ಪಿಎಂ ಜೀವನ ಜ್ಯೋತಿ ಭೀಮಾ ಯೋಜನೆ : ವಿಮಾ ಮೊತ್ತ ಪಾವತಿಸಲು ಆದೇಶ ಪ್ರಕಟ
ಕೊಪ್ಪಳ, 12 ಆಗಸ್ಟ್ (ಹಿ.ಸ.) : ಆ್ಯಂಕರ್ : ಫಿರ್ಯಾದುದಾರರಿಗೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯ ವಿಮಾ ಮೊತ್ತವನ್ನು ಪಾವತಿಸಲು ಇನ್ಸೂರೆನ್ಸ್ ಕಂಪನಿಗೆ ಆದೇಶಿಸಿ, ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ತೀರ್ಪು ಪ್ರಕಟಿಸಿದೆ. ಗ್ರಾಹಕ ಫಿರ್ಯಾದು ಸಂಖ್ಯೆ: 43/2025
ಪಿಎಂ ಜೀವನ ಜ್ಯೋತಿ ಭೀಮಾ ಯೋಜನೆ : ವಿಮಾ ಮೊತ್ತ ಪಾವತಿಸಲು ಆದೇಶ ಪ್ರಕಟ


ಕೊಪ್ಪಳ, 12 ಆಗಸ್ಟ್ (ಹಿ.ಸ.) :

ಆ್ಯಂಕರ್ : ಫಿರ್ಯಾದುದಾರರಿಗೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯ ವಿಮಾ ಮೊತ್ತವನ್ನು ಪಾವತಿಸಲು ಇನ್ಸೂರೆನ್ಸ್ ಕಂಪನಿಗೆ ಆದೇಶಿಸಿ, ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ತೀರ್ಪು ಪ್ರಕಟಿಸಿದೆ.

ಗ್ರಾಹಕ ಫಿರ್ಯಾದು ಸಂಖ್ಯೆ: 43/2025 ರಲ್ಲಿನ ಅಂತಿಮ ತೀರ್ಪಿನ ಸಾರಾಂಶದನ್ವಯ ಫಿರ್ಯಾದುದಾರರಾದ ಉಮೇಶ ತಂದೆ ಪರಸಪ್ಪ ಶಿವಪ್ಪ ಭಜಂಗರವರು, ವಾಸ ಸ್ಥಳ ಹಸಬ್ ರಸ್ತೆ, ಹಟಗಾರ ಪೇಟೆ, ಕೊಪ್ಪಳ ರವರ ತಂದೆ ಪರಸಪ್ಪ ಶಿವಪ್ಪ.ಬಿ ಇವರು ತಮ್ಮ ಜೀವಿತ ಕಾಲದಲ್ಲಿ ಎದುರುದಾರರಾದ ಸ್ಟಾರ್ ಯುನಿಯನ್ ದಾಲ್ ಇಂಚ್ ಜೀವ ವಿಮಾ ಕಂಪನಿ ಲಿಮಿಟೆಡ, ನವಿ ಮುಂಬಯಿ ಇವರಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಅಡಿಯಲ್ಲಿ ಒಂದು ವಿಮಾ ಪಾಲಿಸಿಯನ್ನು ಕಾರ್ಪಾರೇಶನ ಬ್ಯಾಂಕ್ ಮೂಲಕ ವಿಮಾ ಪಾಲಸಿ ಸಂಖ್ಯೆ:ಜೆಜೆ000002ಯನ್ನು ದಿನಾಂಕ: 24-06-2015 ರಲ್ಲಿ ರೂ. 2,00,000 ಗಳಿಗೆ ಪಾಲಿಸಿಯ ವಿಮಾ ಕಂತು ವಾರ್ಷಿಕ ರೂ.330 ನ್ನು ಪಾವತಿಸಿ ಪಾಲಸಿಯನ್ನು ಪಡೆದುಕೊಂಡಿರುತ್ತಾರೆ. ಪ್ರತಿ ವರ್ಷ ಈ ವಿಮಾ ಪಾಲಸಿಯನ್ನು ನವೀಕರಿಸಿಕೊಂಡು ಬಂದಿರುತ್ತಾರೆ ಹಾಗೂ ಕೊನೆಯ ವಿಮಾ ಕಂತು ರೂ. 330 ಗಳನ್ನು ಕ್ರಮವಾಗಿ ದಿನಾಂಕ 29-05-2021 ಮತ್ತು 28-05-2022 ರಂದು (ಮರಣದ ನಂತರ ಬ್ಯಾಂಕ್ ಖಾತೆಯಿಂದ ವಿಮಾ ಕಂತಿನ ಮೊತ್ತ ಕಡಿತ) ಪಾವತಿಸಿರುತ್ತಾರೆ. ನಂತರ ದೂರುದಾರರು ತಂದೆಯಾದ ಪಾಲಿಸಿದಾರರು ಆಕಸ್ಮಿಕವಾಗಿ ಹೃದಯಘಾತದಿಂದ ದಿನಾಂಕ: 03/05/2022 ರಂದು ಕೊಪ್ಪಳದಲ್ಲಿ ಮರಣವನ್ನು ಹೊಂದಿರುತ್ತಾರೆ.

ದೂರುದಾರರ ತಂದೆಯು ಮರಣ ಹೊಂದಿದ ನಂತರ ದೂರುದಾರರು ಎದುರುದಾರರ ಶಾಖೆಗೆ ಹೋಗಿ ಕ್ಲೇಮ್ ಫಾರಂ ಸಂಗಡ ಎಲ್ಲಾ ದಾಖಲೆಗಳನ್ನು ನೀಡಿರುತ್ತಾರೆ. ಆದರೆ ಎದುರುದಾರರು ದಿನಾಂಕ: 30/09/2022 ರಂದು ಈ ಕ್ಲೇಮನ್ನು ನೀಡಲು ಬರುವುದಿಲ್ಲವೆಂದು ದೂರುದಾರರಿಗೆ ಪತ್ರವನ್ನು ಹಾಕಿರುತ್ತಾರೆ. ಕಾರಣ ಪಾಲಿಸಿದಾರರು ಪಾಲಿಸಿ ತೆಗೆದುಕೊಳ್ಳುವಾಗ ಪಾಲಿಸಿದಾರರ ವಯಸ್ಸು ತಪ್ಪಾಗಿ ತಿಳಿಸಿರುವುದರಿಂದ ಪಾಲಿಸಿಯ ಕ್ಲೇಮ್‍ನ್ನು ತಿರಸ್ಕಾರ ಮಾಡಿ ವಿಮಾ ಮೊತ್ತವನ್ನು ನೀಡಲು ಬರುವುದಿಲ್ಲವೆಂದು ತಿಳಿಸಿರುತ್ತಾರೆ. ಪಾಲಸಿದಾರರು ಉಳಿತಾಯ ಖಾತೆ ಕಾರ್ಪಾರೇಶನ ಬ್ಯಾಂಕ್ ಮೂಲಕ ಪಾಲಸಿಯನ್ನು ಪಡೆದುಕೊಂಡಿದ್ದು, ಪಾಲಿಸಿದಾರರು ಪಾಲಿಸಿ ಮಾಡಿಸುವ ಸಂದರ್ಭದಲ್ಲಿ ತನ್ನ ವಯಸ್ಸನ್ನು ಎದುರುದಾರರ ಶಾಖೆಗೆ ತಪ್ಪಾಗಿ ನೀಡಿರುವುದಿಲ್ಲ. ಎದುರುದಾರ ವಿಮಾ ಕಂಪನಿಯವರು ಕ್ಲೇಮಿನ ಹಣವನ್ನು ನೀಡುವುದರಿಂದ ತಪ್ಪಿಸಿಕೊಳ್ಳುವುದರ ಸಲುವಾಗಿ ಪಾಲಿಸಿಯ ಕ್ಲೇಮ್‍ನ್ನು ತಿರಸ್ಕಾರ ಮಾಡಿ ಸೇವಾ ನ್ಯೂನ್ಯತೆ ಎಸಗಿರುತ್ತಾರೆ. ಇದರಿಂದ ದೂರುದಾರರು ದೈಹಿಕ ಮತ್ತು ಮಾನಸಿಕವಾಗಿ ಯಾತನೆ ಅನುಭವಿಸಿರುತ್ತಾರೆ. ಇದರಿಂದ ಬೇಸತ್ತು ದೂರುದಾರರು ಎದುರುದಾರರಿಂದ ಪರಿಹಾರ ಕೋರಿ ಈ ದೂರನ್ನು ದಾಖಲಿಸಿರುತ್ತಾರೆ.

ಈ ದೂರನ್ನು ದಾಖಲಿಸಿಕೊಂಡ ನಂತರ ಕೊಪ್ಪಳ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಎದುರುದಾರರಿಗೆ ನೋಟಿಸನ್ನು ನೀಡಿದ್ದು, ಈ ನೋಟಿಸ್ ಎದುರುದಾರರಿಗೆ ಖುದ್ದು ಜಾರಿಯಾಗಿರುತ್ತದೆ. ಎದುರುದರರು ಜಿಲ್ಲಾ ಆಯೋಗಕ್ಕೆ ವಾಯಿದೆ ದಿನದಂದು ಗೈರು ಹಾಜರಾಗಿದ್ದು, ತಮ್ಮ ತಕರಾರನ್ನು ಸಲ್ಲಿಸಲು ವಿಫಲರಾಗಿರುತ್ತಾರೆ ಹಾಗೂ ಸಾಕ್ಷಿ ಹೇಳಿಕೆ ಅಥವಾ ಲಿಖಿತ ಅಥವಾ ಮೌಖಿಕ ವಾದ ಮಂಡನೆಯನ್ನು ಸಹ ಮಾಡಿರುವುದಿಲ್ಲ.

ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಜಿ.ಇ.ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯರಾದ ರಾಜು ಎನ್. ಮೇತ್ರಿ ರವರು ಈ ವಾದವನ್ನು ಆಲಿಸಿ, ಎದುರುದಾರರು ದೂರುದಾರರ ತಂದೆ ಪಾಲಸಿದಾರರಾದ ಪರಸಪ್ಪ ಶಿವಪ್ಪ.ಬಿ ರವರು ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಅಡಿಯಲ್ಲಿ ಒಂದು ವಿಮಾ ಪಾಲಿಸಿಯನ್ನು ಕಾರ್ಪಾರೇಶನ ಬ್ಯಾಂಕ್ ಮೂಲಕ ದಿನಾಂಕ 24-06-2015 ರಂದು ಪಡೆದುಕೊಂಡಿದ್ದು, ಈ ವಿಮಾ ಪಾಲಸಿಯನ್ನು ಪ್ರತಿ ವರ್ಷ ವಿಮಾ ಕಂತು ರೂ. 330 ನ್ನು ಪಾವತಿಸಿ ನವೀಕರಿಸಿಕೊಂಡು ಬಂದಿರುತ್ತಾರೆ. ಪಾಲಸಿದಾರನು ಮೃತ ಹೊಂದುವ ಸಮಯದಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಅಡಿಯಲ್ಲಿ ವಿಮಾ ಪಾಲಿಸಿಯು ಚಾಲ್ತಿಯಲ್ಲಿದ್ದು ಎದುರುದಾರರು ವಿಮಾ ಮೊತ್ತ ರೂ. 2,00,000 ಪಾವತಿಸದೇ ದೂರುದಾರರ ಡೆತ್ ಕ್ಲೇಮ್‍ನ್ನು ನಿರಾಕರಸಿ, ಸೇವಾ ನ್ಯೂನ್ಯತೆ ಎಸಗಿರುವುದನ್ನು ದಾಖಲಾತಿಗಳ ಮೂಲಕ ಸಾಬೀತಾಗಿದೆ. ಆದ್ದರಿಂದ ಎದುರುದಾರರು ದೂರುದಾರರ ತಂದೆಯವರು ಪಡೆದುಕೊಂಡ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಅಡಿಯಲ್ಲಿ ಪಡೆದ ಪಾಲಸಿ ಸಂಖ್ಯೆ ಜೆಜೆ000002 ರಲ್ಲಿನ ವಿಮಾ ಮೊತ್ತ ರೂ. 2,00,000 ಗಳನ್ನು ದೂರುದಾರರಿಗೆ ಪಾವತಿಸುವಂತೆ ಹಾಗೂ ಈ ವಿಮಾ ಮೊತ್ತಕ್ಕೆ ದೂರಿನ ದಿನಾಂಕದಿಂದ ಪಾವತಿಯಾಗುವವರೆಗೆ ವಾರ್ಷಿಕ ಶೇ.6ರ ಬಡ್ಡಿ ಸಮೇತ ನೀಡುವಂತೆ ಹಾಗೂ ಮಾನಸಿಕ ಯಾತನೆಗಾಗಿ ರೂ. 5,000 ಹಾಗೂ ದೂರಿನ ಖರ್ಚು ರೂ. 5,000 ಗಳನ್ನು ಪಾವತಿಸಲು ಎದುರುದಾರರಿಗೆ ಆದೇಶಿಸಲಾಗಿದೆ. ಈ ಪರಿಹಾರದ ಮೊತ್ತವನ್ನು ಆದೇಶದ ದಿನಾಂಕದಿಂದ 45 ದಿನಗಳ ಒಳಗಾಗಿ ಎದುರುದಾರರು ಫಿರ್ಯಾದುದಾರರಿಗೆ ಪಾವತಿಸುವಂತೆ ಆದೇಶವನ್ನು ನೀಡಿರುತ್ತಾರೆ ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ಆಯೋಗದ ಸಹಾಯಕ ರಿಜಿಸ್ಟ್ರಾರ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande