ಗದಗ, 12 ಆಗಸ್ಟ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಯಕ್ಲಾಸಪೂರ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ರೈತರ ಹೆಸರು ಬೆಳೆ ಜಮೀನುಗಳು ಸಂಪೂರ್ಣ ಹಾನಿಗೊಳಗಾಗಿವೆ. ಗ್ರಾಮದ ನೂರಾರು ರೈತರು ನೂರಾರು ಎಕರೆ ಜಮೀನಿನಲ್ಲಿ ಹೆಸರು ಬಿತ್ತನೆ ಮಾಡಿದ್ದು, ಪ್ರತಿ ಎಕರೆಗೆ 30 ಸಾವಿರ ರೂಪಾಯಿ ವೆಚ್ಚ ಮಾಡಿದ್ದಾರೆ.
ಆದರೆ, ಮಳೆ ಅಬ್ಬರಕ್ಕೆ ಜಮೀನಿನಲ್ಲಿದ್ದ ಹೆಸರು ಬೆಳೆ ಸಂಪೂರ್ಣ ನೆಲಸಮವಾಗಿದೆ. ಕಟಾವು ಹಂತಕ್ಕೆ ಬಂದಿದ್ದ ಬೆಳೆ ನೆಲಕ್ಕುರುಳಿರುವ ದೃಶ್ಯ ಕಂಡು ರೈತರು ಕಂಗಾಲಾಗಿದ್ದು, ಶ್ರಮಿಸಿ ಬೆಳೆದ ಬೆಳೆಯಿಂದ ಒಂದು ಕಾಸು ಕೂಡ ಕೈಗೆ ಸಿಗದ ಸ್ಥಿತಿ ಎದುರಾಗಿದೆ. “ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ” ಎಂಬಂತಾಗಿದೆ.
ರೈತರು ಕೃಷಿ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿ, ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ. ತಾತ್ಕಾಲಿಕ ನೆರವು ದೊರಕದಿದ್ದರೆ ಸಾಲದ ಹೊರೆ, ಜೀವನೋಪಾಯದ ಸಂಕಷ್ಟ ಮತ್ತಷ್ಟು ಗಂಭೀರವಾಗಲಿದೆ ಎಂಬ ಆತಂಕ ರೈತರಲ್ಲಿ ವ್ಯಕ್ತವಾಗಿದೆ.
ಹಾನಿಯ ಪ್ರಮಾಣವನ್ನು ಗಮನಿಸಿ, ಸರ್ಕಾರ ತುರ್ತು ಕ್ರಮ ಕೈಗೊಂಡು ರೈತರ ಬದುಕುಳಿಸಲು ನೆರವು ನೀಡಬೇಕು ಎಂಬುದು ಗ್ರಾಮದ ಪ್ರತಿಯೊಬ್ಬ ರೈತನ ಧ್ವನಿಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP