ರಾಜಣ್ಣ ವಜಾ : ವಿಧಾನ ಪರಿಷತ್‌ನಲ್ಲಿ ಗದ್ದಲ
ಬೆಂಗಳೂರು, 12 ಆಗಸ್ಟ್ (ಹಿ.ಸ.) : ಆ್ಯಂಕರ್ : ಸಚಿವ ಸಂಪುಟದಿಂದ ಕೆ.ಎನ್. ರಾಜಣ್ಣ ಅವರನ್ನು ವಜಾಗೊಳಿಸಿದ ವಿಷಯ ಇಂದು ವಿಧಾನ ಪರಿಷತ್ ಕಲಾಪದಲ್ಲಿ ಭಾರಿ ಗದ್ದಲ-ಗಲಾಟೆಗೆ ಕಾರಣವಾಯಿತು. ಕಲಾಪ ಆರಂಭವಾದ ತಕ್ಷಣವೇ ಪ್ರತಿ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಹಕಾರಿ ಸಚಿವರಾಗಿದ್ದ ರಾಜಣ್ಣ ಅವರನ್ನು ವಜ
Session


ಬೆಂಗಳೂರು, 12 ಆಗಸ್ಟ್ (ಹಿ.ಸ.) :

ಆ್ಯಂಕರ್ : ಸಚಿವ ಸಂಪುಟದಿಂದ ಕೆ.ಎನ್. ರಾಜಣ್ಣ ಅವರನ್ನು ವಜಾಗೊಳಿಸಿದ ವಿಷಯ ಇಂದು ವಿಧಾನ ಪರಿಷತ್ ಕಲಾಪದಲ್ಲಿ ಭಾರಿ ಗದ್ದಲ-ಗಲಾಟೆಗೆ ಕಾರಣವಾಯಿತು.

ಕಲಾಪ ಆರಂಭವಾದ ತಕ್ಷಣವೇ ಪ್ರತಿ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಹಕಾರಿ ಸಚಿವರಾಗಿದ್ದ ರಾಜಣ್ಣ ಅವರನ್ನು ವಜಾಗೊಳಿಸಿರುವ ಕುರಿತು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಸಹಿಯಿರುವ ಪತ್ರವನ್ನು ಓದಲು ಮುಂದಾದರು. ಇದಕ್ಕೆ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ ಪ್ರಶ್ನೋತ್ತರ ಅವಧಿ ನಂತರ ಮಾತನಾಡುವಂತೆ ನಾರಾಯಣ ಸ್ವಾಮಿ ಅವರಿಗೆ ಸೂಚಿಸಿದರು.

ಈ ವೇಳೆ ತಮ್ಮ ಮಾತು ಮು0ದುವರೆಸಿದ ನಾರಯಣ ಸ್ವಾಮಿ ಇದು ತುರ್ತು ವಿಚಾರ. ರಾಜಣ್ಣ ಅವರನ್ನು ಯಾಕೆ ವಜಾಗೊಳಿಸಲಾಗಿದೆ?” ಎಂದು ಪ್ರಶ್ನೆ ಮುಂದಿಟ್ಟರು. ಇದಕ್ಕೆ ಬೆಂಬಲವಾಗಿ ಸದಸ್ಯರಾದ ಸಿ.ಟಿ. ರವಿ, ರವಿಕುಮಾರ್ ಸೇರಿದಂತೆ ಹಲವು ಧ್ವನಿಗೂಡಿಸಿದರು.

ನಾರಾಯಣ ಸ್ವಾಮಿ ಪ್ರಶ್ನೆಗೆ ಆಡಳಿತ ಪಕ್ಷದ ನಾಯಕರು ರಾಜಣ್ಣ ಅವರ ಮೇಲೆ ಯಾವತ್ತಿನಿಂದ ಪ್ರೀತಿ ಬಂತು?” ಎಂದು ವ್ಯಂಗ್ಯವಾಡಿದರು. ಗದ್ದಲ ಹೆಚ್ಚಿದ ಹಿನ್ನೆಲೆಯಲ್ಲಿ ಸಭಾಪತಿಗಳು ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು.

ಬಳಿಕ ಕಲಾಪ ಪುನರಾರಂಭವಾದಾಗ ನಾರಾಯಣಸ್ವಾಮಿ ಮತ್ತೆ ವಿಷಯ ಪ್ರಸ್ತಾಪಿಸಿದರು. ಸಭಾಪತಿಗಳು ಪ್ರಶ್ನೋತ್ತರ ಅವಧಿ ನಂತರ ಸಭಾ ನಾಯಕರಿಂದ ಉತ್ತರ ಕೊಡಿಸಲಾಗುವುದು ಎಂದು ತಿಳಿಸಿದರು.

ಶೂನ್ಯ ವೇಳೆಯಲ್ಲಿ ಮಾತನಾಡಿದ ನಾರಾಯಣಸ್ವಾಮಿ, “ರಾಜಣ್ಣರನ್ನು ಯಾಕೆ ವಜಾಗೊಳಿಸಿದರು? ಅವರು ಭ್ರಷ್ಟಾಚಾರ ಮಾಡಿದರಾ? ಸುರ್ಜೇವಾಲಾ ಅಥವಾ ಡಿ.ಕೆ. ಶಿವಕುಮಾರ್ ಬಗ್ಗೆ ಮಾತನಾಡಿದ್ದಕ್ಕಾ? 5 ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮಾಡಬೇಕೆಂದಿರುವುದಾ? ಮತದಾನದಲ್ಲಿ ಅಕ್ರಮಗಳ ಬಗ್ಗೆ ಹೇಳಿರುವುದಾ? ಸತ್ಯ ಹೇಳಿದ್ದಕ್ಕೆ ಇದು ಶಿಕ್ಷೆಯಾ?” ಎಂದು ಪ್ರಶ್ನಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಸಭಾ ನಾಯಕ ಬೋಸರಾಜು, ಪ್ರಜಾಪ್ರಭುತ್ವದಲ್ಲಿ ಸಚಿವರನ್ನಾಗಿಸುವುದು, ವಜಾಗೊಳಿಸುವುದು ಮುಖ್ಯಮಂತ್ರಿ ನಿರ್ಧಾರ. ಕಾರಣ ತಿಳಿಸಲು ಕಡ್ಡಾಯವಿಲ್ಲ ಎಂದರು. ಈ ಉತ್ತರಕ್ಕೆ ಪ್ರತಿ ಪಕ್ಷ ಅಸಮಾಧಾನ ವ್ಯಕ್ತಪಡಿಸಿದ್ದು, ಮತ್ತೆ ಗದ್ದಲ ಉಂಟಾಯಿತು. ಪರಿಣಾಮವಾಗಿ ಸಭಾಪತಿಗಳು ಕಲಾಪವನ್ನು ಮುಂದೂಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande