ರಾಯಚೂರು, 13 ಆಗಸ್ಟ್ (ಹಿ.ಸ.)
ಆ್ಯಂಕರ್: ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಕಾಲ-ಕಾಲಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಅಂಗನವಾಡಿಯ ಕಾರ್ಯಕರ್ತರ ಹಾಜರಾತಿ, ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ ಜರುಗಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಅಗತ್ಯ ಕ್ರಮವಹಿಸಬೇಕು. 14 ರಿಂದ 18 ವರ್ಷದ ಯುವತಿಯರಿಗೆ ಕೌಶಲ ತರಬೇತಿ ನೀಡಿ ಉದ್ಯೋಗ ಅವಕಾಶ ಮಾಡಿದರೆ ಅನುಕೂಲವಾಗಲಿದ್ದು, ಈ ತರಬೇತಿ ಕಾರ್ಯಕ್ರಮದಡಿ ತಾಲೂಕು ಮಟ್ಟದಲ್ಲಿ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿ ಗ್ರಾಮೀಣ ನಿರುದ್ಯೋಗ ಯುವತಿಯರಿಗೆ ಉದ್ಯೋಗ ದೊರಕಿಸಬೇಕೆಂದರು.
ಜಿಲ್ಲೆಯಲ್ಲಿ ಬಾಲ್ಯ ವಿವಾಹ ಮತ್ತು ಪೋಕ್ಸೋ ಅಪರಾಧಗಳು ಕಂಡುಬಂದಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು. ಬಾಲ್ಯ ವಿವಾಹ ಮತ್ತು ಪೋಕ್ಸೋ ಪ್ರಕರಣಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಬೀದಿ ನಾಟಕಗಳು ಮತ್ತು ಜಾಗೃತ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜನೆ ಮಾಡಬೇಕು. ಬಾಲ್ಯ ವಿವಾಹಗಳ ಬಗ್ಗೆ ನಿಗಾವಹಿಸಿ ತಡೆಗಟ್ಟಲು ಮಾರ್ಗಸೂಚಿಗಳನ್ನು ರೂಪಿಸಬೇಕು. ಸಾರ್ವಜನಿಕರ ಸಹಕಾರ ಪಡೆದು ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿಯು ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸಿಇಓ ಅವರು ಸೂಚನೆ ನೀಡಿದರು.
ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನವೀನ್ ಕುಮಾರ್ ಅವರು ಮಾತನಾಡಿ, ಶಾಲಾ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಗ್ರಾಮಗಳಲ್ಲಿಯೇ ಇರುವುದರಿಂದ ಬಾಲ್ಯ ವಿವಾಹಗಳ ಬಗ್ಗೆ ಪತ್ತೆ ಹಚ್ಚಿ ಕಾರ್ಯಪಡೆಗೆ ಸಕಾಲಕ್ಕೆ ಮಾಹಿತಿ ಒದಗಿಸಲು ಕಾಳಜಿ ವಹಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿರುವ ಅಂಗನವಾಡಿ ಕೇಂದ್ರಗಳು ಮತ್ತು ಪೋಷಣ್ ಟ್ರ‍್ಯಾಕರ್ ತಂತ್ರಾಂಶದಲ್ಲಿ ಫಲಾನುಭವಿಗಳ ಆಧಾರ್ ಸೀಡಿಂಗ್ 2025ರ ಜುಲೈ ಅಂತ್ಯಕ್ಕೆ ಒಟ್ಟು 2,42,482 ಫಲಾನುಭವಿಗಳಿದ್ದು, 2,42,457 ಆಧಾರ್ ವೇರಿಫೈಡ್ ಮಾಡಲಾಗಿದೆ. ಇನ್ನೂ 25 ವೇರಿಫೈಡ್ ಬಾಕಿ ಉಳಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಪೋಷಣೆ ಅಭಿಯಾನ ಯೋಜನೆ ಸರಿಯಾಗಿ ಅನುಷ್ಠಾನಗೊಳಿ: ಜಿಲ್ಲೆಯಲ್ಲಿ ಪೋಷಣಾ ಅಭಿಯಾನ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ವಿತರಸಲಾದ ಗ್ರೋಥ್ ಮಾನಿಟರಿಂಗ್ ಮಾಪನಗಳ ಮಾಹಿತಿ ನೀಡುವಲ್ಲಿ ಹೆಚ್ಚಿನ ಗಮನಹರಿಸಬೇಕು. ಜಿಲ್ಲೆಯಲ್ಲಿರುವ ಅಂಗನವಾಡಿ ಕೇಂದ್ರಗಳು ಮತ್ತು ಫಲಾನುಭವಿಗಳ ಆಧಾರ್ ಸೀಡಿಂಗ್ ಮಾಹಿತಿ ಸರಿಯಾದ ರೀತಿಯಲ್ಲಿ ನೀಡಬೇಕು. ಜಿಲ್ಲೆಯಲ್ಲಿರುವ ಒಟ್ಟು ಫಲಾನುಭವಿಗಳ ಮೊಬೈಲ್ ಸಂಖ್ಯೆ ಪರಿಶೀಲಿಸಿ ಮಾಹಿತಿ ನೀಡಬೇಕು. ಪೋಷಣ್ ಟ್ರ‍್ಯಾಕರ್ ನಲ್ಲಿ ದೈನಂದಿನ ಚಟುವಟಿಕೆಯ ಮಾಹಿತಿಯು ಸಹ ಅಧಿಕಾರಿಗಳಿಗೆ ಸಲ್ಲಿಸಬೇಕು. ಪೋಷಣ್ ಟ್ರ‍್ಯಾಕರ್‌ನಲ್ಲಿ ಫಲಾನುಭವಿಗಳನ್ನು 0-6 ವರ್ಷದ ಮಕ್ಕಳ ತೂಕ ಮತ್ತು ಎತ್ತರ ಮಾಡಬೇಕು.
ಹದಿಹರೆಯದ ಕಿಶೋರಿಯರ ತೂಕ ಮತ್ತು ಎತ್ತರ ಅಳವಡಿಸಿರುವ ಮಾಹಿತಿ, ಪೋಷಣ್ ಟ್ರ‍್ಯಾಕರ್ ತಂತ್ರಾಂಶದಲ್ಲಿ ಫಲಾನುಭವಿಗಳ ಮನೆ ಭೇಟಿ ಮಾಹಿತಿ ನೀಡಿ ಜಿಲ್ಲೆಯಲ್ಲಿ ಪೋಷಣೆ ಅಭಿಯಾನ ಯೋಜನೆಯನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಲವಾರು ಯೋಜನೆಗಳಾದ ಮಿಶನ್ ಶಕ್ತಿ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ, ಶಕ್ತಿ ಸದನ ಯೋಜನೆ, ಶಿಶು ಪಾಲನಾ ಕೇಂದ್ರಗಳು, ಬಾಲಕಿಯರ ವಸತಿ ನಿಲಯ ಯೋಜನೆ, ಸಾಂತ್ವನ ಯೋಜನೆ, ಸ್ತ್ರೀ ಶಕ್ತಿ ಯೋಜನೆ ಸೇರಿದಂತೆ ಇತರೆ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಇದೇ ಸಂದರ್ಭದಲ್ಲಿ ರಾಯಚೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ್, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ನಂದಿತಾ, ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೆ.ಡಿ.ಬಡಿಗೇರ, ಮಿಶನ್ ಶಕ್ತಿ ಯೋಜನೆಯ ನಿರ್ವಾಹಕರಾದ ಗಿರಿಜಾ, ಸಖಿ ಒನ್ ಕೇಂದ್ರ ರೀಮ್ಸ್ ಸಿಬ್ಬಂದಿ ಭಾಗ್ಯವತಿ, ಒ.ಎಸ್.ಸಿ ಲೀಗಲ್ ಅಡ್ವೋಕೇಟ್ ಪಾರ್ವತಿ ಸೇರಿದಂತೆ ಇತರರು ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್