ನವದೆಹಲಿ, 11 ಆಗಸ್ಟ್ (ಹಿ.ಸ.) :
ಆ್ಯಂಕರ್ : ತಿರುವನಂತಪುರಂನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ (ಸಂಖ್ಯೆ AI2455) ಭಾನುವಾರ ರಾತ್ರಿ ತಾಂತ್ರಿಕ ದೋಷದಿಂದ ಚೆನ್ನೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ರಾತ್ರಿ 8 ಗಂಟೆ ಸುಮಾರಿಗೆ ತಿರುವನಂತಪುರಂನಿಂದ ಹಾರಾಟ ಆರಂಭಿಸಿದ ವಿಮಾನ, ಕೆಟ್ಟ ಹವಾಮಾನದಲ್ಲಿ ತಾಂತ್ರಿಕ ಸಮಸ್ಯೆಯ ಅನುಮಾನ ಉಂಟಾಗುತ್ತಿದ್ದಂತೆ ಸಿಬ್ಬಂದಿ ವಿಮಾನವನ್ನು ಚೆನ್ನೈಗೆ ತಿರುಗಿಸಿದರು. ರಾತ್ರಿ 10.35ರ ವೇಳೆಗೆ ವಿಮಾನ ಸುರಕ್ಷಿತವಾಗಿ ಇಳಿದಿದೆ.
ವಿಮಾನದಲ್ಲಿ ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಲವಾರು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಸಿಬ್ಬಂದಿಯ ತಕ್ಷಣದ ಎಚ್ಚರಿಕೆಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಘಟನೆಯ ಕುರಿತು ವೇಣುಗೋಪಾಲ್ ಎಕ್ಸನಲ್ಲಿ ಮಾಹಿತಿ ಹಂಚಿಕೊಂಡಿದ್ದು, “ವಿಮಾನ ಪ್ರಯಾಣಿಕರ ಸುರಕ್ಷತೆ ಪ್ರಥಮ ಆದ್ಯತೆ ಆಗಬೇಕು. ಡಿಜಿಸಿಎ ಈ ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು” ಎಂದು ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa