ಆ.19 ರಂದು ವಿಶ್ವ ಮಾನವೀಯ ದಿನ ಆಚರಣೆ
ಬಳ್ಳಾರಿ, 12 ಆಗಸ್ಟ್ (ಹಿ.ಸ.) : ಆ್ಯಂಕರ್ : ವಿಪತ್ತಿನ ಸಂದರ್ಭದಲ್ಲಿ ಹಾಗೂ ಸಂಘರ್ಷಗಳಲ್ಲಿ ಸಿಲುಕಿರುವ ಜನರಿಗೆ ಸಹಾಯ ಮಾಡಲು ತಮ್ಮ ಪ್ರಾಣ ಪಣಕ್ಕಿಟ್ಟು ಸೇವೆ ಸಲ್ಲಿಸುವ ಮಾನವೀಯ ಕಾರ್ಯಕರ್ತರನ್ನು ಗೌರವಿಸಲು ಮತ್ತು ಅವರ ಕೆಲಸವನ್ನು ಸ್ಮರಿಸಲು ಆ.19 ರಂದು ವಿಶ್ವ ಮಾನವೀಯ ದಿನ ಆಚರಿಸಲಾಗುತ್ತಿದ್ದು
ಆ.19 ರಂದು ವಿಶ್ವ ಮಾನವೀಯ ದಿನ ಆಚರಣೆ


ಬಳ್ಳಾರಿ, 12 ಆಗಸ್ಟ್ (ಹಿ.ಸ.) :

ಆ್ಯಂಕರ್ : ವಿಪತ್ತಿನ ಸಂದರ್ಭದಲ್ಲಿ ಹಾಗೂ ಸಂಘರ್ಷಗಳಲ್ಲಿ ಸಿಲುಕಿರುವ ಜನರಿಗೆ ಸಹಾಯ ಮಾಡಲು ತಮ್ಮ ಪ್ರಾಣ ಪಣಕ್ಕಿಟ್ಟು ಸೇವೆ ಸಲ್ಲಿಸುವ ಮಾನವೀಯ ಕಾರ್ಯಕರ್ತರನ್ನು ಗೌರವಿಸಲು ಮತ್ತು ಅವರ ಕೆಲಸವನ್ನು ಸ್ಮರಿಸಲು ಆ.19 ರಂದು ವಿಶ್ವ ಮಾನವೀಯ ದಿನ ಆಚರಿಸಲಾಗುತ್ತಿದ್ದು, ಅವರ ಸ್ಮರಣೆ ಅಗತ್ಯವಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದ್ದಾರೆ.

ಮಂಗಳವಾರ, ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿಡೀಯೋ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಾನವೀಯತೆಯ ವಿವಿಧ ಅಂಶಗಳ ಮೇಲೆ ಬೆಳಕು ಚೆಲ್ಲುವುದು, ಮಾನವೀಯ ಕಾರ್ಯಕರ್ತರ ಕೆಲಸವನ್ನು ಗುರುತಿಸುವುದು ಮತ್ತು ಗೌರವಿಸುವುದು ನಮ್ಮ ಕರ್ತವ್ಯವಾಗಿದ್ದು, ಮಾನವೀಯ ತತ್ವಗಳನ್ನು ಎತ್ತಿಹಿಡಿಯುವುದು ಮತ್ತು ಮಾನವೀಯ ಸೇವೆಗಳನ್ನು ಉತ್ತೇಜಿಸುವುದು ಸಹ ಅಷ್ಟೇ ಮುಖ್ಯವಾಗಿದೆ ಎಂದರು.

ಹಾಗಾಗಿ ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಆ.19 ರಂದು ಜಿಲ್ಲೆಯಲ್ಲಿನ ಮಾನವೀಯ ಕಾರ್ಯಕರ್ತರೊಂದಿಗೆ ವಿಡಿಯೋ ಸಂವಾದದ ಮೂಲಕ ಕಾರ್ಯಕ್ರಮ ಆಯೋಜಿಸಲು ಕ್ರಮ ವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

16 ಮನೆ-ಹಾನಿ:

ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ಭಾರಿ ಪ್ರಮಾಣದ ಮಳೆ ಸುರಿದಿದ್ದು, ಸಂಡೂರು ತಾಲ್ಲೂಕು ಹೊರತುಪಡಿಸಿ ಉಳಿದ ನಾಲ್ಕು ತಾಲ್ಲೂಕುಗಳಲ್ಲಿ ವಿವಿಧೆಡೆ 16 ಮನೆ ಹಾನಿಯಾಗಿವೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಸಭೆಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು, ವಿಪತ್ತು ನಿರ್ವಹಣಾ ಪ್ರಾಧಿಕಾರ ತಂಡದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸೂಕ್ತ ಪರಿಹಾರ ಒದಗಿಸಲು ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಿದರು.

ಮಲೆನಾಡು ಭಾಗದಲ್ಲಿ ಮುಂದಿನ ವಾರದಲ್ಲಿಯೂ ಹೆಚ್ಚಿನ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ಇದ್ದು, ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣ ನೀರು ಹರಿದುಬರುವ ಸಂಭವವಿದೆ. ಹಾಗಾಗಿ ನದಿ ಪಾತ್ರದ ಗ್ರಾಮಗಳಲ್ಲಿ ಮುಂಜಾಗ್ರತೆ ವಹಿಸಲು ಸೂಚಿಸಬೇಕು. ಈ ಕುರಿತು ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ರಾಜ್ಯ ವಿಪತ್ತು ಉಪಶಮನ ನಿಧಿಯಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳಿಗೆ ವೇಗ ನೀಡಬೇಕು. ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳಿಸಲು ಮುತುವರ್ಜಿ ವಹಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್, ಸಹಾಯಕ ಆಯುಕ್ತ ಪಿ.ಪ್ರಮೋದ್, ಡಿಡಿಎಲ್‍ಆರ್ ಅಧಿಕಾರಿಗಳು ಸೇರಿದಂತೆ ಎಲ್ಲಾ ತಾಲ್ಲೂಕು ತಹಶೀಲ್ದಾರರು ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande