಳುಹಿಸಬೇಕು ಎಂದು, ಉಪ ಲೋಕಾಯುಕ್ತರು ಗಣಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅನಧೀಕೃತ ಗಣಿಗಾರಿಕೆ ಬೇಡ: ಬಫರ್ ಝೋನ್ ಉಲ್ಲಂಘಿಸಿ ಗಣಿಗಾರಿಕೆ ನಡೆಸಿದ ಬಗ್ಗೆ ಕಂಪನಿಯವರಿಗೆ ನೊಟೀಸ್ ಜಾರಿ ಮಾಡಬೇಕು. ದಂಢ ವಿದಿಸಬೇಕು ಎಂದು ಗಣಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ಉಪ ಲೋಕಾಯುಕ್ತರು, ಜಿಲ್ಲೆಯಲ್ಲಿ ಎಷ್ಟು ಕ್ವಾರಿಗಳಿವೆ ಎಂದು ಕೇಳಿದರು. ರಾಯಚೂರ ಜಿಲ್ಲೆಯಲ್ಲಿ 133 ಕ್ವಾರಿಗಳಿವೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು. ಜಿಲ್ಲೆಯ ಯಾವುದೇ ಕಡೆಗಳಲ್ಲಿ ಅನಧೀಕೃತವಾಗಿ ಗಣಿಗಾರಿಕೆ ನಡೆಯಕೂಡದು ಎಂದು ಇದೆ ವೇಳೆ ಉಪ ಲೋಕಾಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಾಲೀಕರು ಕಾನೂನುಬದ್ಧವಾಗಿ ಕೆಲಸ ಮಾಡಲಿ: ಆಯಾ ಗಣಿಗಳ ಮಾಲೀಕರು ಕಾನೂನು ಬದ್ಧವಾಗಿ ಕೆಲಸ ಮಾಡಬೇಕು. ಲೀಸ್ ಪಡೆದುಕೊಂಡ ಸ್ಥಳದಲ್ಲಿ ಬೌಂಡ್ರಿಗೆ ನಿಗದಿಪಡಿಸಿದ ಜಾಗ ಕಡ್ಡಾಯ ಬಿಡಬೇಕು. ಲೀಸ್ ಷರತ್ತಿನಲ್ಲಿನ ಎಲ್ಲ ನಿಯಮಗಳ ಪಾಲನೆ ಮಾಡಬೇಕು. ಮಾಲೀಕರು ಮತ್ತು ಎಲ್ಲ ಕೆಲಸಗಾರರು ವಿಮೆ ಮಾಡಿಸಬೇಕು ಎಂದು ಉಪ ಲೋಕಾಯುಕ್ತರು ಸಲಹೆ ಮಾಡಿದರು.

ತಾಯಿ ಗರ್ಭ ಸೀಳಿದಂತಿದೆ: ಗಣಿಗಾಗಿ ತೆಗೆದ ಕಂದಕವು ಭಯಾನಕವಾಗಿದೆ. ತಾಯಿ ಗರ್ಭವನ್ನು ಸೀಳಿದಂತಿದೆ. ಹೀಗೆ ಭೂಮಿಯಲ್ಲಿನ ಫಲವತ್ತತೆ ಕಿತ್ತ ಮೇಲೆ ಅದನ್ನು ಸರಿ ಮಾಡದಿದ್ದರೆ ಭೂಮಿ ಸಮತೋಲನ ಕಳೆದುಕೊಳ್ಳುತ್ತದೆ. ಭೂಮಿಯನ್ನು ಬರೀ ತಿನ್ನೋದಾ? ಅಗೆಯೋದಾ? ಮರಳಿ ಹಾಕಲ್ವಾ? ಎಂದು ಪ್ರಶ್ನಿಸಿದ ಉಪ ಲೋಕಾಯುಕ್ತರು, ಗಣಿ ಮಾಲೀಕರಿಗೆ ತೊಂದರೆ ಕೊಡಬೇಕು ಎಂಬುದು ನಮ್ಮ ಉದ್ದೇಶವಲ್ಲ; ಕ್ವಾರಿ ಕ್ಲೋಸರ್ ಪ್ಲಾನದಲ್ಲಿ ಏನು ಇದೆ ಅದನ್ನು ಆಯಾ ಮಾಲೀಕರು ಪೂರ್ಣಗೊಳಿಸಬೇಕು, ಕಂದಕ ಮುಚ್ಚಬೇಕು, ಸಮತಟ್ಟು ಮಾಡಬೇಕು. ಗಿಡ ನೆಡಬೇಕು. ಭೂಮಿ ಕಾಪಾಡಬೇಕು ಎಂದು ತಿಳಿಸುತ್ತಿದ್ದೇವೆ ಎಂದರು.

ಆರ್ ಟಿಓಗೆ ಸೂಚನೆ: ಗಣಿಗಾರಿಕೆಗೆ ಎಷ್ಟು ಗಾಡಿಗಳನ್ನು ಬಳಸಲಾಗುತ್ತದೆ. ಎಲ್ಲ ಗಾಡಿಗಳಿಗೆ ಜಿಪಿಎಸ್ ಪಿಕ್ಸ್ ಮಾಡಿದ್ದನ್ನು ನೋಡಿದ್ದೀರಾ? ಒಂದೇ ನಂಬರ್ ಪ್ಲೇಟನಲ್ಲಿ ಎಷ್ಟು ಗಾಡಿಗಳು ಓಡುತ್ತವೆ? ಎಂದು ಉಪ ಲೋಕಾಯುಕ್ತರು, ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಪ್ರಶ್ನಿಸಿ, ವಾಹನಗಳ ಮೇಲ್ವಿಚಾರಣೆ ಸರಿಯಾಗಿ ನಡೆಯುವಂತಾಗಬೇಕು ಎಂದು ಸೂಚನೆ ನೀಡಿದರು.

ಗಾಂಜಾ ಗುಟಕಾ ತಿನಬೇಡಿ: ಆರೋಗ್ಯ ಉಳಿಸಿಕೊಳ್ಳಿ. ಗುಟಕಾ ಸೀಗರೇಟು ಸೇದಬೇಡಿ. ಎಲ್ಲರೂ ಕಡ್ಡಾಯ ವಿಮೆ ಮಾಡಿಸಿ ಎಂದು ಇದೆ ವೇಳೆ ಉಪ ಲೋಕಾಯುಕ್ತರು ಗಣಿಯಲ್ಲಿರುವ ಕೆಲಸದಾರರಿಗೆ ಸಲಹೆ ಮಾಡಿದರು.

ತಪ್ಪಿತಸ್ಥರೆಲ್ಲರ ಮೇಲೂ ಸ್ವಯಂ ಪ್ರೇರಣೆ ಪ್ರಕರಣ: ಗಣಿಗಾರಿಕೆ ಪೀಡಿತ ಇಡೀ ಪ್ರದೇಶದ ಮೇಲೆ ಸ್ಥಳದಲ್ಲೆ ಪ್ರಕರಣ ದಾಖಲಿಸಿದ್ದೇನೆ. ಕಾನೂನುಬದ್ದವಾಗಿ ಪ್ರಕರಣದ ವಿಚಾರಣೆ ನಡೆಸಿ ತಪ್ಪಿತಸ್ಥರು ಎಂದು ಕಂಡುಬಂದರೆ ಗಣಿಗಾರಿಕೆಗೆ ಸಂಬಂಧಿಸಿದ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳ ಮೇಲೂ ಪ್ರಕರಣ ದಾಖಲಿಸಲಾಗುವುದು ಎಂದು ಉಪ ಲೋಕಾಯುಕ್ತರಾದ ಬಿ ವೀರಪ್ಪ ಅವರು ಸುದ್ದಿಗಾರರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರಿನ ಉಪ ಲೋಕಾಯುಕ್ತ ಕಚೇರಿಯ ಅಪರ ನಿಬಂಧಕರಾದ ನ್ಯಾಯಾಧೀಶರಾದ ರಮಾಕಾಂತ ಚವ್ಹಾಣ್, ಶಿವಾಜಿ ಅನಂತ ನಲವಾಡೆ, ಉಪ ನಿಬಂಧಕರು ಆಗಿರುವ ನ್ಯಾಯಾಧೀಶರಾದ ಅರವಿಂದ, ರಾಯಚೂರು ಲೋಕಾಯುಕ್ತ ಪೆÇಲೀಸ್ ಅಧೀಕ್ಷಕರಾದ ಸತೀಶ್ ಬಿ.ಚಿಟುಗುಬ್ಬಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಭೂಮಾಪನ ಇಲಾಖೆ, ಪರಿಸರ ಇಲಾಖೆ, ಜೆಸ್ಕಾಂ, ಆರ್ ಟಿಓ, ಕಾರ್ಮಿಕ ಇಲಾಖೆ ಸೇರಿದಂತೆ ಇಲಾಖೆ ಅಧಿಕಾರಿಗಳು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande