ಕೋಲಾರ,೧೧ ಆಗಸ್ಟ್ (ಹಿ. ಸ.) :
ಆ್ಯಂಕರ್ : ನಿರ್ಮಿತಿ ಕೇಂದ್ರದ ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯಡಿಯಲ್ಲಿ ಬಳಕೆಯಾಗದೆ ಉಳಿದ ೩೦ ಲಕ್ಷ ರೂ., ಅನುದಾನದಲ್ಲಿ ಸರ್ಕಾರಿ ಶಾಲಾ ೩ ಕೊಠಡಿಗಳ ನಿರ್ಮಾಣಕ್ಕೆ ಸಮರ್ಪಕವಾಗಿ ಬಳಸಿಕೊಂಡಿರುವುದು ಶ್ಲಾಘನೀಯವೆಂದು ಶಾಸಕಿ ಎಂ.ರೂಪಕಲಾ ಅಭಿನಂದನೆ ಸಲ್ಲಿಸಿದರು.
ಬೇತಮಂಗಲ ಪಟ್ಟಣದ ಬಳಿಯ ಕ್ಯಾಸಂಬಳ್ಳಿ ಗ್ರಾಪಂಯ ಬಳುವನಹಳ್ಳಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳು, ಅಡುಗೆ ಕೋಣೆ, ಶೌಚಾಲಯ, ಕಾಂಪೌಂಡ್, ಸಿಸಿ ರಸ್ತೆ ಸೇರಿ ಒಟ್ಟು ೬೧ ಲಕ್ಷ ರೂ., ಕಾಮಗಾರಿಗಳನ್ನು ಲೋಕಾರ್ಪಣೆ ಗೊಳಿಸಿ ಅವರು ಮಾತನಾಡಿದರು.
ಹಳೆಯ ಶಾಲೆಯ ಕಟ್ಟಡವು ಶಿಥಲವಾಗಿದ್ದು, ಮಕ್ಕಳ ದೃಷ್ಠಿಯಿಂದ ಸರ್ಕಾರಿ ಜಾಗವನ್ನು ಗುರುತಿಸಿ, ಅರ್ಧ ಎಕರೆ ಜಮೀನಿನಲ್ಲಿ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಗ್ರಾಪಂ ಅಧ್ಯಕ್ಷರು ಮುತುವರ್ಜಿ ವಹಿಸಿ ನೂತನ ಕೊಠಡಿಗಳನ್ನು ನಿರ್ಮಿಸಿ ಜತೆಗೆ ಸರ್ಕಾರದ ಅನುದಾನವಲ್ಲದೆ, ನರೇಗಾ ಅಡಿಯಲ್ಲಿ ವಿವಿಧ ಮೂಲಸೌಕರ್ಯ ಕಾಮಗಾರಿಗಳನ್ನು ನಿರ್ಮಿಸಿರುವುದು ನಿಜಕ್ಕೂ ಅಭಿನಂದಿಸುವ ಕಾರ್ಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಗಳು ದೇವಾಲಯದಂತೆ ಪವಿತ್ರವಾದದ್ದು, ಶಾಲೆಗಳು ಜ್ಞಾನ ದೇಗುಲವಾಗಿದ್ದು, ಚಿಕ್ಕಮಕ್ಕಳ ಭವಿಷ್ಯ ರೂಪಿಸುವ ಶಾಲೆಗಳಾಗಿದ್ದು, ಮೊದಲು ಗ್ರಾಮಗಳಲ್ಲಿ ಇಂತಹ ಕೆಲಸಗಳು ಮೊದಲು ಆರಂಭವಾಗಬೇಕೆಂದು ಹೇಳಿದರು.
ಗ್ರಾಪಂ ಅಧ್ಯಕ್ಷರಾದವರು ಲಾಭ ಬರುವ ಕಾಮಗಾರಿಗಳನ್ನು ನಡೆಸಿ ಹಣ ಗಳಿಸಬಹುದಾಗಿತ್ತು, ಆದರೆ ಸ್ವ ಗ್ರಾಮದ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಗುಣಮಟ್ಟದ ಕಾಮಗಾರಿ ನಡೆಸಿದ್ದಾರೆ ಎಂದರು.
ದೂರುಗಳ ಸರಮಾಲೆ: ಗ್ರಾಪಂ ಅಧ್ಯಕ್ಷರ ಮೇಲೆ ಪ್ರತಿನಿತ್ಯ ಸುಳ್ಳು ಆರೋಪಗಳು, ದೂರುಗಳು ಜಿಪಂ ಸಿಇಒ ವರೆಗೂ ಹೋಗಿತ್ತು, ಆದರೆ ಅವರು ಕೆಲಸಗಳ ಮೂಲಕ ಉತ್ತರ ನೀಡಿದ್ದಾರೆ. ನನಗೆ ಇಂದು ಅಧಿವೇಶನ ಇದ್ದರೂ, ಸರ್ಕಾರಿ ಶಾಲಾ ಉದ್ಘಾಟನೆಗೆ ಮಕ್ಕಳ ಭವಿಷ್ಯಕ್ಕಾಗಿ, ಅಧ್ಯಕ್ಷರ ಕಾಳಜಿಯಿಂದ ಹಾಜರಾತಿ ಹಾಕಿ, ಸದನ ಆರಂಭಕ್ಕೆ ವಿಳಂಬವಾದ ಹಿನ್ನಲೆ ತಕ್ಷಣ ಬಂದಿದ್ದೇನೆ ಎಂದರು.
ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆಸಿ ರೆಡ್ಡಿ ಹುಟ್ಟಿದ ಪವಿತ್ರವಾದ ಕ್ಯಾಸಂಬಳ್ಳಿ ಗ್ರಾಮವು ಇಡೀ ದೇಶದಲ್ಲಿ ಹೆಸರುವಾಸಿಗೆ ಕಾರಣರಾಗಿದ್ದಾರೆ. ಅವರಂತೆ ಮಕ್ಕಳು ವಿವಿಧ ಹುದ್ದೆಗಳನ್ನು ಅಲಂಕರಿಸಿ ದೇಶಕ್ಕೆ ಕೀರ್ತಿ ತರುವಂತಾಗಲಿ ಈ ಭಾಗದ ಸುತ್ತಮುತ್ತರಲಿನ ಹಳ್ಳಿಗಳ ಜನರು ಮಕ್ಕಳು ಶಾಲೆಗೆ ದಾಖಲಿಸು ಶಿಕ್ಷಕರು ಪಣತೋಡಲು ಕರೆ ನೀಡಿದರು.
ಬಳುವನಹಳ್ಳಿ ಗ್ರಾಮಸ್ಥರ ಮನವಿ: ಗ್ರಾಮದಲ್ಲಿ ಅಂಬೇಡ್ಕರ್ ಭವನ, ಹಾಲಿನ ಡೇರಿ, ಸಿಸಿ ರಸ್ತೆ, ಅಂಗನವಾಡಿ, ಐ ಮಾಸ್ಟ್ ದೀಪ ಸೇರಿದಂತೆ ಹಲವು ಯೋಜನೆಗಳಿಗೆ ಅನುದಾನ ದೊರಕಿಸಲು ಮನವಿ ಸಲ್ಲಿಸಿದರು. ಶಾಸಕರು ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಸುನೀತಾ ಆನಂದರೆಡ್ಡಿ, ಪಿಡಿಒ ರಷ್ಮಿ, ಕಾರ್ಯದರ್ಶಿ ವೆಂಕಟೇಶ್, ಜಿಪಂ ಮಾಜಿ ಸದಸ್ಯ ಅ.ಮು ಲಕ್ಷ್ಮೀನಾರಾಯಣ್, ಕೆಡಿಎ ಮಾಜಿ ಅಧ್ಯಕ್ಷ ವೆಂಕಟಕೃಷ್ಣಾರೆಡ್ಡಿ, ಮುಖಂಡರಾದ ಪ್ರಕಾಶ್ ರೆಡ್ಡಿ, ಗಂಗಿರೆಡ್ಡಿ, ರಾಧಕೃಷ್ಣಾರೆಡ್ಡಿ, ಸುರೇಂದ್ರಗೌಡ, ಎನ್ಟಿಆರ್, ವಕೀಲ ಪದ್ಮನಾಭರೆಡ್ಡಿ, ಸ್ಕೂಲ್ ವೆಂಕಟೇಶಪ್ಪ, ವಿನೂ ಕಾರ್ತಿಕ್, ವೇಣುಗೋಪಾಲ್, ಸದಾನಂದರೆಡ್ಡಿ, ಆರ್ಐ ಮಂಜುನಾಥ್, ಗಂಗಪ್ಪ, ಸತೀಶ್, ಹರ್ಷರೆಡ್ಡಿ, ರಾಜೇಂದ್ರರೆಡ್ಡಿ, ಅಪ್ಪಿ ಹಾಗೂ ಶಿಕ್ಷಕರು, ಗ್ರಾಮಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಚಿತ್ರ : ಕೆಜಿಎಫ್ ತಾಲ್ಲುಕಿನ ಬೇತಮಂಗಲ ಬಳಿಯ ಕ್ಯಾಸಂಬಳ್ಳಿ ಗ್ರಾಪಂನ ಬಳುವನಹಳ್ಳಿ ಸರ್ಕಾರಿ ಶಾಲಾ ಕೊಠಡಿ ಮತ್ತು ಇತರೆ ಕಾಮಗಾರಿಗಳಿಗೆ ಶಾಸಕಿ ಎಂ.ರೂಪಕಲಾ ಲೋಕಾರ್ಪಣೆಗೊಳಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್