ನವದೆಹಲಿ, 12 ಆಗಸ್ಟ್ (ಹಿ.ಸ.) :
ಆ್ಯಂಕರ್ : ಹೈಕಮಾಂಡ್ ನಿರ್ದೇಶನ ಮೇರೆಗೆ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಲಾಗಿದೆ. ಕೆಲವು ಸಂದರ್ಭಗಳಲ್ಲಿ ಪಕ್ಷದ ಶಿಸ್ತನ್ನು ಮೀರಿ ನಡೆದರೆ ಇಂತಹ ಕ್ರಮಗಳು ಅವಶ್ಯವಾಗುತ್ತವೆ. ಇದು ದುರದೃಷ್ಟಕರ, ಹೀಗೆ ಆಗಬಾರದಿತ್ತು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.
ದೆಹಲಿಯಲ್ಲಿ ಮಾತನಾಡಿದ ಅವರು, ರಾಜಣ್ಣ ಅವರ ರಾಜ್ಯಕ್ಕೆ ವಿಶೇಷ ಕೊಡುಗೆ ಇದೆ. ಅವರ ತಪ್ಪುಗಳ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಆದರೆ ರಾಜಣ್ಣನಿಗೆ ಅನ್ಯಾಯವಾಗಿದೆ ಎಂದು ಬಿಜೆಪಿ ನಾಯಕರು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಬಿಜೆಪಿ ಸತ್ಯಹರಿಶ್ಚಂದ್ರರು. ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದಾಗ ಎಲ್ಲಿ ಹೋಗಿದ್ದರು? ಜಗದೀಶ್ ಶೆಟ್ಟರ್ ಮತ್ತು ಬಸನಗೌಡ ಪಾಟೀಲ್ ಯತ್ನಾಳರನ್ನು ಆರು ವರ್ಷ ವಜಾ ಮಾಡಿದಾಗ ಈ ಸತ್ಯವಂತರು ಎಲ್ಲಿ ಇದ್ದರು? ಎಂದು ಟೀಕಿಸಿದರು.
ರಾಜೀನಾಮೆ ಹಿಂದೆ ಷಡ್ಯಂತ್ರ ಇದೆ ಎಂದು ರಾಜಣ್ಣ ಹೇಳಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ರಾಜಕೀಯದಲ್ಲಿ ಷಡ್ಯಂತ್ರ ಸಾಮಾನ್ಯ. ಅದನ್ನು ಎದುರಿಸಬೇಕು. ಅವರು ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿ ಅಲ್ಲ, ನಿಷ್ಠುರ ವ್ಯಕ್ತಿ, ಅವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುತ್ತದೆ. ಕೆಲವು ವಿಚಾರಗಳಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಮುಂದೆಯೂ ಹೀಗಾಗಬಾರದು ಎಂಬುದಕ್ಕೆ ಇದು ಎಚ್ಚರಿಕೆ ಗಂಟೆ. ಇದು ಎಲ್ಲ ಶಾಸಕರಿಗೂ ಸಚಿವರಿಗೂ ಅನ್ವಯಿಸುತ್ತದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa