ಗದಗ, 01 ಆಗಸ್ಟ್ (ಹಿ.ಸ.) :
ಆ್ಯಂಕರ್ : ದೇಹ ಮತ್ತು ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಯಾವುದೇ ಚಟವನ್ನು ವ್ಯಸನ ಎನ್ನಲಾಗುತ್ತದೆ. ಇಂತಹ ವ್ಯಸನಗಳಿಂದ ದೂರವಿರುವ ಮೂಲಕ ಸಮಾಜವನ್ನು ವ್ಯಸನ ಮುಕ್ತವಾಗಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ರೋಣ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ ಕಂದಕೂರ ಹೇಳಿದರು.
ಗದಗ ಜಿಲ್ಲಾಡಳಿತ ಮತ್ತು ರೋಣ ತಾಲೂಕ ಆಡಳಿತದ ಸಂಯುಕ್ತ ಆಶ್ರಯದಲ್ಲಿ, ಡಾ. ಮಹಾಂತ ಶಿವಯೋಗಿಯವರ ಜನ್ಮ ದಿನಾಚರಣೆಯ ಅಂಗವಾಗಿ ತಾಲೂಕ ಮಟ್ಟದ ವ್ಯಸನ ಮುಕ್ತ ದಿನಾಚರಣೆಯನ್ನು ರೋಣ ತಾಲೂಕಿನ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಂದ್ರಶೇಖರ ಬಿ. ಕಂದಕೂರ, ವಿದ್ಯಾರ್ಥಿಗಳಿಗೆ ದುಶ್ಚಟಗಳಿಂದ ದೂರವಿರುವಂತೆ ಸಲಹೆ ನೀಡಿದರು.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಮದ್ಯಪಾನ, ಧೂಮಪಾನ, ಮಾದಕ ದ್ರವ್ಯಗಳ ಸೇವನೆಯಂತಹ ದುಶ್ಚಟಗಳು ದೇಹದ ಜೊತೆಗೆ ಮನಸ್ಸಿನ ಮೇಲೂ ದೀರ್ಘಕಾಲೀನ ದುಷ್ಪರಿಣಾಮ ಬೀರುತ್ತವೆ. ಇವುಗಳಿಂದ ದೂರವಿರುವುದರ ಜೊತೆಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಯುವಕರು ಭಾಗಿಯಾಗಬೇಕು, ಎಂದು ಅವರು ಒತ್ತಿ ಹೇಳಿದರು.
ಸಹಾಯಕ ಅರೋಗ್ಯ ಅಧಿಕಾರಿ ಕೆ.ಎ ಹಾದಿಮನಿ, ಮಾತನಾಡಿ ವ್ಯಸನದಿಂದ ಉಂಟಾಗುವ ಕಾಯಿಲೆಗಳು, ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದ ಅವರು. ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯದ ಮಹತ್ವ ಮತ್ತು ವ್ಯಸನ ಮುಕ್ತ ಜೀವನದಿಂದ ಆಗುವ ಲಾಭಗಳ ಬಗ್ಗೆ ತಿಳಿಯಪಡಿಸಲಾಯಿತು. ವ್ಯಸನ ಮುಕ್ತ ಸಮಾಜವು ಕೇವಲ ಕನಸಲ್ಲ, ಅದನ್ನು ನಾವೆಲ್ಲರೂ ಒಗ್ಗಟ್ಟಿನಿಂದ ಸಾಧಿಸಬಹುದು. ಇದಕ್ಕಾಗಿ ಯುವಕರು ಮುಂಚೂಣಿಯಲ್ಲಿ ನಿಲ್ಲಬೇಕು, ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕ ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಡಾ. ಬಸವರಾಜ ಭಜಂತ್ರಿ, ಸಹಾಯಕ ಅರೋಗ್ಯ ಅಧಿಕಾರಿ ಕೆ.ಎ ಹಾದಿಮನಿ, ಉಪ ತಹಶಿಲ್ದಾರಾದ ಗಣೇಶ ಕೊಪ್ಪದ, ತಾಲೂಕ ಸಮಜಾ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಗೀತಾ ಆಲೂರ ಸೇರಿದಂತೆ ಹಲವು ಗಣ್ಯರು ಶಾಲಾ ಶಿಕ್ಷಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP