ರಾಯಚೂರು, 12 ಆಗಸ್ಟ್ (ಹಿ.ಸ.) :
ಆ್ಯಂಕರ್ : ಕುಟುಂಬದ ಜವಾಬ್ದಾರಿ, ಹೆರಿಗೆ, ಮಕ್ಕಳ ಲಾಲನೆ-ಪಾಲನೆ, ವೈಯಕ್ತಿಕ ಆರೋಗ್ಯ ನಿರ್ವಹಣೆಯನ್ನು ನಿಭಾಯಿಸಲು ಮಹಿಳೆಗೆ ಮಾನಸಿಕ ಸದೃಢತೆ ಮುಖ್ಯವಾಗಿದೆ. ಬಾಲ್ಯದಲ್ಲಿಯೇ ಮದುವೆ ಮಾಡುವುದರಿಂದ ಇವೆಲ್ಲಕ್ಕೆ ಅಡೆತಡೆಯಾಗಲಿದೆ. ಆದ್ದರಿಂದ ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ ಕಾಂದೂ ಅವರು ಹೇಳಿದ್ದಾರೆ.
ಆಗಸ್ಟ್ 12ರ ಮಂಗಳವಾರ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಆರೋಗ್ಯ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಲ್ಯವಿವಾಹದಿಂದ ಮಕ್ಕಳಿಗೆ ಮೇಲಿಂದ ಮೇಲೆ ಕಾಯಿಲೆಗಳ ಬರುವಿಕೆ, ಅಕಾಲಿಕ ಗರ್ಭಪಾತ, ಕೊರಳಿಗೆ ಹೊಕ್ಕಳು ಬಳ್ಳಿ ಸುತ್ತಿ ಮಗು ಜನಿಸುವುದು, ಶಿಶು ಮರಣ, ತಾಯಿ ಮರಣ, ಮುಂತಾದವುಗಳ ಜೊತೆಗೆ ಕಾನೂನಾತ್ಮಕವಾಗಿ ಶಿಕ್ಷೆ ಇರುವ ಕುರಿತು ಸಾರ್ವಜನಿಕರಿಗೆ ತಿಳಿಹೇಳಬೇಕು. ರಾಯಚೂರು ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಶೂನ್ಯಕ್ಕಿಳಿಯಬೇಕು ಎಂದು ಸೂಚನೆ ನೀಡಿದರು.
ಲಸಿಕೆಗಳನ್ನು ತಪ್ಪದೆ ಹಾಕಿಸಿ: ಹೆರಿಗೆ ನಂತರದಲ್ಲಿ ನವಜಾತ ಶಿಶುವಿಗೆ 12 ಮಾರಕ ರೋಗಗಳ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗುವ ಲಸಿಕೆಗಳನ್ನು ತೋಟದ ಮನೆಗಳು, ದೊಡ್ಡಿ, ಹಟ್ಟಿ, ತಾಂಡಾ, ಕ್ಯಾಂಪ್‍ಗಳಲ್ಲಿ ತಪ್ಪದೇ ನೀಡಬೇಕು. ಯಾರಾದರೂ ತಪ್ಪು ನಂಬಿಕೆ ಹೊಂದಿದ ಪಾಲಕರು ಇದ್ದರೆ ಅವರಿಗೆ ಸರಿಯಾಗಿ ಮನವರಿಕೆ ಮಾಡಿ ಲಸಿಕೆ ಹಾಕಿಸಲು ಸೂಚಿಸಿದರು.
ಕಡಿಮೆ ತೂಕದ ಮಕ್ಕಳನ್ನು ಅಭಿಯಾನದ ರೂಪದಲ್ಲಿ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಜಂಟಿಯಾಗಿ ಗುರುತಿಸಿ ವೈದ್ಯಕೀಯ ಚಿಕಿತ್ಸೆ ಹಾಗೂ ಪೌಷ್ಟಿಕ ಆಹಾರ ಒದಗಿಸುವ ಹಾಗೂ ಅಪೌಷ್ಟಿಕ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಿಇಒ ಅವರು ಸೂಚಿಸಿದರು.
ಹೆರಿಗೆ ನಂತರದಲ್ಲಿ ಜನನದ ಮಧ್ಯ ಅಂತರಕ್ಕಾಗಿ ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನ ಪಿಪಿಐಯುಸಿಡಿ ತಕ್ಷಣವೇ ಅಳವಡಿಕೆಗೆ ಒತ್ತು ನೀಡಲು ತಿಳಿಸಿದರು. ಅಲ್ಲದೆ ಪುರುಷರಿಗೆ ಎನ್‍ಎಸ್‍ವಿ ಶಸ್ತ್ರಚಿಕಿತ್ಸೆ ಬಗ್ಗೆ ಹೆಚ್ಚಿನ ಜಾಗೃತಿ ನೀಡಿ ಹಾಗೂ ಶಸ್ತ್ರಚಿಕಿತ್ಸಾ ಶಿಬಿರಗಳನ್ನು ಎಲ್ಲ ತಾಲೂಕುಗಳಲ್ಲಿ ಮಾಡಿಸಲು ತಿಳಿಸಿದರು.
ಆಯುಷ್ಮನ್ ಆರೋಗ್ಯ ಶಿಬಿರ: ಪ್ರತಿ ಮಂಗಳವಾರ ಆಯುಷ್ಮನ ಆರೋಗ್ಯ ಶಿಬಿರಗಳನ್ನು ತಪ್ಪದೆ ಹಮ್ಮಿಕೊಂಡು ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಇತರೆ ಪರೀಕ್ಷೆ ಹಾಗೂ ಅಗತ್ಯ ಚಿಕಿತ್ಸೆ ನೀಡಬೇಕು.
ಕ್ಷಯರೋಗ ಪತ್ತೆಗೆ ಇರುವ ಕಫ ಪರೀಕ್ಷೆ, ಟ್ರುನಾಟ್ ಹಾಗೂ ಸಿಬಿನಾಟ್ ಕೇಂದ್ರಗಳಲ್ಲಿ ಹೆಚ್ಚಿನ ಪರೀಕ್ಷೆ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಅಸಾಂಕ್ರಾಮಿಕ ರೋಗ ತಡೆ: ಹಾವು ಕಡಿತ, ನಾಯಿ ಕಡಿತ ಕುರಿತು ಹೆಚ್ಚಿನ ಜಾಗೃತಿ ನೀಡುವ ಜೊತೆಗೆ ಲಸಿಕೆಗಳನ್ನು ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ದಾಸ್ತಾನು ಮಾಡಬೇಕು. ಡೆಂಗ್ಯು ರೋಗ ನಿಯಂತ್ರಣಕ್ಕಾಗಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕು. ಹಾಗೂ ಮಲೇರಿಯಾ, ಜೆಇ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಬೇಕು. ರಕ್ತದಾನದ ಮಹತ್ವ ಕುರಿತು ತಿಳಿಸಲು ಮತ್ತು ಜಿಲ್ಲೆಯಲ್ಲಿ ರಕ್ತ ಕೊರತೆಯಾಗದಿರಲು ಕ್ರಿಯಾ ಯೋಜನೆ ಹಾಕಿಕೊಂಡು ಸತತವಾಗಿ ರಕ್ತದಾನ ಶಿಬಿರ ಏರ್ಪಡಿಸಬೇಕೆಂದರು.
ಈ ವೇಳೆ ಸಿಇಓ ಅವರು ಡೆಂಗ್ಯು ರೋಗ ತಡೆಗೆ ಜಾಗೃತಿ ನೀಡಲು ಭಿತ್ತಿ ಪತ್ರವನ್ನು ಬಿಡುಗಡೆ ಮಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರ ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯಶಂಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನವೀನ್‍ಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ, ಸಮಿತಿ ಸದಸ್ಯ ಕಾರ್ಯದರ್ಶಿಗಳು ಆರ್.ಸಿ.ಹೆಚ್ ಅಧಿಕಾರಿ ಡಾ.ನಂದಿತಾ ಎಮ್ ಎನ್, ಡಿ.ಎಸ್.ಓ ಡಾ.ಗಣೇಶ್, ಡಿ.ಎಫ್.ಡ.ಬ್ಲ್ಯುಓ ಡಾ.ಶಿವಕುಮಾರ, ಡಿ.ಟಿ.ಓ ಡಾ.ಮಹಮ್ಮದ್ ಶಾಕೀರ್, ಡಿ.ಎಮ್.ಓ ಡಾ.ಚಂದ್ರಶೇಖರಯ್ಯ ಸ್ವಾಮಿ, ಡಿ.ಎಲ್.ಓ ಡಾ.ಯಶೋದಾ ಸೇರಿದಂತೆ ತಾಲೂಕು ಆರೋಗ್ಯಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಡಿಹೆಚ್‍ಇಓ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್