ಬಳ್ಳಾರಿ, 12 ಆಗಸ್ಟ್ (ಹಿ.ಸ.) :
ಆ್ಯಂಕರ್ : ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಆಗಸ್ಟ್ 13 ಮತ್ತು 14 ರಂದು ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅವರ ಸಹಭಾಗಿತ್ವದಲ್ಲಿ ಎಐ- ಪವರ್‍ಡ ಅಪ್ಲಿಕೇಷನ್ಸ್ ಆ್ಯಂಡ್ ಸ್ಟ್ರಾಟೆಜೀಸ್ ಫಾರ್ ಬಿಸಿನೆಸ್ ಎಕ್ಸಲೆನ್ಸ್’ (ವ್ಯವಹಾರ ಶ್ರೇಷ್ಠತೆಗಾಗಿ ಕೃತಕ ಬುದ್ಧಿಮತ್ತೆ ಚಾಲಿತ ಅಪ್ಲಿಕೇಶನ್‍ಗಳು ಮತ್ತು ತಂತ್ರಗಳು) ಎಂಬ ವಿಷಯದ ಕುರಿತು ವಿವಿ ಯ ಅಂಬೇಡ್ಕರ್ ಸಭಾಂಗಣದಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ.
ಆ.13 ರಂದು ಸಮ್ಮೇಳನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ವಿಯ ಕುಲಪತಿ ಪ್ರೊ.ಎಂ.ಮುನಿರಾಜು ಅವರು ವಹಿಸುವರು.
ಮುಖ್ಯ ಅತಿಥಿಗಳಾಗಿ ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ನಿಕಾಯದ ಡೀನರಾದ ಪ್ರೊ.ಈರೇಶಿ ಭಾಗವಹಿಸುವರು. ಇನ್ಸ್ಟಿಟ್ಯೂಟ್ ಆಫ್ ಅನಾಲಿಟಿಕ್ಸ್‍ನ ಶಿಕ್ಷಣಶಾಸ್ತ್ರ ವಿಭಾಗದ ನಿರ್ದೇಶಕ ಡಾ.ಕ್ಲೇರ್ ವಾಲ್ಷ್ ಅವರು ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡುವರು.
ವಿವಿ ಯ ನಿರ್ವಹಣಾಶಾಸ್ತ್ರ ನಿಕಾಯದ ಮಾಜಿ ಡೀನರಾದ ಡಾ.ಎಸ್.ಜಯಣ್ಣ, ವಿವಿಯ ಕುಲಸಚಿವ ಸಿ.ನಾಗರಾಜು, ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಎಂ.ಸಾಲಿ ಹಾಗೂ ಹಣಕಾಸು ಅಧಿಕಾರಿ ನಾಗರಾಜು, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಸದ್ಯೋಜಾತಪ್ಪ.ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಎರಡನೇ ದಿನವಾದ ಆ.14 ರಂದು ನಡೆಯುವ ಸಮ್ಮೇಳನದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವಿಯ ಕುಲಪತಿ ಪ್ರೊ.ಎಂ.ಮುನಿರಾಜು ವಹಿಸುವರು.
ಮುಖ್ಯ ಅತಿಥಿಗಳಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಳ್ಳಾರಿ ವಲಯದ ಪ್ರಾದೇಶಿಕ ವ್ಯವಸ್ಥಾಪಕ ರವಿ ಭಾಸ್ಕರ್ ಮೇಶ್ರಾಂ, ಸಮಾರೋಪ ಭಾóಷಣಕಾರರಾಗಿ ಹ್ಯೆದ್ರಾಬಾದ್‍ನ ಸಿನರ್ಜಿ ಸ್ಕೂಲ್ ಆಫ್ ಬಿಸಿನೆಸ್ ಮ್ಯಾನೇಜ್‍ಮೆಂಟ್ ಮುಖ್ಯಸ್ಥ ಪ್ರೊ.ಬಿ.ರಮೇಶ, ಗೌರವ ಅತಿಥಿಯಾಗಿ ಗುಲ್ಬರ್ಗ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ನಿಕಾಯದ ಡೀನರಾದ ಡಾ.ಎ.ಪಿ.ಹೊಸಮನಿ ಹಾಗೂ ವಿವಿ ಯ ಕುಲಸಚಿವ ಸಿ.ನಾಗರಾಜು, ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಎಂ.ಸಾಲಿ ಹಾಗೂ ಹಣಕಾಸು ಅಧಿಕಾರಿ ನಾಗರಾಜ ಸೇರಿದಂತೆ ಇತರರು ಉಪಸ್ಥಿತರಿರುವರು.
ಸಮ್ಮೇಳನದಲ್ಲಿ 8 ಅಂತಾರಾಷ್ಟ್ರೀಯ, 75 ರಾಷ್ಟ್ರೀಯ ಮಟ್ಟದ ಲೇಖನಗಳು ಸೇರಿದಂತೆ 300 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಸಮ್ಮೇಳನಕ್ಕೆ ಸಲ್ಲಿಕೆಯಾಗಿದ್ದು ಅವುಗಳನ್ನು ಲೇಖಕರು ಮಂಡಿಸಲಿದ್ದಾರೆ.
ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ನಿಕಾಯದ ಎಲ್ಲ ವಿಭಾಗಗಳ ಬೋಧಕ-ಬೋಧಕೇತರ ಸಿಬ್ಬಂದಿ, ವಿವಿಯ ಎಲ್ಲ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ 500ಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ ಎಂದು ಸಮ್ಮೇಳನದ ಸಂಚಾಲಕ ವಿವಿಯ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಸದ್ಯೋಜಾತಪ್ಪ.ಎಸ್ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್