ರಾಯಚೂರು, 09 ಜುಲೈ (ಹಿ.ಸ.) :
ಆ್ಯಂಕರ್ : ರಾಯಚೂರು ಜಿಲ್ಲಾ ಪಂಚಾಯತನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಜುಲೈ 9ರಂದು ಅಧಿಕಾರ ಸ್ವೀಕರಿಸಿದ ಈಶ್ವರ ಕುಮಾರ ಕಾಂದೂ ಅವರು ಮೊದಲ ದಿನವೇ ಜಿಲ್ಲಾ ಪಂಚಾಯತ್ ಅಧಿಕಾರಿ ಮತ್ತು ಸಿಬ್ಬಂದಿಗೆ ಶಿಸ್ತು ಮತ್ತು ಸ್ವಚ್ಛತೆಯ ಬಗ್ಗೆ ಪಾಠ ಮಾಡಿದ್ದಾರೆ.
ಜಿಲ್ಲಾ ಪಂಚಾಯತನ ಆಡಳಿತ ಶಾಖೆ, ಲೆಕ್ಕಪತ್ರ ಶಾಖೆ, ಲೆಕ್ಕ ಶಾಖೆ ಸೇರಿದಂತೆ ವಿವಿಧೆಡೆ ಖುದ್ದು ತೆರಳಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸ್ವತಃ ಪರಿಚಯಿಸಿಕೊಂಡರು. ಹೆಸರು ಮತ್ತು ಕಾರ್ಯದ ಬಗ್ಗೆ ಕೇಳಿ ಬೇರೆ ಬೇರೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯ ನಿರ್ವಹಣೆಯ ಬಗ್ಗೆ ಸಿಇಓ ಅವರು ವಿಚಾರಿಸಿದರು.
ವಾರಕ್ಕೊಂದು ಬಾರಿ ಸ್ವಚ್ಛತಾ ಕಾರ್ಯ: ಜಿಲ್ಲಾ ಪಂಚಾಯತನ ಬೇರೆ ಬೇರೆ ವಿಭಾಗಗಳು, ವಿಸಿ ಹಾಲ್, ಎನ್‍ಐಸಿ ಹಾಲ್ ಮತ್ತು ಸಭಾಂಗಣದಲ್ಲಿ ಸಂಚರಿಸುವ ವೇಳೆ ಸಿಇಓ ಅವರು ಕಚೇರಿಯನ್ನು ಮತ್ತು ಕಡತಗಳನ್ನು ಶಿಸ್ತುಬದ್ಧವಾಗಿಡುವಂತೆ ಸೂಚನೆ ನೀಡಿದರು. ವಾರಕ್ಕೊಂದು ಬಾರಿ ಸ್ವಚ್ಛತಾ ದಿನ ಎಂದು ನಿಗದಿಪಡಿಸಿ ಎಲ್ಲಿಯೂ ಧೂಳು ಕಾಣದಂತೆ ನಿಯಮಿತವಾಗಿ ಸ್ವಚ್ಛತಾ ಕಾರ್ಯ ನಡೆಸಬೇಕು ಎಂದು ಸಿಇಓ ಅವರು ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಿದರು.
ಕಡತಗಳ ನಿರ್ವಹಣೆ: ಕಚೇರಿಯ ಎಲ್ಲ ಶಾಖೆಗಳಲ್ಲಿ ಸ್ವಚ್ಛತೆ ಜತೆಗೆ ಕಡತಗಳನ್ನು ಶಿಸ್ತುಬದ್ಧವಾಗಿಡಬೇಕು. ತಾವು ಮರಳಿ ಭೇಟಿ ನೀಡಿದಾಗ ಎಲ್ಲವೂ ಸರಿಯಾಗಬೇಕು ಎಂದು ಸಿಇಓ ಅವರು ಬೇರೆ ಬೇರೆ ಶಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಾರದ ಗಡುವು ವಿದಿಸಿದರು. ಲೆಕ್ಕಪತ್ರ ಶಾಖೆ ಎದುರುಗಡೆ ಹರಡಿದ ಕಡತಗಳ ಗಂಟನ್ನು ಸರಿಯಾಗಿ ರಕ್ಷಣೆ ಮಾಡಲು ನಿರ್ದೇಶನ ನೀಡಿದರು.
ಪ್ರತಿ ವಾರ ವಿ.ಸಿ ನಡೆಸಿ: ಪ್ರತಿಯೊಂದು ಕಾರ್ಯವು ಸುಗಮವಾಗಿ ನಡೆಯುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ವಾರಕ್ಕೊಮ್ಮೆ ವಿಡಿಯೋ ಸಂವಾದ ನಡೆಸಿ ಕಾರ್ಯನಿರ್ಹಣೆಯ ಬಗ್ಗೆ ಅವಲೋಕನ ಮಾಡಬೇಕು. ಈ ಬಗ್ಗೆ ಸೂಕ್ತ ಮೇಲ್ವಿಚಾರಣೆ ಮಾಡುವಂತೆ ಜಿಪಂ ಉಪ ಕಾರ್ಯದರ್ಶಿಗಳು ಮತ್ತು ಮುಖ್ಯ ಯೋಜನಾಧಿಕಾರಿಗಳಿಗೆ ಸಿಇಓ ಅವರು ನಿರ್ದೇಶನ ನೀಡಿದರು.
ಸಾರ್ವಜನಿಕರಿಗೆ ಸ್ಪಂದಿಸಿ: ಬೇರೆ ಬೇರೆ ಅಹವಾಲುಗಳನ್ನು ಹೊತ್ತು ಕಚೇರಿಗೆ ಬರುವ ಸಾರ್ವಜನಿಕರ ಅಹವಾಲುಗಳಿಗೆ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಪಂದಿಸಬೇಕು. ಜಿಲ್ಲೆಯಲ್ಲಿನ ಎಲ್ಲ ಗ್ರಂಥಾಲಯಗಳಿಗೆ ಮೇಲ್ವಿಚಾರಕರ ನೇಮಕ ಸೇರಿದಂತೆ ಯಾವುದೇ ರೀತಿಯ ಅಧಿಕಾರಿ ಸಿಬ್ಬಂದಿ ನೇಮಕ ಕಾರ್ಯವನ್ನು ತ್ವರಿತಗತಿಯಲ್ಲಿ ನಡೆಸಬೇಕು. ವಿಶೇಷವಾಗಿ ಹಿರಿಯ ನಾಗರಿಕರನ್ನು ಕಾಯಿಸದೇ ಅವರಿಗೆ ಸಕಾಲಕ್ಕೆ ಸ್ಪಂದನೆ ನೀಡಬೇಕು ಎಂದು ಸಿಇಓ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮಾಹಿತಿ ಹಕ್ಕು ಕಾಯಿದೆ ಅರ್ಜಿಗಳಿಗೆ ಸಹ ಸಕಾಲಕ್ಕೆ ಮಾಹಿತಿ ಒದಗಿಸಬೇಕು ಎಂದು ಸೂಚನೆ ನೀಡಿದರು.
ಈ ವೇಳೆ ಜಿಲ್ಲಾ ಪಂಚಾಯತನ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ, ಮುಖ್ಯ ಯೋಜನಾಧಿಕಾರಿ ಡಾ.ಟಿ ರೋಣಿ, ಆಡಳಿತದ ಸಹಾಯಕ ನಿರ್ದೇಶಕರಾದ ಕೆ ಸೋಮಶೇಖರ, ಮುಖ್ಯ ಲೆಕ್ಕಾಧಿಕಾರಿ ವಿಜಯಶಂಕರ, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಕನಾನ್ ಪ್ರಭು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ನಾಗೇಶ್, ವಾರ್ತಾ ಇಲಾಖೆಯ ಗವಿಸಿದ್ದಪ್ಪ ಹೊಸಮನಿ ಸೇರಿದಂತೆ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್