ಬಳ್ಳಾರಿ, 30 ಆಗಸ್ಟ್ (ಹಿ.ಸ.) :
ಆ್ಯಂಕರ್ : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಮಾರ್ಗದರ್ಶನದಲ್ಲಿ ರೀಡ್ಸ್ ಸಂಸ್ಥೆ ವತಿಯಿಂದ ಹೊರತಲಾದ ‘ಮಕ್ಕಳ ರಕ್ಷಣೆಗೆ ಕಾನೂನು’ ಪುಸ್ತಕಗಳನ್ನು ಜಿಲ್ಲೆಯ ಶಾಲೆಗಳಲ್ಲಿ ವಿತರಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ.ಶಾಂತಿ ಅವರು ತಿಳಿಸಿದ್ದಾರೆ.
ಮಗುವಿನ ಜೈವಿಕ ಪೋಷಕರು ಮಕ್ಕಳ ರಕ್ಷಣೆಯ ಜವಾಬ್ದಾರಿ ಹೊಂದಿದ್ದರೂ, ಸರ್ಕಾರ ಮಕ್ಕಳ ಕಾನೂನಾತ್ಮಕ ಪೋಷಕರಾಗಿರುವುದರಿಂದ ‘ಮಕ್ಕಳ ರಕ್ಷಣೆಗೆ ಕಾನೂನುಗಳು’ ಈ ಪುಸ್ತಕವು ಸಮುದಾಯದಲ್ಲಿ ಸಾಮಾಜಿಕ ಅನಿಷ್ಟ ಪದ್ಧತಿಗಳ ದುಷ್ಪರಿಣಾಮಗಳ ಬಗ್ಗೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಜಾಗೃತಿ, ಜ್ಞಾನ ಮೂಡಿಸಿ ಮಕ್ಕಳನ್ನು ಸಶಕ್ತರನ್ನಾಗಿ ಮಾಡುವ ಮೂಲಕ ಸಾಮಾಜಿಕ ಅನಿಷ್ಠ ಪದ್ಧತಿಗಳನ್ನು ತೊಡೆದು ಹಾಕುವುದು ಈ ಪುಸ್ತಕದ ಮುಖ್ಯ ಉದ್ದೇಶವಾಗಿದೆ.
ಈ ಪುಸ್ತಕವು ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಎಲ್ಲಾ ಕಾನೂನುಗಳು ಮತ್ತು ಸಾಮಾಜಿಕ ಅನಿಷ್ಟ ಪದ್ಧತಿಗಳಿಂದ ಮಕ್ಕಳನ್ನು ರಕ್ಷಿಸುವ ವಿಚಾರಗಳ ಸಮಗ್ರ ಮಾಹಿತಿ ಒಳಗೊಂಡಿದೆ.
ಈಗಾಗಲೇ ಜಿಲ್ಲೆಯಲ್ಲಿ ಐದು ತಾಲ್ಲೂಕುಗಳ 719 ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢ ಶಾಲೆಗಳಿಗೆ ಈ ಪುಸ್ತಕವನ್ನು ರೀಡ್ಸ್ ಸಂಸ್ಥೆಯಿಂದ ತಾಲ್ಲೂಕುವಾರು ವಿತರಣೆ ಮಾಡಲಾಗಿದೆ. ಬಳ್ಳಾರಿ ಪಶ್ಚಿಮ ವಿಭಾಗ-141, ಬಳ್ಳಾರಿ ಪೂರ್ವ ವಿಭಾಗ-177, ಕಂಪ್ಲಿ-52, ಸಂಡೂರು-249 ಮತ್ತು ಸಿರುಗುಪ್ಪದ 100 ಶಾಲೆಗಳಿಗೆ ಪುಸ್ತಕಗಳನ್ನು ವಿತರಿಸಲಾಗಿದೆ.
ಶಾಲೆಗಳಲ್ಲಿ ಪ್ರಾರ್ಥನೆ ನಂತರ ಪ್ರತಿದಿನ ಒಂದು ಪುಟದಂತೆ ಓದಿಸಿ ಮಕ್ಕಳಲ್ಲಿ ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಜ್ಞಾನವನ್ನು ಹೆಚ್ಚಿಸುವಂತೆ ಮಾಡುವ ಉದ್ದೇಶದಿಂದ ಈ ಪುಸ್ತಕವನ್ನು ಜಾರಿಗೊಳಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ.ಶಾಂತಿ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್