ವಿಜಯಪುರ, 01 ಆಗಸ್ಟ್ (ಹಿ.ಸ.) :
ಆ್ಯಂಕರ್ : ಪತ್ರಿಕಾ ಮಾಧ್ಯಮ ಇಂದು ವ್ಯಾಪಾರ ವ್ಯವಸ್ಥೆಯಲ್ಲಿ ಬಂಡವಾಳ ಶಾಹಿ ಕಪಿಮುಷ್ಟಿಯಲ್ಲಿ ಸಿಲುಕಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಹೇಳಿದರು.
ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ, ಹಿರಿಯ ಪತ್ರಕರ್ತರಿಗೆ ಸನ್ಮಾನ ಪ್ರತಿಭಾ ಪುರಸ್ಕಾರ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತದ ದಿನಮಾನಗಳಲ್ಲಿ ಪ್ರಕಟವಾಗುವ ಸುದ್ದಿಗಳ ಬಗ್ಗೆ ಪರಾಮರ್ಶೆ ಮಾಡಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ ಎಂದರು.
ಪತ್ರಿಕಾರಂಗ ದೃಶ್ಯ ಮಾಧ್ಯಮದ ಬಂದ ನಂತರ ಬದಲಾವಣೆಗಳನ್ನು ಕಂಡಿದೆ. ಪ್ರಸ್ತುತ ಡಿಜಿಟಲ್ ಯುಗದಿಂದ ಪ್ರತಿಕ್ಷಣ ಅಂಗೈಯಲ್ಲಿ ಸುದ್ದಿ ಪ್ರಸಾರ ಆಗುತ್ತಿದೆ. ವಿಪರ್ಯಾಸವೆಂದರೆ ಪತ್ರಿಕೆಗಳು ಇಂದು ಡಿಜಿಟಲ್ ಯುಗದಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಅದರಲ್ಲೂ ಮಾಧ್ಯಮ ವ್ಯಾಪಾರ ವ್ಯವಸ್ಥೆಯಲ್ಲಿ ಬಂಡವಾಳ ಶಾಹಿ ಹಿಡಿತಕ್ಕೆ ಸಿಲುಕಿ ಗೌನವಾಗಿದೆ. ಸರ್ಕಾರ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್, ಸಂಜೀವಿನಿ ಹಾಗೂ ನಿವೃತ್ತ ಪತ್ರಕರ್ತರಿಗೆ ಪಿಂಚಣಿಯ ಕಠಿಣ ನಿಯಮಾವಳಿ ಸರಳಿಕರಣವಾಗಬೇಕಿದೆ ಎಂದರು.
ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಅವರು ವೇಗವಾಗಿರುವ ಸೋಶಿಯಲ್ ಮೀಡಿಯಾದಿಂದ ಪತ್ರಿಕಾರಂಗದಲ್ಲಿ ಬದಲಾವಣೆ ಆಗಿದೆ. ವೇಗದ ಭರಾಟೆಯಲ್ಲಿ ಸುದ್ದಿ ಸತ್ಯಾಸತ್ಯತೆ ಮರೆಮಾಚುವ ಕಾರ್ಯಾ ಆಗಬಾರದು. ಸತ್ಯ, ನ್ಯಾಯದ ಅಡಿಯಲ್ಲಿ ಮಾಹಿತಿ ಜನರಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ ಪ್ರಜಾಪ್ರಭುತ್ವ ಮೌಲ್ಯದವನ್ನು ಎತ್ತಿ ಹಿಡಿಯುವಲ್ಲಿ ಪತ್ರಿಕಾರಂಗದ ಕಾರ್ಯ ಅಗಾಧವಾಗಿದ್ದು, ಪತ್ರಕರ್ತರು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ದ್ವನಿ ಇಲ್ಲದವರಿಗೆ ಪತ್ರಕರ್ತರು ಧ್ವನಿಯಾಗಿರುವುದು ಪ್ರಶಂಸನೀಯವಾದುದು. ಇಂದಿನ ಡಿಜಿಟಲ್ ಯುಗದಲ್ಲಿ ಸುಳ್ಳು ಸುದ್ದಿಗಳು ಬಿತ್ತರ ಆಗುತ್ತಿವೆ. ಆ ನಿಟ್ಟಿನಲ್ಲಿ ಸತ್ಯಾಸತ್ಯತೆ ಪರಿಶೀಲಿಸಿ, ವರದಿ ಮಾಡಲು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾತನಾಡಿ, ಅವಸರದ ಸುದ್ದಿ ಪ್ರಸಾರ ಮಾಡದೇ ಪತ್ರಕರ್ತರು ಸರಿಯಾದ ಮಾಹಿತಿಯನ್ನು ಬಿತ್ತರಿಸಬೇಕು. ಜಿಲ್ಲೆಯ ಪತ್ರಕರ್ತರು ಮಾಹಿತಿ ಪಡೆದು ಸುದ್ದಿ ಪ್ರಸಾರದ ಕಾರ್ಯಮಾಡುತ್ತಿರುವುದು ಕಾರ್ಯವನ್ನು ಶ್ಲಾಘಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದಲ್ಲಿ ಎಲ್ಲರೂ ಸಮಾನರು. ಮಾಧ್ಯಮ ಮುಂದೆ ಎಲ್ಲರೂ ಒಂದೇ. ಹೊಸ ಹೊಸ ಸಮಸ್ಯೆಗಳನ್ನು ಪತ್ರಿಕಾರಂಗ ಎದುರುಸುತ್ತಿದೆ. ವೇಗವಾಗಿ ಮಾಧ್ಯಮ ಬೆಳೆಯುತ್ತಿದೆ. ಪೆÇಲೀಸರ ಜನಜಾಗೃತಿ ಕಾರ್ಯಕ್ಕೆ ಸಹಕಾರ ನೀಡಿದನ್ನು ಸ್ಮರಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕಾರಂಗವು ಹಿಂದಿನಿಂದಲೂ ಗ್ರಾಮೀಣ ಭಾಗದ ಜ್ವಲಂತ ಸಮಸ್ಯೆಗಳ ತಾರ್ಕಿಕ ಅಂತ್ಯಕ್ಕೆ ಪರಿಹಾರ ದೊರಕಲು ಸಹಕಾರಿಯಾಗಿದೆ ಎಂದರು.
ಅತಿಥಿಗಳಾಗಿ ಆಗಮಿಸಿದ ಕಾ.ನಿ.ಪದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಮಾದ್ಯಮ ಮಾನ್ಯತಾ ಸಮಿತಿ ಸದಸ್ಯರಾದ ಗಣಪತಿ ಗಂಗೂಳಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯುಸಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ರಾಜ್ಯ ಕಾನಿಪದ ಕಾರ್ಯಕಾರಣಿ ಸದಸ್ಯ ಮಹೇಶ ಅಂಗಡಿ, ಜಿಲ್ಲಾ ಕಾನಿಪದ ಅಧ್ಯಕ್ಷ ಆನಂದ ದಲಭಂಜನ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಕಸ್ತೂರಿ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇನ್ನೂ ಜಿಲ್ಲಾಮಟ್ಟದ ಪತ್ರಿಕಾ ದಿನಾಚರಣೆಯ ಅಂಗವಾಗಿ ಕಾರ್ಯನಿರತ ಪತ್ರಕರ್ತರ ಸಂಘದ ದತ್ತಿ ಪ್ರಶಸ್ತಿಗಳಾದ ದಿ.ಶರಣಬಸವರಾಜ ಜಿಗಜಿನ್ನಿ ಅವರ ಸ್ಮರಣಾರ್ಥ ನೀಡುವ ಹಿರಿಯ ಪತ್ರಕರ್ತರ ಪ್ರಶಸ್ತಿಗೆ ಗುಳೇದಗುಡ್ಡದ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ರಾಜನಾಳ, ದಿ.ಶ್ರೀಶೈಲ ಅಂಗಡಿ ಅವರ ಸ್ಮರಣಾರ್ಥ ನೀಡುವ ಗ್ರಾಮೀಣ ಪ್ರಶಸ್ತಿಯನ್ನು ಕಮತಗಿಯ ಪ್ರಕಾಶ ಗುಳೇದಗುಡ್ಡ, ದಿ.ರಾಮ ಮನಗೂಳಿ ಅವರ ಸ್ಮರಣಾರ್ಥ ಕೊಡ ಮಾಡುವ ಉತ್ತಮ ವರದಿಗಾರಿಕೆ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ರವಿರಾಜ್ ಗಲಿಗಲಿ ಹಾಗೂ ದಿ.ಎನ್.ಎಚ್.ಶಾಲಗಾರ ಅವರ ಸ್ಮರಣಾರ್ಥ ಕೊಡಮಾಡುವ ಸಮಾಜವೀರ ಪ್ರಶಸ್ತಿಯನ್ನು ಮುಧೋಳದ ಎಂ.ಎಚ್.ನದಾಫ ಅವರಿಗೆ ನೀಡಲಾಯಿತು. ಪತ್ರಿಕಾ ವಿತರಕರಾದ ಶ್ರೀಶೈಲ ಬುಗಡಿ, ವೆಂಕಟೇಶ ಮಮದಾಪೂರ ಅವರನ್ನು ಸಹ ಸನ್ಮಾನಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande