ನಾನಾ ಬೆಳೆಗಳಲ್ಲಿ ಬರುವ ಕೀಟ ಮತ್ತು ರೋಗ ನಿರ್ವಹಣೆಗೆ ಸಲಹೆ
ಕೊಪ್ಪಳ, 30 ಆಗಸ್ಟ್ (ಹಿ.ಸ.) : ಆ್ಯಂಕರ್ : ಕೊಪ್ಪಳ ಕೃಷಿ ಇಲಾಖೆ ಹಾಗೂ ಗಂಗಾವತಿಯ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಕೊಪ್ಪಳ ಜಿಲ್ಲೆಯ ರೈತರಿಗೆ ಹತ್ತಿ, ಮೆಕ್ಕೆಜೋಳ, ತೊಗರಿ, ಸಜ್ಜೆ ಬೆಳೆಯಲ್ಲಿ ಆಗಷ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಬರುವ ಕೀಟ ಮತ್ತು ರೋಗ ಬಾಧೆ ನಿರ್ವಹಣೆಗಾಗಿ ರೈತರಿಗ
ನಾನಾ ಬೆಳೆಗಳಲ್ಲಿ ಬರುವ ಕೀಟ ಮತ್ತು ರೋಗ ನಿರ್ವಹಣೆಗೆ ಸಲಹೆ


ಕೊಪ್ಪಳ, 30 ಆಗಸ್ಟ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ಕೃಷಿ ಇಲಾಖೆ ಹಾಗೂ ಗಂಗಾವತಿಯ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಕೊಪ್ಪಳ ಜಿಲ್ಲೆಯ ರೈತರಿಗೆ ಹತ್ತಿ, ಮೆಕ್ಕೆಜೋಳ, ತೊಗರಿ, ಸಜ್ಜೆ ಬೆಳೆಯಲ್ಲಿ ಆಗಷ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಬರುವ ಕೀಟ ಮತ್ತು ರೋಗ ಬಾಧೆ ನಿರ್ವಹಣೆಗಾಗಿ ರೈತರಿಗೆ ಕೆಲ ಸಲಹೆಗಳನ್ನು ನೀಡಲಾಗಿದೆ.

ಹತ್ತಿಯಲ್ಲಿ ಸಮಗ್ರ ಹತೋಟಿ ಕ್ರಮಗಳು: ಹತ್ತಿ ಬೆಳೆಯ ಅವಧಿ ಮುಗಿದನ ನಂತರ ಗಿಡಗಳನ್ನು ಟ್ಯಾಕ್ಟರ್ ಚಾಲಿತ ಕೇಡರ್‍ನಿಂದ ಕಿತ್ತು ಪುಡಿ ಮಾಡಿ ಸೇರಿಸಬೇಕು. ಬಾದೆಗೊಳಗಾದ ಕಾಯಿಗಳನ್ನು ಹತ್ತಿ ಗಿಡದಿಂದ ಕಿತ್ತು ನಾಶಪಡಿಸಬೇಕು. ಆಶ್ರಯ ತಳಿಗಳಾದ ಅಬುಟಿಲಾನ್, ಪಾರ್ಥಿನಿಯಮ್, ವಿಭೂತಿಗಿಡ ಮತ್ತು ಇತರ ಕಳೆಗಳನ್ನು ಕಿತ್ತು ನಾಶಮಾಡುವುದು. ಕಾಯಿಕೊರಕ ಕೀಟದ ಸಮೀಕ್ಷೆಗಾಗಿ ಪ್ರತಿ ಹೆಕ್ಟೇರಿಗೆ 5 ರಂತೆ ಲಿಂಗಾಷರ್ಕ ಬಲೆಗಳನ್ನು ಉಪಯೋಗಿಸಬೇಕು. ಗುಲಾಬಿ ಕಾಯಿಕೊರಕದ ತತ್ತಿಗಳನ್ನು ನಾಶಪಡಿಸಲು ಟ್ರೈಕೋಗ್ರಾಮ ಬ್ಯಾಕ್ಟೇರಿಯಾ ಎಂಬ ಪರತಂತ್ರ ಜೀವಿಯನ್ನು ಎಕರೆಗೆ 60000 ರಂತೆ ಬೆಳೆಯು 70-75 ಹಾಗೂ 80-85 ದಿವಸವಿದ್ದಾಗ ಬಿಡಬೇಕು.

ಕ್ರೆಮಿಟ್-ಪಿ.ಬಿಡಬ್ಲೂ (ಅಖಇಒIಖಿ-PಃW) ಎಂಬ ವಿನೂತನ ಅಂಟುರೂಪದ ಪದಾರ್ಥಗಳನ್ನು 35-40 ದಿವಸದ ಬೆಳೆಯಿದ್ದಾಗ ಎಕರೆಗೆ 125 ಗ್ರಾಂ ನಂತೆ 400 ಗಿಡಗಳ ಕುಡಿಯ ಮೇಲೆ ಹಚ್ಚಬೇಕು. ಇದೇ ರೀತಿಯಾಗಿ 125 ಗ್ರಾಂ. ಸ್ಪಾಟ್ ಅನ್ನು ಬೆಳೆಯು 65-70, 95-100 ಮತ್ತು 125-130 ದಿವಸವಿದ್ದಾಗ ಹಚ್ಚುವುದರಿಂದ ಗಂಡು ಮತ್ತು ಹೆಣ್ಣು ಪತಂಗಗಳು ಸಂಯೋಗ ಹೊಂದರಂತೆ ಮಾಡಿ ಮುಂದಿನ ಸಂತತಿಯನ್ನು ಗಣನೀಯವಾಗಿ ಕಡಿಮೆಗೊಳಿಸಬಹುದು.

ಪಿ.ಬಿ. ರೋಪೆಲ್‍ನ್ನು (CREMIT-PBW) ಒಂದು ಎಕರೆಗೆ 150 ರಂತೆ ಅಥವಾ 1 ರೋಪೆಲ್ ಪ್ರತಿ 50 ಚದರ ಮಿ.ಗೆ ಹತ್ತಿ ಬೆಳೆಯ ಕಾಂಡದ ಮಧ್ಯ ಭಾಗಕ್ಕೆ 40 ರಿಂದ 50 ದಿನಗಳೊಳಗಾಗಿ ಕಟ್ಟಬೇಕು. ಕೀಟನಾಶಕಗಳ ಸಿಂಪರಣೆ ಬೆಳೆಯ ಮೊದಲನೇ ಹಂತದಲೀ ಬರುವ ರಸ ಹೀರುವ ಕೀಟಗಳ ಹತೋಟಿಗಾಗಿ 0.8 ಮಿ. ಲೀ. ಆಫಿಡೋಪೈರೊಪೆನ್ 50 ಡಿ.ಸಿ. ಅಥವಾ 0.30 ಗ್ರಾಂ ಡೈನೆಟೊಫ್ಯೂರ್‍ನ್ 20 ಎಸ್.ಜಿ. ಅಥವಾ 0.5 ಮಿ. ಲೀ. ಸ್ಪೈನೊಟೆರಮ್ 11.7 ಎಸ್.ಸಿ ಅಥವಾ 0.4 ಗ್ರಾಂ ಪ್ಲೋನಿಕ್ ಆಮೈಡ್ 50 ಡಬ್ಲೂ..ಜಿ ಒಂದು ಲೀ. ನೀರಿನ ಬೆರೆಸಿ ಸಿಂಪಡಿಸುವುದರಿಂದ ಹತೋಟಿ ಮಾಡಬಹುದು.

ಮೈಟ್ ನುಸಿ ಹಾವಳಿ ಕಂಡು ಬಂದಲ್ಲಿ ಪ್ರತಿ ಲೀಟರ್ ಸಿಂಪರಣಾ ದ್ರಾವಣಕ್ಕೆ 1 ಗ್ರಾಂ. ಡೈಫೇಂಥೀಯುರಾನ್ 50 ಡಬ್ಲೂ..ಜಿ ಅಥವಾ 1 ಮೀ.ಲೀ. ಸ್ಪೈರೊಮೆಸಿಫೆನ್ 24 ಎಸ್.ಸಿ ಬೆರೆಸಿ ಸಿಂಪಡಿಸಬೇಕು. ಗುಲಾಬಿ ಕಾಯಿಕೊರಕ ಗುಲಾಬಿ ಕಾಯಿಕೊರಕದ ಭಾಧೆ ಕಂಡು ಬಂದಲ್ಲಿ ಶೇ.5ರ ಬೆಳೆಯ ಬೇವಿನ ಕಷಾಯಿ ಅಥವಾ ಬೇವಿನ ಮೂಲದ ಕೀಟನಾಶಕ 3 ಮಿ.ಲೀ. ಅಥವಾ 1 ಗ್ರಾಂ ಥಯೋಡಿಕಾರ್ಬ 70 ಡಬ್ಲೂ.ಪಿ ಅಥವಾ 1 ಮಿ.ಲ್ಲಿ. ಲ್ಯಾಮ್ಡಾಸಹರೋಥ್ರಿನ್ 5 ಇ.ಸಿ. ಅಥವಾ 2 ಮಿ.ಲೀ. ಪ್ರೋಫೆನೋಫಾಸ್ 50 ಇ.ಸಿ. ಅಥವಾ 0.5 ಮಿ.ಲಿ. ಸ್ರೈನೋಟೆರಮ್ 11 ಇ.ಸಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಕೀಟನಾಶಕವನ್ನು ಸಿಂಪಡಿಸಬೇಕು. ಹತ್ತಿ ಕಾಯಿ ಕೊಳೆಗೆ ಕಾರ್ಬನ್‍ಡೈಜಿಮ್ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಹತ್ತಿಯಲ್ಲಿ ಎಲೆ ಕೆಂಪಾಗುವಿಕೆ: ಸರಿಯಾದ ಸಮಯದಲ್ಲಿ ಒಂದು ಅಥವಾ ಎರಡು ಬಾರಿ ಯೂರಿಯಾ (1%) ದ್ರಾವಣವನ್ನು ಸಿಂಪಡಿಸಬೇಕು. ಪ್ರತಿ ಲೀ.ನೀರಿಗೆ 5 ಗ್ರಾಂ ಮೆಗ್ನೀಷಿಯಂ ಸಲ್ಪೇಟ್ ಅಥವಾ 5 ಗ್ರಾಂ 19:19:19 (ಎನ್.ಪಿ.ಕೆ) ಎಲೆಗಳಿಗೆ ಸಿಂಪರಣೆ ಮಾಡಬೇಕು. ಹೊಲದಲ್ಲಿ ನೀರು ನಿಲ್ಲದಂತೆ ಬಸಿದು ಹೋಗಲು ಸಮಪರ್ಕವಾಗಿ ಬಸಿಗಾಲುವೆ ವ್ಯವಸ್ಥೆಯನ್ನು ಪೂರೈಸಬೇಕು.

ಮೆಕ್ಕೆಜೋಳ: ಸೈನಿಕ ಹುಳುವಿಗೆ ಮೊಟ್ಟೆ ಗುಂಪುಗಳು ಮತ್ತು ಮರಿ ಹುಳುಗಳು ಗಿಡದ ಮೇಲೆ ಕಂಡಾಗ ಸಂಗ್ರಹಿಸಿ ನಾಶಪಡಿಸಬೇಕು. ಆರಂಭಿಕ ಬೆಳೆ ಹಂತದಲ್ಲಿ ಮೊಟ್ಟೆ ಪರತಂತ್ರ ಕೀಟವಾದ ಟ್ರೈಕೋಗ್ರಾಮಾ ಪ್ರಿಟಿಯೋಸಮ್‍ನ್ನು ಪ್ರತಿ ಎಕರೆಗೆ 50,000 ರಂತೆ 15 ದಿನಗಳ ಅಂತರದಲ್ಲಿ 2 ಸಲ ಬಿಡುಗಡೆ ಮಾಡಬೇಕು. ಜೈವಿಕ ಶೀಲೀಂಧ್ರವಾದ ಮೆಟಾರೈಜಿಯಮ್ ರೀಲೈಯನ್ನು 3.0 ಗ್ರಾಂ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ಬ್ಯಾಸಿಲಸ್ ಥುರಿಂಜಿಯೆನ್ಸಸ್ (ಬಿ.ಟಿ.) ಜೈವಿಕ ಕೀಟನಾಶಕವನ್ನು 2.0 ಮಿ.ಲೀ. ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಸ್ಪಿನೋಟೋರಮ್ 11.7 ಎಸ್.ಸಿ. 0.5 ಮೀ.ಲಿ. ಅಥವಾ ಇಮಾಮೆಕ್ಟಿನ್ ಬೆಂಜೋಯೆಟ್ 0.4 ಗ್ರಾಂ. ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು (ಸಿಂಪರಣೆಯನ್ನು ಎಲೆ ಸುಳಿಯಲ್ಲಿ ಕೈಗೊಳ್ಳಬೇಕು).

ಕಾಂಡಕೊರೆಯುವ ಹುಳುಗಳಿಗೆ: ಪ್ರತಿ ಎಕರೆಗೆ 3 ಕಿ.ಗ್ರಾಂ. ನಂತೆ ಕಾರ್ಬೊಫ್ಯುರಾನ್ ಶೇ.3ರ ಹರಳನ್ನು ಸುಳಿಯಲ್ಲಿ ಹಾಕಬೇಕು. ಅಥವಾ ಕ್ಲೊರಾಂಟ್ರಿನಿಲಿಪ್ರೋಲ್ 18.5 ಎಸ್.ಸಿ @ 0.2 ಪ್ರತಿ ಲೀ.ನೀರಿಗೆ ಬೆರೆಸಿ 20-25 ದಿವಸದ ಬೆಳೆಗೆ ಸಿಂಪಡಿಸಬೇಕು. ಸೊರಗು ರೋಗ ಹೊಲದಲ್ಲಿ ನೀರು ನಿಲ್ಲದಂತೆ ಬಸಿಗಾಲುವೆ ಮಾಡಬೇಕು. ನಂತರ ಸಾಫ್ (ಕಾರ್ಬನ್‍ಡೈಜಿಮ್ + ಮ್ಯಾಂಕೋಜೆಬ್) 2 ಗ್ರಾಂ ಪ್ರತಿ ಲೀ.ನೀರಿಗೆ ಬೆರೆಸಿ ಬೇರಿನ ಬುಡಕ್ಕೆ ಹಾಕಬೇಕು.

ಭತ್ತದಲ್ಲಿ ಕಾಂಡಕೊರೆಯುವ ಹುಳು: ಟ್ರೈಕೋಗ್ರಾಮ್ ಜಪೋನಿಕಮ್ ಮೊಟ್ಟೆ ಪರತಂತ್ರ ಜೀವಿಯನ್ನು ಒಂದು ತಿಂಗಳಿನಿಂದ ಪ್ರತಿವಾರ ಪ್ರತಿ ಎಕರೆಗೆ 20,000 ದಂತೆ 6 ವಾರಗಳ ಕಾಲ ಬಿಡುಗಡೆ ಮಾಡಬೇಕು. ಪ್ರತಿ ಎಕರೆಗೆ 12-15 ಲಿಂಗಾರ್ಷಕ ಬಲೆಗಳನ್ನು ಹಾಕಬೇಕು. ಪ್ರತಿ ಎಕರೆಗೆ ಹರಳು ರೂಪದ ಕೀಟನಾಶಕಗಳಾದ ಸ್ಪೈನಿಟೋರಮ್ 0.8% ಜಿ.ಆರ್. 3.5 ಕೆ.ಜಿ. ಅಥವಾ ಕ್ಲೋರಂಟ್ರಿನೈಲಿಪ್ರೋಲ್ 0.4 ಜಿ.ಆರ್. 4 ಕೆ.ಜಿ. ಅಥವಾ ಕಾರ್ಟಫ್‍ಹೈಡ್ರೋಕ್ಲೋರೆಡ್ 10 ಕೆ.ಜಿ. ಅಥವಾ 2 ಮಿ.ಲೀ. ಕ್ಲೋರ್‍ಪೈರಿಫಾಸ್ 20 ಇ.ಸಿ. ಅಥವಾ 2 ಮಿ.ಲೀ. ಪ್ರೋಫೆನಾಫಾಸ್ 50% ಇ.ಸಿ. ಸಿಂಪಡಿಸಿ. ಎಕರೆಗೆ 200 ಲೀ. ಸಿಂಪರಣಾ ದ್ರಾವಣ ಬಳಸಬೇಕು.

ಬೆಂಕಿರೋಗ ನಿರ್ವಹಣೆ: ರೋಗದ ಲಕ್ಷಣ ಕಾಣಿಸಿದರೆ 0.6 ಗ್ರಾಂ ಟ್ರೈಸೈಕ್ಲೋಜೋಲ್ 75 ಡಬ್ಲ್ಯೂ.ಪಿ ಅಥವಾ 1.0 ಮಿ.ಲೀ ಪ್ರೊಪಿಕೋನೋಜೋಲ್ 25 ಇ.ಸಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. 0.4 ಗ್ರಾಂ. ಟ್ರಿಫ್ಲಾಕ್ಸಿಸ್ಟ್ರೋಬಿನ್ 25% + ಟೆಬುಕೊನೊಜೋಲ್ 50% Wಉ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ದುಂಡಾಣು ಅಥವಾ ಬ್ಯಾಕ್ಟರೀಯಾ ರೋಗಕ್ಕೆ: 0.5 ಗ್ರಾಂ. ತಾಮ್ರದ ಆಕ್ಸಿಕ್ಲೋರೈಡ್ 50 ಡಬ್ಲ್ಯೂ.ಪಿ ಮತ್ತು 0.05 ಗ್ರಾಂ. ಸ್ಟ್ರೆಪ್ಟೋಸೈಕ್ಲಿನ್ ಶಿಲೀಂಧ್ರನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಸಜ್ಜೆ: ಸಜ್ಜೆಯಲ್ಲಿ ತೆನೆ ತಿನ್ನುವ ಹುಳುವಿಗಾಗಿ ಇಮಾಮೆಕ್ಟಿನ್ ಬೆಂಜೋಯೆಟ್ 0.2 ಗ್ರಾಂ ಪ್ರತಿ ಲೀ.ನೀರಿಗೆ ಬೆರೆಸಿ ಸಿಂಪಡಿಸಬೇಕು. ಬೆಳೆ ಎತ್ತರವಿದ್ದಲ್ಲಿ ಡ್ರೋಣ್ ಮುಖಾಂತರ ಸಿಂಪರಣೆಯನ್ನು ಕೈಗೊಳ್ಳಬೇಕು.

ತೊಗರಿ ಬೆಳೆ:

ಗೊಡ್ಡು ರೋಗ: ರೋಗ ಬಂದ ಗಿಡಗಳನ್ನು ಕಿತ್ತು ನಾಶಮಾಡಬೇಕು. ನುಸಿ ನಾಶಕಗಳಾದ ನೀರಿನಲ್ಲಿ ಕರಗುವ ಗಂಧಕ 2.5 ಗ್ರಾಂ ಅಥವಾ ಇಥಿಯಾನ್ 50 ಇ.ಸಿ. 2 ಮಿ.ಲೀ. ಅಥವಾ ಫೆನಾಜ್‍ಕ್ವಿನ್ 10 ಇ.ಸಿ. 2.00 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ.

ಸೊರಗು ರೋಗ: ಅತಿಯಾದ ಮಳೆಯಿಂದ ಹೊಲದಲ್ಲಿ ನಿಂತ ನೀರನ್ನು ಬಸಿದು ಹೋಗಲು ಬಸಿಗಾಲುವೆಯನ್ನು ನಿರ್ಮಿಸಬೇಕು. ನಂತರ ಶೀಲೀಂದ್ರನಾಶಕವಾದ ಸಾಫ್ (ಕಾರ್ಬನ್‍ಡೈಜಿಮ್ + ಮ್ಯಾಂಕೋಜೆಬ್) 2 ಗ್ರಾಂ ಪ್ರತಿ ಲೀ.ನೀರಿಗೆ ಬೆರೆಸಿ ಬೇರಿನ ಬುಡಕ್ಕೆ ಹಾಕಬೇಕು. ಶೇ. 50% ಹೂ ಹಾಡುವ ಹಂತದಲ್ಲಿ ಹೂ ಮತ್ತು ಕಾಯಿಗಳು ಚೆನ್ನಾಗಿ ಬೆಳೆಯಲು ಪಲ್ಸ್ ಮ್ಯಾಜಿಕ್ 4 ಗ್ರಾಂ ಪ್ರತಿ ಲೀ.ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ಇಳುವರಿ ಹೆಚ್ಚಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐ.ಸಿ.ಎ.ಆರ್-ಕೃಷಿ ವಿಜ್ಞಾನಕೇಂದ್ರ, ಗಂಗಾವತಿ ಇವರನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande