ಕೊಪ್ಪಳ, 30 ಆಗಸ್ಟ್ (ಹಿ.ಸ.) :
ಆ್ಯಂಕರ್ : 2025-26ನೇ ಸಾಲಿನ ಕುಷ್ಟಗಿ ತಾಲ್ಲೂಕಿನ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಕುಷ್ಟಗಿ ತಾಲ್ಲೂಕು ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 3 ರ ಬುಧವಾರದಂದು ಏರ್ಪಡಿಸಲಾಗಿದೆ.
ಕ್ರೀಡಾ ಸ್ಪರ್ಧೆಗಳು ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿರುತ್ತವೆ. ಈ ಕ್ರೀಡಾಕೂಟದಲ್ಲಿ ಸಮವಸ್ತ್ರಧಾರಿ ಸೇವೆಗೆ ಸೇರಿದ, ರಕ್ಷಣಾಪಡೆ, ಅರೆ ರಕ್ಷಣಾ ಪಡೆ ಕ್ರೀಡಾಪಟುಗಳು ಭಾಗವಹಿಸಲು ಅರ್ಹರಲ್ಲ. ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ವಯಸ್ಸಿನ ನಿರ್ಬಂಧವಿಲ್ಲ. ತಾಲ್ಲೂಕು ಮಟ್ಟದಲ್ಲಿ ನಡೆಯುವ ಕ್ರೀಡೆಗಳಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳು ಹಾಗೂ ಗುಂಪು ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳಿಗೆ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳಲ್ಲಿ ಆಯಾ ತಾಲ್ಲೂಕಿನ ಕ್ರೀಡಾಪಟು ಅಥವಾ ತಂಡ ಅದೇ ತಾಲೂಕಿನ ಕ್ರೀಡಾಕೂಟದಲ್ಲಿ ಭಾಗವಹಿಸತಕ್ಕದ್ದು. ಬೇರೆ ತಾಲೂಕಿನ ಕ್ರೀಡಾಪಟುಗಳಿಗೆ ಹಾಗೂ ತಂಡಗಳಿಗೆ ಭಾಗವಹಿಸಲು ಅವಕಾಶವಿರುವುದಿಲ್ಲ. ತಾಲೂಕು ಮಟ್ಟದ ದಸರಾ ಕ್ರೀಡಾಪಟುಗಳಿಗೆ ಯಾವುದೇ ತರಹದ ಊಟೋಪಚಾರ ಹಾಗೂ ಪ್ರಯಾಣ ಭತ್ಯೆ ಇರುವುದಿಲ್ಲ ಮತ್ತು ತಾಲೂಕು ಮಟ್ಟದಲ್ಲಿ ವಿಜೇತರಾಗಿ ಜಿಲ್ಲಾ ದಸರಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಊಟೋಪಚಾರ ಮತ್ತು ಪ್ರಯಾಣ ಭತ್ಯೆ ನೀಡಲಾಗುವುದು.
ಬೇರೆ ಜಿಲ್ಲೆಯ ಕ್ರೀಡಾಪಟುಗಳು ಕೊಪ್ಪಳ ಜಿಲ್ಲೆ, ತಾಲೂಕಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೆ ಸಂಬಂಧಪಟ್ಟ ಕಾಲೇಜು, ಸಂಸ್ಥೆಗಳ ಗುರುತಿನ ಚೀಟಿಯೊಡನೆ ಆಯಾ ತಾಲೂಕು, ಜಿಲ್ಲೆಯಲ್ಲಿ ಭಾಗವಹಿಸಲು ಅವಕಾಶ ನೀಡಬಹುದಾಗಿದೆ. ವಿಜೇತ ಕ್ರೀಡಾಪಟುಗಳು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್ ಕಡ್ಡಾಯವಾಗಿ ಸಲ್ಲಿಸತಕ್ಕದ್ದು. ತಾಲೂಕು ಮಟ್ಟದಲ್ಲಿ ಭಾಗವಹಿಸಿದ ಸ್ಪರ್ಧಾಳುಗಳು ಆನ್‍ಲೈನ್ ನೋಂದಣಿ ಕಡ್ಡಾಯವಾಗಿರುತ್ತದೆ.
ವೈಯಕ್ತಿಕ ಸ್ಪರ್ಧೆ ವಿಭಾಗದಲ್ಲಿ ಪುರುಷರ ಅಥ್ಲೆಟಿಕ್ಸ್‍ನಲ್ಲಿ 100, 200, 400, 800, 1500, 5000, 10000 ಮೀ. ಓಟ, ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, ಭಲ್ಲೆ ಎಸೆತ, 110 ಮೀ ಹರ್ಡಲ್ಸ್ 4*100 ರಿಲೇ, 4*400 ಮೀ. ರಿಲೇ ಹಾಗೂ ಮಹಿಳೆಯರ ಅಥ್ಲೆಟಿಕ್ಸ್‍ನಲ್ಲಿ 100, 200, 400, 800, 1500, 3000 ಮೀ.ಓಟ, ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, ಭಲ್ಲೆ ಎಸೆತ, 100 ಮೀ ಹರ್ಡಲ್ಸ್, 4*100 ರಿಲೆ, 4*400 ಮೀ. ರಿಲೇ ಸ್ಪರ್ಧೆಗಳಿರುತ್ತವೆ.
ಗುಂಪು ಸ್ಪರ್ಧೆಗಳಲ್ಲಿ ಪುರುಷ ಮತ್ತು ಮಹಿಳಾ ತಂಡಗಳಿಗೆ ವಾಲಿಬಾಲ್, ಕಬಡ್ಡಿ, ಖೋಖೋ, ಫುಟ್‍ಬಾಲ್, ಥ್ರೋಬಾಲ್ ಪಂದ್ಯಗಳು ಮತ್ತು ಯೋಗಾಸನದಲ್ಲಿ ಮಹಿಳಾ ಮತ್ತು ಪುರುಷ ಸ್ಪರ್ಧಿಗಳಿಗೆ ವೀರಭದ್ರಾಸನ, ಜಾನು ಶಿರ್ಶಾಸನ, ಹಲಾಸನ, ಧನುರಾಸನ ಸ್ಪರ್ಧೆ ಇರುತ್ತವೆ.
ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಕುಷ್ಟಗಿಯ ಸ್ವಾಮಿ ವಿವೇಕಾನಂದ ಕ್ರೀಡಾ ಹಾಗೂ ಸಾಂಸ್ಕøತಿಕ ಸಂಘದ ಅಧ್ಯಕ್ಷರಾದ ಪಂಪಣ್ಣ ಇಂಡಿ, ಮೊ.9632538858 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್