ಕೊಪ್ಪಳ, 15 ಆಗಸ್ಟ್ (ಹಿ.ಸ.) :
ಆ್ಯಂಕರ್ : ರಾಮಾಯಣ ಕಾಲದಿಂದಲೂ ಪ್ರಚಲಿತದಲ್ಲಿರುವ ಜಿಲ್ಲೆಯ ಕಿಷ್ಕಿಂದೆ ಪರಿಸರದಲ್ಲಿನ ಪಶ್ಚಿಮ ಭಾಗದ ಕೆರೆಹಳ್ಳಿ, ಅಗಳಕೇರಿ ಸೀಮೆಯ ಗುಡ್ಡದಲ್ಲಿ ಭಕ್ತಿ, ಪ್ರತಾಪ, ತೇಜಸ್ಸು ಮತ್ತು ಬಲಗಳಿಂದ ಕೂಡಿದ ಪ್ರಾಣದೇವರು ಇಲ್ಲಿ ತೇರಿನ ಹನುಮಂತರಾಯ ಮತ್ತು ಶ್ರೀ ಅಂದಿಗಾಲೀಶನಾಗಿ ನೆಲೆ ನಿಂತಿದ್ದು ನಾಳೆ ಶ್ರಾವಣ ಮಾಸದ ನಾಲ್ಕನೇ ಶನಿವಾರ ವೈಭವದ ಜಾತ್ರೆ ಜರುಗಲಿದೆ.
ಸುಗ್ರೀವನ ಪ್ರಧಾನಿಯಾಗಿ ತನ್ನದೇ ಆದ ಅಸ್ತಿತ್ವ ರೂಪಿಸಿಕೊಂಡಿದ್ದ ಕಿಷ್ಕಿಂದೆಯ ಹನುಮಂತ ಸೀತಾಮಾತೆಗೆ ರಾಮನ ಉಂಗುರ ಕೊಟ್ಟು ಜಗತ್ತಿನ ತಾಯ್ತಂದೆಯರನ್ನು ಒಂದುಗೂಡಿಸಿದ ಹಿರಿಮೆ ಇದೆ. ರಾಮಾಯಣ ಕಾಲದ ಹಂಪಿ-ಕಿಷ್ಕಿ0ದೆ ಪರಿಸರದಲ್ಲಿನ ಕಲ್ಲು ಬಂಡೆಗಳಲ್ಲಿ ಹನುಮಂತನ ವಿಗ್ರಹಗಳು, ಪೂಜಾ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿವೆ.
ಇದೇ ಪರಿಸರದಲ್ಲಿರುವ ಅಗಳಕೇರಿ ಮತ್ತು ಕೆರೆಹಳ್ಳಿ ಗುಡ್ಡದಲ್ಲಿ ಪ್ರಾಣದೇವರು ಶ್ರೀ ಅಂದಿಗಾಲೀಶನಾಗಿ ಮತ್ತು ಶ್ರೀ ತೇರಿನ ಹನುಮಂತನಾಗಿ ಪ್ರಚಲಿತದಲ್ಲಿದ್ದು ಭಕ್ತರು ಅಂದು ಉಭಯ ಗುಡ್ಡಗಳಲ್ಲಿ ಭಕ್ತಿಯಿಂದ ಗುಡ್ಡ ಏರಿ, ಪ್ರಾಣದೇವರ ದರ್ಶನ ಪಡೆದು ಪುನೀತರಾಗಲಿದ್ದಾರೆ.
ಭಕ್ತಿ-ಪ್ರತಾಪ-ತೇಜಸ್ಸು-ಬಲ:
`ರಾಮನ ಉಸಿರೇ ಹನುಮ, ಹನುಮನ ಪ್ರಾಣವೇ ರಾಮ' ಎನ್ನುವಂತೆ ಗುಡ್ಡದ ಮೇಲೆ ಬೀಸುವ ಗಾಳಿ ವಾಯುದೇವರನ್ನು ಸ್ತುತಿಸುತ್ತ ರಾಮ ನಾಮದ ನೆಪದಲ್ಲಿ ಸುಂಯ್ ಗುಡುತ್ತಿರುತ್ತದೆ. ಗುಡ್ಡ ಹತ್ತಿ ಪ್ರಕೃತಿ ಪರಿಸರ ಆಸ್ವಾದಿಸುವುದೇ ಒಂದು ಮಹಾದಾನಂದ. ತೇರಿನ ಹನುಮಪ್ಪ ಮತ್ತು ಅಂದಿಗಾಲೀಶನ ದರ್ಶನ ಪಡೆಯುವುದರಿಂದ ಸಾತ್ವಿಕ ಅನುಭೂತಿ ಸಿಗುತ್ತದೆ. ಕೆರೆಹಳ್ಳಿ ಗ್ರಾಮದ ತಿರುಗಲ್ ತಿಮ್ಮಪ್ಪನ ಗುಡ್ಡದಲ್ಲಿ ನೆಲೆಗೊಂಡ ತೇರಿನ ಹನುಮಂತ ಭಕ್ತಿ ಮತ್ತು ತೇಜಸ್ಸುಗಳೊಂದಿಗೆ ವಿನೀತನಾಗಿ ಭಕ್ತರನ್ನು ಕೈ ಬೀಸಿ ಕರೆದರೆ, ಅಗಳಕೇರಿಯ ಅಂದಿಗಾಲೀಶ ಪ್ರತಾಪ ಮತ್ತು ಬಲವನ್ನು ಮೈಗೂಡಿಸಿಕೊಂಡು ಭಕ್ತರನ್ನು ತನ್ನತ್ತ ಸೆಳೆಯುತ್ತಿದ್ದಾನೆ. ಹೀಗಾಗಿ ಕೊಪ್ಪಳ ಜಿಲ್ಲೆಯ ಅನೇಕ ಗ್ರಾಮಗಳ ಜನರು ಶನಿವಾರದಂದು ಗುಡ್ಡ ಹತ್ತಿ ಪ್ರಾಣದೇವರ ದರ್ಶನ ಪಡೆದು ಧನ್ಯತೆ ಹೊಂದುತ್ತಾರೆ.
ಪಲ್ಲಕ್ಕಿಯೊಂದಿಗೆ ಗುಡ್ಡ ಪ್ರವೇಶ:
ಗುಡ್ಡದಲ್ಲಿ ತೇರಿನ ಹನುಮಂತರಾಯ ಮತ್ತು ಅಂದಿಗಾಲೀಶನಿಗೆ ಅಭಿಷೇಕ, ಕುಂಕುಮಾರ್ಚನೆ, ಹೂವು ಹಾಗೂ ಒಡವೆಗಳ ಅಲಂಕಾರ, ದೀಪ, ಧೂಪ ಹಾಗೂ ಮಹಾ ಮಂಗಳಾರತಿ ಕಾರ್ಯಕ್ರಮಗಳು ಜರುಗಲಿವೆ. ಕೆರೆಹಳ್ಳಿ ಮತ್ತು ಅಗಳಕೇರಿ ಗ್ರಾಮಗಳ ಪೂಜಾರ ಮನೆತನದವರು ಆಯಾ ಗ್ರಾಮಗಳ ದೈವಸ್ವತರ ಸಮ್ಮುಖದಲ್ಲಿ ಪ್ರಾಣದೇವರಿಗೆ ವಿಶೇಷ ಪೂಜೆ ನೆರವೇರಿಸಿ, ಉಭಯ ಗುಡ್ಡಕ್ಕೆ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ತರುತ್ತಾರೆ. ಡೊಳ್ಳು ವಾದ್ಯ, ಗಂಟೆ, ಜಾಗಟೆಗಳೊಂದಿಗೆ `ಗೋವಿಂದಾ ಗೋವಿಂದಾ' ಎನ್ನುವ ಉದ್ಘೋಷದೊಂದಿಗೆ ಭಕ್ತರು ಗುಡ್ಡ ಹತ್ತುತ್ತಾರೆ.
ಬಂಡೆಯೂಟದ ಸವಿ:
ತೇರಿನ ಹನುಂತರಾಯನಿಗೆ ಪೂಜೆ ಸಲ್ಲಿಸುವ ಮುನ್ನ ಗಂಗೆ ಪೂಜೆ, ತಿರುಗಲ್ ತಿಮ್ಮಪ್ಪ ಮತ್ತು ಲಕ್ಷಿö್ಮÃದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಪಲ್ಲಕ್ಕಿಯೊಂದಿಗೆ ತೇರಿನ ಹನುಮಂತನ ಗುಡಿಗೆ ಬರುತ್ತಾರೆ. ಹನುಮಂತನಿಗೆ ಪೂಜೆ ಸಲ್ಲಿಸಿ, ಗುಡ್ಡದಲ್ಲಿಯೇ ತಯಾರಿಸಿದ ಖಾದ್ಯವನ್ನು ಸಮರ್ಪಿಸಿ ಸಾಮೂಹಿಕ ಬಂಡೆ ಊಟಕ್ಕೆ ಅನುವು ಮಾಡಿಕೊಡುತ್ತಾರೆ. ಅಗಳಕೇರಿಯ ಅಂದಿಗಾಲೀಶ ಗುಡ್ಡದಲ್ಲೂ ಇದೇ ಪದ್ಧತಿ ಇದೆ. ಭಕ್ತರು ಗುಡ್ಡದಲ್ಲಿ ಅಡುಗೆ ತಯಾರಿಸಿ, ಭಕ್ಷö್ಯವನ್ನು ದೇವರಿಗೆ ಅರ್ಪಿಸಿ ಬಳಿಕ ಪ್ರಸಾದ ಸೇವಿಸುತ್ತಾರೆ. ಅಗಳಕೇರಿ ದೈವಸ್ಥರಿಂದ ಇಡೀ ದಿನ ಅನ್ನದಾಸೋಹ ಕಾರ್ಯಕ್ರಮ ಇರುತ್ತದೆ. ಶಿವಪುರ, ಹರ್ಲಾಪುರ, ಶಹಪುರ, ಹಿಟ್ನಾಳ, ಕಂಪಸಾಗರ, ಹುಲಿಗಿ, ಹೊಸಳ್ಳಿ, ಬೇವಿನಹಳ್ಳಿ, ಲಿಂಗದಹಳ್ಳಿ, ಗುಡದಹಳ್ಳಿ, ಬೂದುಗುಂಪಾ, ಇಂದರಿಗಿ, ಜಬ್ಬಲಗುಡ್ಡ ಸೇರಿದಂತೆ ಸುತ್ತಮತ್ತುಲಿನ ಹತ್ತಾರು ಗ್ರಾಮಗಳ ಜನರು ಅಂದಿಗಾಲೀಶ ಮತ್ತು ತೇರಿನ ಹನುಮಂತರಾಯ ಜಾತ್ರೆಯಲ್ಲಿ ಪಾಲ್ಗೊಂಡು ಶತಮಾನಗಳಿಂದಲೂ ನಡೆದುಕೊಂಡು ಬಂದಿರುವ ಧಾರ್ಮಿಕ ಆಚರಣೆಗಳನ್ನು ನೆರವೇರಿಸಲಿದ್ದಾರೆ.
ಹರಿದಾಸರಿಂದ ಆರಾಧನೆ:
ರಾಮಾಯಣ ಕಾಲದಿಂದಲೂ ಕಿಷ್ಕಿಂದೆಯ ಅಂಜನಾದ್ರಿ ಪ್ರಚಲಿತದಲ್ಲಿದ್ದು ವ್ಯಾಸರಾಯರು ಹಂಪಿ ಚಕ್ರತೀರ್ಥದಲ್ಲಿ ಯಂತ್ರೋದ್ಧಾರಕರನನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದರು. ಪುರಂದರ, ಕನಕರು, ಜಗನ್ನಾಥದಾಸರು, ವಿಜಯದಾಸರು, ಗೋಪಾಲದಾಸರು ಆದಿಯಾಗಿ ಅನೇಕ ಹರಿದಾಸರು ಪ್ರಾಣದೇವರ ಹಿರಿಮೆ, ಗರಿಮೆಗಳನ್ನು ತಮ್ಮ ಕೀರ್ತನೆ, ಸುಳಾದಿ ಉಗಾಭೋಗಳಲ್ಲಿ ಕೊಂಡಾಡಿದ್ದಾರೆ. ಇಂದಿಗೂ ಅನೇಕ ಭಕ್ತರು ಭಕ್ತಿಯಿಂದ ಹನುಮಂತದೇವರ ಕೀರ್ತನೆಗಳನ್ನು ಹಾಡುವುದನ್ನು ನಾವು ಕಾಣಬಹುದು. ಜಗನ್ನಾಥ ದಾಸರು ಹರಿಕಥಾಮೃತಸಾರದಲ್ಲಿ ``ಪ್ರಾಣದೇವನು ತ್ರಿವಿಧರೊಳಗೆ ಪ್ರವೀಣ ತಾನೆಂದೆನಿಸಿ ಅಧಿಕಾರಾನುಸಾರದಿ ಕರ್ಮಗಳ ತಾ ಮಾಡಿ ಮಾಡಿಸುವ, ಜ್ಞಾನ ಭಕ್ತಿ ಸುರರ್ಗೆ ಮಿಶ್ರಜ್ಞಾನ ಮಧ್ಯಮ ಜೀವರಿಗೆ ಅಜ್ಞಾನ ಮೋಹ ದ್ವೇಷಗಳ ದೈತ್ಯರಿಗೆ ಕೊಡುತಿಪ್ಪ ದೈತ್ಯಸಮುದಾಯಾಧಿಪತಿ ಕಲಿಯೆನಿಪ ಪವಮಾನ ನಿತ್ಯದಲಿ ಅವರೊಳು ಕರ್ಮಪ್ರವರ್ತಕನು ತಾನಾಗಿ ಶ್ರೀಪುರುಷೋತ್ತಮನ ಸಂಪ್ರೀತಿಗೋಸುಗ ಮಾಡಿ ಮಾಡಿಸುವ'' ಎಂದು ತಿಳಿದ್ದಾರೆ.
ಪ್ರಕೃತಿ ಸಂಪತ್ತು:
ಅಂದಿಗಾಲೀಶ ಗುಡ್ಡದಲ್ಲಿ ಅನೇಕ ಬಗೆಯ ಸಸ್ಯ ಸಂಪತ್ತು, ಕಲ್ಲು ಪೊಟರೆಗಳು, ಗುಂಡುಗಳು ಇದ್ದು ಭಕ್ತರಿಗೆ ಮತ್ತು ಪ್ರವಾಸಿಗರಿಗೆ ಮುದ ನೀಡುತ್ತವೆ. ಗುಡ್ಡದ ಅಡಿಯಲ್ಲಿ ಕೋತಿ ಗುಂಡಿನ ಬಳಿ ಉದ್ಯಾನವನ ಮನಮೋಹಕವಾಗಿದೆ. ದಿವ್ಯವಾದ ಮಾವಿನಗಿಡ, ತಿಲವೃಕ್ಷ, ಬಿಲ್ವ, ವೃಕ್ಷ, ಅಶ್ವತ್ಥ, ಚಂಪಕ, ಚೂತ, ಜಂಬು, ಬೇವು, ನಿಂಬೆ, ಕಪಿತ್ವ ಕದಳೀ, ಭೂರ್ಜ್ವ, ತಮಾಲ, ಗುಗ್ಗುಳ, ವಟವೃಕ್ಷ, ಆಮಲಕ, ನಾರಿಕೇಳ ಮೊದಲಾದ ವೃಕ್ಷಗಳು, ನಾನಾ ವಿಧವಾದ ಹೂವಿನ ಗಿಡಗಳು, ಬಳ್ಳಿಗಳಿಂದ ಕೂಡಿದ ದಿವ್ಯವಾದ ಸಸ್ಯ ಸಮೂಹವಿದೆ.
ಆಂಜನೇಯನ ಪ್ರಭಾವ:
`ಧರಾಧರಂತ ಧರಯಾ ಸಮಾನಂ ಕುಮನ್ ಪದಾಭ್ಯಾ ಮತಿಪೀಡನೇನ' ಉತ್ಪತ್ಯ ನಿತ್ಯೋದ್ಯುತಿಮಾನ್ ಹನೂಮಾನ್ ನಮೇಯಧಾಮಾ ಜಲದಿಂ' ಎಂದು ಉದ್ಗರಿಸಿರುವ ಆಂಜನೇಯನ ಭಕ್ತರೊಬ್ಬರು `ಪರ್ವತವನ್ನು ಕಾಲಿನಿಂದ ತುಳಿದು ತನ್ನ ಅಸಮಾನ ತೇಜಸ್ಸಿನಿಂದ ಗಗನಮಾರ್ಗವಾಗಿ ಹಾರಿ ಹನುಮಂತನು ಸಮುದ್ರವನ್ನು ದಾಟಿದನು' ಎಂದು ಬಣ್ಣಿಸಿದ್ದಾನೆ. ಇಲ್ಲಿಗೆ ಬರುವ ಭಕ್ತರು ಅತ್ಯಂತ ದುರ್ಬಲರಾದರೂ ಭಕ್ತಿಯಿಂದ ಗುಡ್ಡವನ್ನು ಹತ್ತಿ ಅಂದಿಗಾಲೀಶ, ತೇರಿನ ಹನುಮಂತನನ್ನು ಪೂಜಿಸಿ, ಭಜಿಸಿದರೆ ಬಲಾಢ್ಯರಾಗುತ್ತಾರೆ ಎನ್ನುವ ನಂಬಿಕೆ ಇದೆ. `ಬುದ್ಧಿರ್ಬಲಂ ಯಶೋ ಧೈರ್ಯಂ ನಿರ್ಭಯತ್ವಂ ಆರೋಗ್ಯತಾಂ... ಅಜಾಡ್ಯಂ ವಾಸ್ಪಟುತ್ವಂ ಚ ಹನುಮತ್ ಸ್ಮರಣಾದ್ ಭವೇತ್' ಎಂದು ಹನುಮಂತನನ್ನು ಪ್ರಾರ್ಥಿಸಿರುವ ಸದ್ಭಕ್ತರು ಶ್ರೀಹರಿ ವಾಯು ಗುರುಗಳ ಸ್ಮರಣೆಯಲ್ಲಿ ಇಲ್ಲಿನ ಪ್ರಾಣದೇವರನ್ನು ಸ್ಮರಿಸುತ್ತಿದ್ದಾರೆ. ತೇರಿನ ಹನುಮಪ್ಪ, ಅಂದಿಗಾಲೀಶನಲ್ಲದೇ ಕಿಷ್ಕಿಂದೆಯ ಭಾಗದಲ್ಲಿ ಅನೇಕ ಆಂಜನೇಯ ಮೂರ್ತಿಗಳಿವೆ.
ಗುಡ್ಡ ಹತ್ತಿ ಸಂಕಲ್ಪ ಮಾಡಿಕೊಳ್ಳಿ:
ವ್ಯಾಸರಾಯರು `ನಮಾಮಿ ದೂತಂ ರಾಮಸ್ಯ... ಸುಖದಂಚ ಸುರದ್ರುಮಮ್' ಎಂದು ಪ್ರಾರ್ಥಿಸಿದರೆ, ವಿಜಯದಾಸರು `ಕೋತಿಯಾದರೆ ಬಿಡೆನೊ ಬಲುಪರಿ ಭೂತಳದೊಳು ಪರ‍್ಯಾಡಲು ಬಿಡೆನೊ, ಖ್ಯಾತಿ ತೊರೆದು ಕಚ್ಚುಟ ಹಾಕಲು ಬಿಡೆನೊ, ಚಾತುರ ಬಿಟ್ಟರೆ ಬಿಡೆನೊ ನಾ ಬಿಡೆನೊ... ನೀನು ಒಲಿಯೇ ಹರಿ ತಾನೇ ಒಲಿವನಯ್ಯಾ ನೀನು ಮುನಿದಡೆ ಹರಿ ತಾನೆ ಮುನಿವನು, ಏನೆಂಬೆ ನಿನ್ನ ಮೇಲಣ ಹರಿಕಾರುಣ್ಯ ನೀನಲ್ಲದಿಲ್ಲದ ಸ್ಥಾನದಿ ತಾನಿಲ್ಲಾ, ಅನಂತ ಜನುಮಕ್ಕೆ ನೀನೆ ಗುರು ಎಂಬ ಜ್ಞಾನವೇ ಕೊಡು ಜೀಯಾ ವಿಜಯ ವಿಠ್ಠಲದಾಸಾ' ಎಂದು ತಮ್ಮ ಸುಳಾದಿಯಲ್ಲಿ ಪ್ರಾಣದೇವರ ಅಸ್ತಿತ್ವವನ್ನು ಭಾವುಕರಾಗಿ ಪ್ರಾರ್ಥಿಸಿ, ಬಣ್ಣಿಸಿದ್ದಾರೆ. ಇಂಥ ಶ್ರೀ ತೇರಿನ ಹನುಮಂತರಾಯ ಮತ್ತು ಅಂದಿಗಾಲೀಶನ ದರ್ಶನ ಪಡೆಯಲು ಆ.೧೬ರ ಶನಿವಾರ ಪ್ರಶಸ್ತವಾಗಿದ್ದು ಭಕ್ತರು ಗುಡ್ಡ ಹತ್ತಿ ತಮ್ಮ ಸಂಕಲ್ಪ ಸಿದ್ಧಿ ಮಾಡಿಕೊಳ್ಳಬಹುದು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್